ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ನಿವೃತ್ತಿ ವೇತನ ನೀಡುವಂತೆ ಆಗ್ರಹ

ಬೇಡಿಕೆ ಈಡೇರಿಕೆಗೆ ಅಕ್ಷರ ದಾಸೋಹ ಸಿಬ್ಬಂದಿ ಪ್ರತಿಭಟನೆ
Last Updated 22 ಫೆಬ್ರುವರಿ 2023, 5:47 IST
ಅಕ್ಷರ ಗಾತ್ರ

ಮೊಳಕಾಲ್ಮುರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ತಾಲ್ಲೂಕಿನ ಅಕ್ಷರ ದಾಸೋಹ (ಬಿಸಿಯೂಟ) ಸಿಬ್ಬಂದಿ ತಾಲ್ಲೂಕು ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಬ್ಬಂದಿಯು ಕೆಇಬಿ ವೃತ್ತದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮುಖ್ಯಬೀದಿಗಳಲ್ಲಿ ಸಂಚರಿಸಿ ತಾಲ್ಲೂಕು ಪಂಚಾಯಿತಿ ಆವರಣಕ್ಕೆ ಆಗಮಿಸಿದರು.

ಸರ್ಕಾರದ ಆದೇಶದಂತೆ 60 ವರ್ಷ ತುಂಬಿದ ಅಕ್ಷರ ದಾಹೋಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಸದೃಢವಾಗಿದ್ದಾಗ 20 ವರ್ಷಗಳಿಂದ ಕೆಲಸ ಮಾಡಿರುವ ಸಿಬ್ಬಂದಿಯನ್ನು ಏಕಾಏಕಿ ತೆಗೆದು ಹಾಕಲಾಗುತ್ತಿದೆ. ಕಳೆದ ವರ್ಷ 6 ಸಾವಿರ ಮಂದಿಯನ್ನು ತೆಗೆಯಲಾಗಿದ್ದು, ಈ ವರ್ಷ ಜೂನ್‌ನಲ್ಲಿ 6,500 ಮಂದಿಯನ್ನು ತೆಗೆಯತ್ತಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಿ ನಿವೃತ್ತಿಗೊಳಿಸಬೇಕು. ಬಜೆಟ್‌ನಲ್ಲಿ ಹೆಚ್ಚುವರಿ ಮಾಡಿರುವ ₹ 1,000 ವನ್ನು ಜನವರಿಯಿಂದ ನೀಡಬೇಕು. ನಿವೃತ್ತಿಗೊಳಿಸಿದ ಸಿಬ್ಬಂದಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಪ್ರತಿ ಶಾಲೆಗೆ ಕಡ್ಡಾಯವಾಗಿ ಇಬ್ಬರು ಸಿಬ್ಬಂದಿಯನ್ನು ನೇಮಿಸಬೇಕು. ಅಡುಗೆ ಸಾಮಗ್ರಿ ನಿರ್ವಹಣೆ ಹೊಣೆಯನ್ನು ಎಸ್‌ಡಿಎಂಸಿಗೆ ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದರು.

ಸಿಐಟಿಯು ಜಿಲ್ಲಾ ಸಂಚಾಲಕ ಡಿ.ಎಂ. ಮಲಿಯಪ್ಪ, ಬಿಸಿಯೂಟ ಸಿಬ್ಬಂದಿ ಸಂಘದ ಎಚ್. ಶಿವಮ್ಮ, ಗೌರಮ್ಮ, ಪಾರ್ವತಿ, ನಾಗೇಶ್, ಭಾಗ್ಯಮ್ಮ, ಮಂಜುಳಾ, ತಿಪ್ಪೇಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT