ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ | ಬಿರುಸಿನಿಂದ ಸಾಗಿದ ರಾಗಿ ಬಿತ್ತನೆ ಕಾರ್ಯ

Published 7 ಆಗಸ್ಟ್ 2024, 6:45 IST
Last Updated 7 ಆಗಸ್ಟ್ 2024, 6:45 IST
ಅಕ್ಷರ ಗಾತ್ರ

ಹೊಸದುರ್ಗ: ಮಳೆ ಬಿಡುವು ನೀಡಿದ ಕೂಡಲೇ ರೈತರು ಜಮೀನುಗಳತ್ತ ಮುಖ ಮಾಡಿದ್ದಾರೆ. ತಾಲ್ಲೂಕಿನಾದ್ಯಂತ ವಾರದಿಂದಲೇ ಭೂಮಿ ಸಿದ್ಧತೆ ಕಾರ್ಯ ಮಾಡಿಕೊಂಡಿದ್ದ ರೈತರು, ರಾಗಿ ಬಿತ್ತನೆ ಮಾಡುತ್ತಿದ್ದಾರೆ.

ತಾಲ್ಲೂಕಿನಾದ್ಯಂತ 20 ದಿನಗಳಿಂದಲೂ ಮೋಡ ಕವಿದ ವಾತಾವರಣದ ಜೊತೆ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜಮೀನುಗಳಲ್ಲಿ ತೇವಾಂಶವಿದ್ದ ಕಾರಣ ರಾಗಿ ಬಿತ್ತನೆ ಹಿನ್ನಡೆಯಾಗಬಹುದು ಎಂದು ರೈತರು ಆತಂಕದಲ್ಲಿದ್ದರು.

ಆದರೆ, ಮೂರ್ನಾಲ್ಕು ದಿನಗಳಿಂದ ಉತ್ತಮ ಬಿಸಿಲು ಇದೆ. ಮಳೆ ಬಿಡುವು ಕೊಟ್ಟಿದ್ದರಿಂದ ರೈತರು ಭೂಮಿ ಹಸನು ಮಾಡಿಕೊಳ್ಳಲು ಕಾಲಾವಕಾಶ ಸಿಕ್ಕಂತಾಗಿತ್ತು. ಕೃಷಿ ಇಲಾಖೆಯಿಂದ ಸಹಾಯಧನದಡಿ ರಾಗಿ ಖರೀದಿ ಮಾಡಿದ್ದ ರೈತರು ಶುಕ್ರವಾರದಿಂದ ರಾಗಿ ಬಿತ್ತನೆ ಬಿರುಸುಗೊಳಿಸಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಈಗಾಗಲೇ ರಾಗಿ ಬಿತ್ತನೆ ಮಾಡಲಾಗಿದೆ. ರಾಗಿ ಇಳುವರಿ ಕೂಡ ಚೆನ್ನಾಗಿ ಬರುವ ನೀರಿಕ್ಷೆಯಿದೆ. ಕಳೆದ ಬಾರಿ ಬರಗಾಲ ಆವರಿಸಿದ್ದರಿಂದ ಯಾವ ಬೆಳೆಯೂ ಕೈ ಸೇರಿಲ್ಲ. ಈ ಬಾರಿ ಸಕಾಲದಲ್ಲಿ ಮಳೆ ಆಗುತ್ತಿರುವುದರಿಂದ ಉತ್ತಮ ಇಳುವರಿ ಬರಬಹುದು ಎಂದು ದೊಡ್ಡಯ್ಯನಪಾಳ್ಯದ ಸಣ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ 28,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿ ನಿಗದಿಪಡಿಸಲಾಗಿದೆ. ಸದ್ಯ 15,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಮಂಗಳವಾರ ಮಳೆಯಾಗಿದ್ದು, ಸ್ವಲ್ಪ ಅಡಚಣೆ ಉಂಟಾಗಬಹುದು. ರಾಗಿ ಬಿತ್ತನೆಗೆ ಆಗಸ್ಟ್ ಕೊನೆಯ ವಾರದವರೆಗೂ ಸಮಯವಿದೆ ರೈತರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಆಗಿರುವ ಮಳೆಯಿಂದಾಗಿ ರಾಗಿ ಹುಟ್ಟಲು ಅನುಕೂಲವಾಗುತ್ತದೆ. ಆದರೆ, ಇದೇ ರೀತಿ ಮಳೆ ಮುಂದುವರಿದರೆ ಕಟಾವು ಹಂತದಲ್ಲಿರುವ ಸಾವೆ ಬೆಳೆಗೆ ತೊಂದರೆಯಾಗಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ತಿಳಿಸಿದರು.

ಹದ ಮಳೆ

ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಗುಡುಗು ಸಹಿತ ಹದ ಮಳೆಯಾಗಿದೆ. 2 ಗಂಟೆಗಳ ಕಾಲ ಸತತ ಮಳೆಯಾಗಿದೆ. ಪಟ್ಟಣದ ಕೆಲ ರಸ್ತೆ ಹಾಗೂ ಚರಂಡಿ ಮೇಲೆ ನೀರು ಹರಿಯುತ್ತಿದೆ. ಒಂದೇ ಸಮನೆ ಸುರಿದ ಮಳೆಯಿಂದಾಗಿ ಕೆಲ್ಲೋಡಿನ ವೇದಾವತಿ ನದಿಯಲ್ಲಿ ಇನ್ನಷ್ಟು ನೀರು ಅಧಿಕವಾಗಿದೆ. ರಾಗಿ ಬೆಳೆಗಾರರಿಗೆ ಸಂತಸ ಮೂಡಿಸಿದರೆ ಸಾವೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT