ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರಕ್ಕೆ ಪದವಿ ಪೂರ್ವ ಕಾಲೇಜು

ಶಾಸಕ ಎಂ.ಚಂದ್ರಪ್ಪ ಭರವಸೆ
Last Updated 25 ಜೂನ್ 2018, 17:12 IST
ಅಕ್ಷರ ಗಾತ್ರ

ಭರಮಸಾಗರ: ಮುಂಬರುವ ದಿನಗಳಲ್ಲಿ ಭರಮಸಾಗರದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಶ್ರಮಿಸುವುದಾಗಿ ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಅವರನ್ನು ಶಾಲೆಗೆ ಕರೆತರುವುದೇ ದೊಡ್ಡ ಆಂದೋಲನವಾಗಿದೆ. ಇಂತಹ ಪರೀಸ್ಥಿತಿಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಗ್ರಾಮಸ್ಥರು ಹೋರಾಟ ಮಾಡಿದ್ದರಿಂದ ಶಾಲೆ ಚಾಲನೆಗೊಂಡಿದೆ. ಹಿಂದೆಯೇ ಇಲ್ಲಿ ಪ್ರೌಢಶಾಲೆ ಆರಂಭವಾಗಬೇಕಿತ್ತು. ಆದರೆ ಶಾಲೆ ವಿಳಂಬವಾದರೂ ಹೆಚ್ಚಿನ ಮಕ್ಕಳು ಪ್ರವೇಶ ಬಯಸಿ ಶಾಲೆಗೆ ಬರುತ್ತಿದ್ದಾರೆ. ತಾರತಮ್ಯ ಮಾಡದೇ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಬೇಕು’ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

‘ಜಿಲ್ಲೆಯಲ್ಲಿಯೇ ಮೊದಲ ಐಟಿಐ ಕಾಲೇಜನ್ನು ನನ್ನ ಅವಧಿಯಲ್ಲಿ ಆರಂಭಿಸಲಾಯಿತು. ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆರಂಭಿಸಿ ಹೋಬಳಿಯಾದ್ಯಂತ ಮಕ್ಕಳಿಗೆ ಅನುಕೂಲ ಕಲ್ಪಿಸಲಾಯಿತು. ಈಗ ಸರ್ಕಾರಿ ಪದವಿಪೂರ್ವ ಕಾಲೇಜು ಅಗತ್ಯವಿದೆ’ ಎಂದರು.

‘ಶತಮಾನೋತ್ಸವದ ಸಂಭ್ರಮದಲ್ಲಿರುವ ಈ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಶಾಲೆಗೆ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ನನ್ನ ಮೇಲಿದ್ದು, ಅದಕ್ಕಾಗಿ ಕ್ರಮ ವಹಿಸಲಾಗುವುದು ಎಂದರು.

ಕೋಗುಂಡೆ ಮಂಜುನಾಥ್ ಹಾಗೂ ಷಮೀಂಪಾಷಾ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ. ಶರಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್. ಕಲ್ಲೇಶ್, ಮಾಜಿ ಅಧ್ಯಕ್ಷ ಎನ್.ಟಿ.ರಾಜಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಸಾಮಿಲ್ ಶಿವಣ್ಣ, ನಾರಾಯಣರಾವ್, ಸಿದ್ದಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯ ಸಕ್ಷೇನ್ ಪಾಷಾ, ಚಂದ್ರು, ನಾಡಿಗೇರ್, ನವೋದಯ ಕುಮಾರಸ್ವಾಮಿ, ಅಕ್ಕಮ್ಮ, ಅನುಪಮ, ಚನ್ನಮ್ಮ, ರವಿ, ಕೆ.ಜೆ. ರುದ್ರೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ನರೇಂದ್ರಕುಮಾರ್, ಲೋಲಾಕ್ಷಮ್ಮ, ರಾಜು, ಸಿ.ಟಿ.ರುದ್ರೇಶ್, ಶಾಲಾ ಸಂಪನ್ಮೂಲ ಶಿಕ್ಷಕಿ ರಾಜೇಶ್ವರಿ, ಮುಖ್ಯ ಶಿಕ್ಷಕ ಡಿ.ರಮೇಶ್, ಗ್ರಾಮೀಣ ಸಿರಿ ಬಳಗದ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು. ಶಿಕ್ಷಕ ರಾಜೂನಾಯ್ಕ್ ನಿರೂಪಿಸಿದರು.

ಭರಮಸಾಗರ ನನಗೆ ರಾಜಕೀಯ ಜೀವಕೊಟ್ಟ ಸ್ಥಳ. ಇದನ್ನು ಅಭಿವೃದ್ಧಿಪಡಿಸುವುದರ ಜತೆಗೆ ಶೈಕ್ಷಣಿಕ ಕೇಂದ್ರವನ್ನಾಗಿಸಬೇಕೆಂಬುದು ನನ್ನ ಉದ್ದೇಶ
- ಎಂ.ಚಂದ್ರಪ್ಪ, ಶಾಸಕ

ಪ್ರತಿ ದಿವಸ ನೂರಾರು ಮಕ್ಕಳು ಪಿಯುಸಿ ವಿಜ್ಞಾನ ವಿಷಯ ಕಲಿಯಲು ದಾವಣಗೆರೆ, ಸಿರಿಗೆರೆ, ಚಿತ್ರದುರ್ಗಕ್ಕೆ ಹೋಗಬೇಕಾಗಿದೆ. ಇಲ್ಲಿಯೇ ಪದವಿಪೂರ್ವ ಕಾಲೇಜು ಮಂಜೂರು ಮಾಡಿದರೆ ಅನುಕೂಲ
- ಸಿ.ಟಿ.ಮಹಾಂತೇಶ್, ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT