ಚಿತ್ರದುರ್ಗ: ಜಿಲ್ಲೆಯಲ್ಲಿ ಬುಧವಾರ ಹಸ್ತ ಮಳೆ ದಿನವಿಡೀ ಧರೆಗೆ ಇಳಿಯಿತು. ಗುಡುಗು, ಮಿಂಚು ಸಹಿತ ಬಿಟ್ಟು–ಬಿಟ್ಟು ಸುರಿಯುತ್ತಿದ್ದ ಮಳೆಯಿಂದ ಜಲಮೂಲಗಳಿಗೆ ನೀರು ಹರಿದುಬಂದಿದೆ. ಶೇಂಗಾ ಹಾಗೂ ಈರುಳ್ಳಿ ಕಟಾವಿಗೆ ಮಾತ್ರ ತೊಂದರೆ ಆಗಿದೆ.
ಬುಧವಾರ ರಾತ್ರಿ ಸುರಿದ ಮಳೆ ಬೆಳಿಗ್ಗೆ ಸೋನೆಯ ಸ್ವರೂಪ ಪಡೆಯಿತು. ಬೆಳಿಗ್ಗೆ 8.30ಕ್ಕೆ ಆರಂಭವಾದ ಮಳೆ ದಿನ ಪೂರ್ತಿ ಸುರಿಯಿತು. ಮಧ್ಯೆ ಆಗಾಗ ಬಿಡುವು ನೀಡುತ್ತಿದ್ದ ವರುಣ ಮಧ್ಯಾಹ್ನದ ಬಳಿಕ ಬಿರುಸು ಪಡೆಯಿತು. ನಗರದ ತಗ್ಗು ಪ್ರದೇಶದ ಕೆಲವಡೆ ನೀರು ನುಗ್ಗಿತು. ಭರಮಸಾಗರ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಉಂಟಾಗಿದ್ದ ಮಳೆ ಕೊರತೆಯಿಂದ ರೈತರು ಆತಂಕಗೊಂಡಿದ್ದರು. ಶೇಂಗಾ, ಮೆಕ್ಕೆಜೋಳ ಕಾಳು ಕಟ್ಟುವ ಸಂದರ್ಭದಲ್ಲಿ ಬೇಸಿಗೆಯಂತಹ ಬಿಸಿಲು ಕಾಣಿಸಿಕೊಂಡಿದ್ದು ಕೃಷಿಕರ ಕಳವಳವನ್ನು ಹೆಚ್ಚಿಸಿತ್ತು. ಆದರೆ, ಹಸ್ತ ಮಳೆ ರೈತರ ಆತಂಕವನ್ನು ದೂರ ಮಾಡಿದೆ. ಜಿಲ್ಲೆಯ ಎಲ್ಲೆಡೆ ಹದ ಮಳೆಯಾಗಿದೆ. ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ಭಾಗದಲ್ಲಿ ಉತ್ತಮ ಮಳೆ ಸುರಿದಿದೆ.
ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಇದರಿಂದ ಸಂತಸಗೊಂಡಿದ್ದಾರೆ. ಮೆಕ್ಕೆಜೋಳ, ರಾಗಿ ಸೇರಿ ಇತರ ಬೆಳೆಗಳಿಗೆ ಇದರಿಂದ ಅನುಕೂಲವಾಗಿದೆ. ಆದರೆ, ಈರುಳ್ಳಿ ಕಟಾವು ಮಾಡುತ್ತಿದ್ದ ಹಾಗೂ ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಗಾರದ ಬೆಲೆ ಪಡೆದಿರುವ ಹತ್ತಿಗೂ ಇದರಿಂದ ಹಾನಿ ಆಗಿದೆ. ಮಳೆ ಇನ್ನೂ ಎರಡು ದಿನ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಎಡಬಿಡದೇ ಸುರಿದ ಪರಿಣಾಮ ಚಿತ್ರದುರ್ಗ ನಗರದಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿದವು. ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಸ್ಥಳದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ರಸ್ತೆಯಲ್ಲಿ ನೀರು ನಿಂತುಕೊಂಡು ಅವಾಂತರ ಸೃಷ್ಟಿಯಾಗಿತ್ತು. ಚರಂಡಿಗಳು ನಿರ್ಮಾಣ ಹಂತದಲ್ಲಿರುವ ಕಡೆಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾಯಿತು. ಹೊಳಲ್ಕರೆ ರಸ್ತೆ, ತುರುವನೂರು ರಸ್ತೆ, ಜೆಸಿಆರ್ ಬಡಾವಣೆ, ಬಿ.ಡಿ. ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು.
ಒಂದನೇ ವಾರ್ಡ್, ಗುಮಸ್ತಾರ ಕಾಲೊನಿ, ಕೆಳಗೋಟೆ ಸೇರಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ನೀರು ಹೊರ ಹಾಕಲು ನಿವಾಸಿಗಳು ಕಷ್ಟಪಟ್ಟರು. ರಾಜಕಾಲುವೆಗಳು ತುಂಬಿ ಹರಿದವು. ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಕೆಳ ಸೇತುವೆಯ ಬಳಿ ನೀರು ನಿಂತಿತ್ತು. ಸ್ಟೇಡಿಯಂ ರಸ್ತೆ, ಸರ್ವಿಸ್ ರಸ್ತೆಗಳು ಜಲಾವೃತವಾಗಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.