ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಗಂಟೆ ವಿದ್ಯುತ್‌ ಪೂರೈಕೆಗೆ ಆಗ್ರಹ

ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
Last Updated 18 ಫೆಬ್ರುವರಿ 2020, 9:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ‘ಬೆಸ್ಕಾಂ’ ಮುಖ್ಯ ಎಂಜಿನಿಯರ್‌ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತುರುವನೂರು ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಎದುರು ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಿದ್ಯುತ್‌ ಅನಿಯಮಿತ ಕಡಿತ, ಮಾರ್ಗ ಬದಲಾವಣೆ, ಕಾಮಗಾರಿ ವಿಳಂಬ, ವಿದ್ಯುತ್‌ ಪರಿವರ್ತಕದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಕೊಡಗವಳ್ಳಿ, ಕ್ಯಾಸಾಪುರ, ಬಳ್ಳೇಕಟ್ಟೆ, ಬೀರಾವರ, ಸಾದರಹಳ್ಳಿ, ಲಕ್ಷ್ಮೀಸಾಗರ ಸೇರಿ ಹಲವು ಗ್ರಾಮಗಳಿಗೆ ನಿತ್ಯ ಐದು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಪಂಪ್‌ಸೆಟ್‌ ನೀರಾವರಿ ನಂಬಿಕೊಂಡು ಕೃಷಿ ಮಾಡುತ್ತಿರುವ ರೈತರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ. ಸರ್ಕಾರದ ನಿರ್ದೇಶನದ ಪ್ರಕಾರ ಹಗಲು ನಾಲ್ಕು ಗಂಟೆ ಮತ್ತು ರಾತ್ರಿ ಮೂರು ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಪಟ್ಟುಹಿಡಿದರು.

ಬೇಸಿಗೆಗೂ ಮುನ್ನವೇ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಜಾರಿಯಲ್ಲಿದೆ. ವಿದ್ಯುತ್ ಯಾವ ಸಮಯಕ್ಕೆ ಸರಬರಾಜು ಮಾಡಲಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಜಮೀನಿಗೆ ನೀರು ಪೂರೈಕೆ ಮಾಡಲು ವಿದ್ಯುತ್‌ ಕಾಯಬೇಕಾಗಿದೆ. ಈ ಬಗ್ಗೆ ವಿಚಾರಿಸಲು ದೂರವಾಣಿ ಕರೆ ಮಾಡಿದರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆರೋ‍ಪಿಸಿದರು.

ಹಲವು ವರ್ಷಗಳಿಂದ ಬರ ಪರಿಸ್ಥಿತಿ ಅನುಭವಿಸಿದ್ದ ಚಿತ್ರದುರ್ಗ ರೈತರು ಹಿಂಗಾರು ಮಳೆಯಿಂದ ಹರ್ಷಗೊಂಡು ಬೇಸಿಗೆ ಬೆಳೆ ಹಾಕಿದ್ದಾರೆ. ಮಳೆ ಉತ್ತಮವಾಗಿ ಸುರಿದ ಪರಿಣಾಮ ಅಂತರ್ಜಲಮಟ್ಟವೂ ಹೆಚ್ಚಳವಾಗಿದೆ. ಆದರೆ, ಅನಿಯಮಿತ ವಿದ್ಯುತ್‌ ಪೂರೈಕೆ ರೈತರನ್ನು ಹೈರಾಣ ಮಾಡಿದೆ. ಬೇಸಿಗೆ ಬೆಳೆಯಾದರೂ ಕೈಹಿಡಿಯಬಹುದೇ ಎಂಬ ರೈತರ ನಿರೀಕ್ಷೆ ಹುಸಿಯಾಗುತ್ತಿದೆ ಎಂದು ಕಿಡಿಕಾರಿದರು.

ವಿದ್ಯುತ್‌ ಪರಿವರ್ತಕದ ಬದಲಾವಣೆ, ವಿದ್ಯುತ್‌ ಮಾರ್ಗದ ದುರಸ್ತಿಗೆ ಸಕಾಲ ಯೋಜನೆಯಡಿ ಕಾಲಮಿತಿ ನಿಗದಿಪಡಿಸಲಾಗಿದೆ. ಆದರೆ, ‘ಬೆಸ್ಕಾಂ’ ಸಕಾಲವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. 72 ಗಂಟೆಯಲ್ಲಿ ವಿದ್ಯುತ್‌ ಪರಿವರ್ತಕ ಬದಲಾವಣೆ ಮಾಡಬೇಕು ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ತಿಂಗಳು ಕಾಲ ವಿದ್ಯುತ್‌ ಪರಿವರ್ತಕಕ್ಕೆ ಕಾಯುವ ಪರಿಸ್ಥಿತಿ ಇದೆ. ಈ ಸಮಯದಲ್ಲಿ ಬೆಳೆಗೆ ನೀರು ಒದಗಿಸಲು ಸಾಧ್ಯವಾಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ–ಸಕ್ರಮ ಯೋಜನೆಯಡಿ ವಿದ್ಯುತ್‌ ಪರಿವರ್ತಕ ಒದಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಪಂಪ್‌ಸೆಟ್‌ ಹಾಗೂ ವಿದ್ಯುತ್‌ ಪರಿವರ್ತಕ ಬಹುಬೇಗ ಹಾಳಾಗುವುದನ್ನು ತಪ್ಪಿಸಲು ಸರಿಯಾದ ವೋಲ್ಟೇಜ್‌ನಲ್ಲಿ ನಿರ್ವಹಣೆ ಮಾಡಬೇಕು. ಲೈನ್‌ಮನ್‌ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ರೈತರೊಂದಿಗೆ ತೋರುತ್ತಿರುವ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸುರೇಶ್‌ ಬಾಬು, ಮುಖಂಡರಾದ ಸಿ.ಆರ್‌.ತಿಮ್ಮಣ್ಣ, ಟಿ.ಲಕ್ಷ್ಮೀನಗರಸಿಂಹಸ್ವಾಮಿ, ರವಿಕುಮಾರ್‌, ಈಶ್ವರಸ್ವಾಮಿ, ಡಿ.ನಾಗರಾಜ ಇದ್ದರು.

‘ವಿದ್ಯುತ್‌ ಪೂರೈಕೆ ಸಮಸ್ಯೆ’

ರೈತರ ಅಗತ್ಯ ಪೂರೈಸುವಷ್ಟು ವಿದ್ಯುತ್‌ ‘ಬೆಸ್ಕಾಂ’ ಬಳಿ ಇದೆ. ಆದರೆ, ವಿದ್ಯುತ್‌ ಮಾರ್ಗದ ಸಾಮರ್ಥ್ಯ ಕಡಿಮೆ ಇರುವ ಪರಿಣಾಮ ಬೇಡಿಕೆಷ್ಟು ವಿದ್ಯುತ್‌ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ‘ಬೆಸ್ಕಾಂ’ ಮುಖ್ಯ ಎಂಜಿನಿಯರ್‌ ಬಿ.ಗುರುಮೂರ್ತಿ ತಿಳಿಸಿದರು.

‘ಹಿರಿಯೂರು ಹೊರತುಪಡಿಸಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ವಿದ್ಯುತ್‌ ಪೂರೈಕೆ ಮಾಡುವ ಮಾರ್ಗಗಳ ಸಾಮರ್ಥ್ಯ ಕಡಿಮೆ ಇದೆ. 30ರಿಂದ 35 ಮೆಗಾವ್ಯಾಟ್‌ ವಿದ್ಯುತ್‌ ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದ ಮಾರ್ಗದಲ್ಲಿ 38 ಮೆಗಾವ್ಯಾಟ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ವಿದ್ಯುತ್‌ ಮಾರ್ಗ ನಿರ್ಮಾಣ ಕೂಡ ಸವಾಲಾಗಿ ಪರಿಣಮಿಸಿದೆ. 24 ಗಂಟೆ ವಿದ್ಯುತ್‌ ಕೇಳುವ ರೈತರು ಕೂಡ ತಮ್ಮ ಜಮೀನಿನಲ್ಲಿ ಕಂಬ ಹಾಕಬೇಡಿ ಎನ್ನುತ್ತಾರೆ. ಹೊಳಲ್ಕೆರೆ ತಾಲ್ಲೂಕಿನ ಮಾರ್ಗವೊಂದರ ನಿರ್ಮಾಣಕ್ಕೆ ಹತ್ತು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT