ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಾಂಪುರ: ಮುಚ್ಚಿರುವ ಶಾಲೆ ತೆರೆಯುವ ನಿರೀಕ್ಷೆಯಲ್ಲಿ..

ಗವಿರಂಗಾಪುರಕ್ಕೆ ತೆರಳುವ ವಿದ್ಯಾರ್ಥಿಗಳು
ರವಿಕುಮಾರ್ ವಿ.
Published 29 ಮೇ 2024, 6:17 IST
Last Updated 29 ಮೇ 2024, 6:17 IST
ಅಕ್ಷರ ಗಾತ್ರ

ಶ್ರೀರಾಂಪುರ: ಜಿಲ್ಲೆಯ ಗಡಿಗ್ರಾಮ ಬೊಮ್ಮನಪಾಳ್ಯದಲ್ಲಿ ಶಾಲೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆಯಲು ನಿತ್ಯ ಎರಡೂವರೆ ಕಿ.ಮೀ. ದೂರದಲ್ಲಿರುವ ಗವಿರಂಗಾಪುರ ಗ್ರಾಮಕ್ಕೆ ನಡೆದುಕೊಂಡು ಹೋಗಿ ಬರಬೇಕಾದ ಸ್ಥಿತಿ ಇದೆ.

ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೊಮ್ಮನಪಾಳ್ಯ ಹಾಗೂ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಲಂಬಾಣಿ ತಾಂಡಾದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಗ್ರಾಮಕ್ಕೆ ಸಮೀಪದಲ್ಲಿ ಹೊನ್ನತ್ತಿಕಲ್ಲು ಗುಡ್ಡವಿದ್ದು, ಅದು ಕರಡಿಗಳ ವಾಸ ಸ್ಥಳವಾಗಿದೆ. ಈ ಗ್ರಾಮಕ್ಕೆ ಬಸ್‌ ಸೌಲಭ್ಯ ಇಲ್ಲ. ಮಕ್ಕಳು ನಿತ್ಯ ಜೀವಭಯದಲ್ಲಿಯೇ ಓಡಾಡುವಂತಾಗಿದೆ. ಪ್ರತಿ ಶನಿವಾರ ಬೆಳಿಗ್ಗೆ ತರಗತಿ ನಡೆಯುವುದರಿಂದ ಮಕ್ಕಳು ಶಾಲೆಗೆ ಗೈರಾಗುವ ಅನಿವಾರ್ಯತೆ ಇದೆ.

ಗ್ರಾಮದಲ್ಲಿ 1998ರಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿತ್ತು. 2004-05ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಕೊರತೆ ಕಾರಣ ಶಾಲೆಯನ್ನು ಮುಚ್ಚಲಾಯಿತು. ಪ್ರಸ್ತುತ ಗ್ರಾಮದಿಂದ 1 ರಿಂದ 5ನೇ ತರಗತಿವರೆಗಿನ 6 ವಿದ್ಯಾರ್ಥಿಗಳು ಪಕ್ಕದ ಗವಿರಂಗಾಪುರ ಗ್ರಾಮದಲ್ಲಿ ಓದುತ್ತಿದ್ದಾರೆ. ಚಿಕ್ಕ ಮಕ್ಕಳು ಎರಡೂವರೆ ಕಿ.ಮೀ. ದೂರದ ಶಾಲೆಗೆ ನೆಡೆದುಕೊಂಡು ಹೋಗಿ ಬರುವುದು ಕಷ್ಟ ಎಂದು ಲಂಬಾಣಿ ತಾಂಡಾದವರು ತಮ್ಮ ಮಕ್ಕಳನ್ನು ಸಂಬಂಧಿಕರ ಊರುಗಳಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ಇನ್ನೂ ಕೆಲವರು ಶ್ರೀರಾಂಪುರ ಸೇರಿ ಬೇರೆ ಬೇರೆ ಕಡೆಯ ಖಾಸಗಿ ಶಾಲೆಗಳಿಗೆ ದಾಖಲಿಸಿದ್ದಾರೆ.

‘ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ಮಗುವನ್ನು ದಾಖಲು ಮಾಡಿಸಿದ್ದೇನೆ. ಗ್ರಾಮದಲ್ಲಿ ಶಾಲೆಯನ್ನು ಪುನರ್‌ ಆರಂಭಿಸಿದಲ್ಲಿ ನಮ್ಮ ಮಗುವನ್ನು ಗ್ರಾಮದ ಶಾಲೆಗೇ ಸೇರಿಸುತ್ತೇನೆ’ ಎಂದು ಗ್ರಾಮದ ಮಂಜಪ್ಪ ತಿಳಿಸಿದರು.

ಬೊಮ್ಮನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲೆ ಪುನರ್‌ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 

– ಸೈಯದ್ ಮೋಸಿನ್ ಬಿಇಒ ಹೊಸದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT