ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜುಗಳತ್ತ ವಿದ್ಯಾರ್ಥಿಗಳ ಚಿತ್ತ

ಪ್ರಥಮ ಪಿಯು ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ – ಶೇ 70 ರಷ್ಟು ದಾಖಲಾತಿ ಪೂರ್ಣ
Published 8 ಜೂನ್ 2023, 16:00 IST
Last Updated 8 ಜೂನ್ 2023, 16:00 IST
ಅಕ್ಷರ ಗಾತ್ರ

ಕೆ.ಪಿ.ಓಂಕಾರಮೂರ್ತಿ

ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಚಿತ್ರದುರ್ಗದಲ್ಲಿ ಪದವಿ ಪೂರ್ವ ಕಾಲೇಜುಗಳ ‍ಪ್ರವೇಶಾತಿಗೆ ಬೇಡಿಕೆ ಹೆಚ್ಚಾಗಿದೆ. ಕಾಲೇಜುಗಳ ಆವರಣ ವಿದ್ಯಾರ್ಥಿಗಳಿಂದ ತುಂಬಿವೆ.

ಜಿಲ್ಲೆಯಲ್ಲಿ ಪ್ರಥಮ ವರ್ಷದ ಪದವಿ ಪೂರ್ವ ಶಿಕ್ಷಣಕ್ಕೆ ದಾಖಲಾತಿ ಆರಂಭವಾಗಿದೆ. ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಮೇ 22 ರಿಂದ ಪ್ರವೇಶಾತಿ ಆರಂಭವಾಗಿದ್ದು ಜೂನ್‌ 15 ರವರೆಗೆ ದಾಖಲಾತಿ ನಡೆಯಲಿದೆ.

ಪ್ರವೇಶಾತಿ ಆರಂಭವಾಗಿ 18 ದಿನಕ್ಕೆ ಶೇ 70 ರಷ್ಟು ದಾಖಲಾತಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ವೃತ್ತಿಪರ ಶಿಕ್ಷಣದತ್ತ ಚಿತ್ತ ಹರಿಸಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಮೊದಲ ಹಂತದಲ್ಲಿ ಕಾಲೇಜಿನ ಪ್ರವೇಶಾತಿ ತಂಡ ಕೌನ್ಸೆಲಿಂಗ್‌ ನಡೆಸಿ ದಾಖಲಾತಿ ನೀಡುತ್ತಿದೆ. ಡಿಪ್ಲೊಮಾ ಮೆಕಾನಿಕಲ್‌ ಸೀಟುಗಳು ಕೂಡ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಭರ್ತಿಯಾಗಿವೆ. ಬೇಡಿಕೆ ಕೂಡ ಹೆಚ್ಚುತ್ತಿದೆ.

ಗ್ರಾಮೀಣ ಭಾಗದ ಪಾಲಕರ ಆಶಾಕಿರಣವಾಗಿರುವ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ಈ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಾಲೇಜು ಶೇ 65.36 ರಷ್ಟು ಫಲಿತಾಂಶ ದಾಖಲಿಸಿದೆ. 25 ಅತ್ಯುನ್ನತ ಶ್ರೇಣಿ, 187 ಪ್ರಥಮ ಹಾಗೂ 242 ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಈ ಬಾರಿ ವಿಜ್ಞಾನ,ಕಲಾ ಹಾಗೂ ವಾಣಿಜ್ಯ ವಿಷಯಕ್ಕೆ 900 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಏರಿಕೆಯಾಗುತ್ತಿದೆ. ಕಲಾ ಮತ್ತು ವಿಜ್ಞಾನ ವಿಷಯಕ್ಕಿಂತ ವಾಣಿಜ್ಯ ವಿಷಯ ಬಯಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣಕ್ಕೆ ಪ್ರವೇಶಾತಿ ತಂಡ ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಅಂಕ ಪರಿಶೀಲಿಸಿ ಪಾಲಕರ ಸಮ್ಮುಖದಲ್ಲಿ ಕೆಲ ಹೊತ್ತು ಚರ್ಚೆ ನಡೆಸುತ್ತಿದೆ. ಬಳಿಕ ವಿದ್ಯಾರ್ಥಿನಿಯರ ಆಸಕ್ತಿ ಗಮನಿಸಿ ಪ್ರವೇಶ ನೀಡುತ್ತಿದೆ.

ವಿದ್ಯಾರ್ಥಿ ನಿಲಯದ ಸೌಲಭ್ಯದ ಕಾರಣಕ್ಕೂ ಪ್ರವೇಶ ಪಡೆಯುವವರ ಪ್ರಮಾಣ ಹೆಚ್ಚಿದೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷ ಪೂರ್ಣಗೊಳಿಸಿದವರೂ ದ್ವಿತೀಯ ವರ್ಷಕ್ಕೆ ದಾಖಲಾತಿ ಪಡೆಯುತ್ತಿರುವುದು ವಿಶೇಷ.

ಕಾಲೇಜಿನ ಮೂಲ ಕಟ್ಟಡವನ್ನು ಹೊರತುಪಡಿಸಿ, ಆವರಣದಲ್ಲಿ ನಾಲ್ಕು ಹೊಸ ಕಟ್ಟಡಗಳನ್ನು ವಿವಿಧ ಅನುದಾನದಲ್ಲಿ ನಿರ್ಮಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಪ್ರವೇಶಾತಿ ಶುಲ್ಕದ ಜತೆ ಕಾಲೇಜು ಅಭಿವೃದ್ಧಿ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಪಠ್ಯಪುಸ್ತಕಗಳು ಬಂದಿದ್ದು ಕಾಲೇಜು ಪ್ರಾರಂಭದ ದಿನ ನೋಟ್‌ ಬುಕ್‌ ಜತೆ ಪಠ್ಯಪುಸ್ತಕ ವಿತರಣೆಗೆ ಕಾಲೇಜುಗಳಲ್ಲಿ ಸಿದ್ಧತೆ ನಡೆಸಿದ್ದಾರೆ.

ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲೂ ದಾಖಲಾತಿ ವೇಗ ಪಡೆದಿದೆ. ಕಲಾ ವಿಭಾಗಕ್ಕೆ 280, ವಿಜ್ಞಾನ ವಿಭಾಗಕ್ಕೆ 190, ವಾಣಿಜ್ಯ ವಿಭಾಗಕ್ಕೆ 140 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡೂ ಕಾಲೇಜುಗಳಲ್ಲಿ ಈ ಬಾರಿ ತಲಾ 1,500 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಕಾಲೇಜು ಸಿಬ್ಬಂದಿ.

ಶುಲ್ಕು ಪಾವತಿಸುವ ಪ್ರಾಂಶುಪಾಲರು

ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿನಿಯರ ಪ್ರವೇಶ ಶುಲ್ಕವನ್ನು ಕಾಲೇಜು ಪ್ರಾಂಶುಪಾಲರಾದ ಎಚ್‌.ನಾಗರಾಜ್‌ ಪಾವತಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 95ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರ ಶುಲ್ಕವನ್ನು ಸ್ವತಃ ಪಾವತಿಸುತ್ತಿದ್ದಾರೆ. ಜತೆಗೆ ದಾನಿಗಳ ನೆರವು ಪಡೆದು ಕಾಲೇಜಿಗೆ ಡೆಸ್ಕ್‌ ಫ್ಯಾನ್‌ ಸೌಲಭ್ಯ ಕಲ್ಪಿಸಿದ್ದಾರೆ. 

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಬಂದ ಬಳಿಕವೂ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶವಿದೆ. ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT