ರಫೆಲ್ ಡೀಲ್ ವಿರೋಧಿಸಿ ಸೆ.12 ರಂದು ಪ್ರತಿಭಟನೆ: ಎಚ್.ಆಂಜನೇಯ

7

ರಫೆಲ್ ಡೀಲ್ ವಿರೋಧಿಸಿ ಸೆ.12 ರಂದು ಪ್ರತಿಭಟನೆ: ಎಚ್.ಆಂಜನೇಯ

Published:
Updated:
Deccan Herald

ಚಿತ್ರದುರ್ಗ: ಕೇಂದ್ರ ಸರ್ಕಾರದ ರಫೆಲ್ ಡೀಲ್ ತನಿಖೆಗೆ ಒಳಪಡಿಸುವಂತೆ ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಸೆ.12 ರಂದು ಕಾಂಗ್ರೆಸ್ ಜಿಲ್ಲಾ ಘಟಕದಿಂದ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ಅದರ ವಿರುದ್ಧ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರೇ ಪ್ರಧಾನಿ ಅವರು ಉತ್ತರಿಸುತ್ತಿಲ್ಲ. ಅದನ್ನು ಬಯಲಿಗೆಳೆಯುವ ಪ್ರಯತ್ನ ಕಾಂಗ್ರೆಸ್ ಮಾಡಲಿದೆ ಎಂದು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿನ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ವೃತ್ತದವರೆಗೂ ನಡೆಯಲಿದೆ. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ದೇಶದಲ್ಲಿ ಕಳೆದ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಹಗರಣಗಳಲ್ಲೇ ಮುಳುಗಿದೆ. ನಮಗೆ ಒಮ್ಮೆ ಅವಕಾಶ ನೀಡಿ ರಾಷ್ಟ್ರದ ಚಿತ್ರಣವನ್ನೇ ಇನ್ನೆಂದು ಸಾಧ್ಯವಾಗದ ರೀತಿಯಲ್ಲಿ ಒಂದೇ ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿ ಅವರು ಏನು ಮಾಡಿದ್ದಾರೆ ಎಂಬುದೇ ಈವರೆಗೂ ಗೊತ್ತಾಗಿಲ್ಲ ಎಂದು ದೂರಿದರು.

ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡುತ್ತೇವೆ ಎಂಬುದಾಗಿ ಹೇಳಿದ ಸರ್ಕಾರದಿಂದಲೇ ಹಗರಣ ನಡೆದಿದೆ. ದೇಶದಲ್ಲಿ ಈವರೆಗೂ ಆಗಿರುವ ಅಭಿವೃದ್ಧಿ ಕೆಲಸಗಳೆಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಆಗಿರುವಂತದ್ದು. ಕೀರ್ತಿ ಏನೇ ಇದ್ದರು ಅದು ನಮ್ಮ ಪಕ್ಷಕ್ಕೆ ಸಲ್ಲಬೇಕು. ಅಪಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಮೋದಿ ಹವಾ ಕ್ಷೀಣಿಸುತ್ತಿದೆ: ದೇಶದಲ್ಲಿ ಮೋದಿ ಹವಾ ಮೊದಲಿನಂತಿಲ್ಲ. ದಿನ ದಿನಕ್ಕೂ ಕ್ಷೀಣಿಸುತ್ತಿದೆ. ಅದಕ್ಕೆ ಲೋಕಸಭೆಗೆ ನಡೆದ ಉಪಚುನಾವಣೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಅಲೆ ಮತ್ತೆ ಶುರುವಾಗಿದ್ದು, ಮುಂಬರುವ ಚುನಾವಣೆಯಲ್ಲಿ ನಾವು ಅಧಿಕಾರ ಖಂಡಿತ ಪಡೆಯುತ್ತೇವೆ ಎಂಬ ವಿಶ್ವಾಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಪ್ರತಿಯೊಬ್ಬರಲೂ ಇದೆ ಎಂದರು.

ಬಿಜೆಪಿಯದು ವಾಮಮಾರ್ಗ: ಬಿಜೆಪಿ ಮುಖಂಡರು ರಾಜ್ಯದಲ್ಲಿ ವಾಮಮಾರ್ಗದಲ್ಲಿ ಆದರೂ ಅಧಿಕಾರಕ್ಕೆ ಬರಬೇಕು ಎಂದು ಹಪಹಪಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿ ಯಾರೂ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ. ಇವೆಲ್ಲಾ ಕೇವಲ ಗಾಳಿ ಸುದ್ದಿಗಳು. ನಮ್ಮ ಪಕ್ಷ ರಾಜಮಾರ್ಗ ಅನುಸರಿಸಿ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗುತ್ತದೆಯೇ ಹೊರತು ವಾಮಮಾರ್ಗದಲ್ಲಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್, ಪಕ್ಷದ ಮುಖಂಡರಾದ ಮರುಳಾರಾಧ್ಯ, ಮೈಲಾರಪ್ಪ, ಸೈಯದ್ ಅಲ್ಲಾಭಕ್ಷ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !