ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮೂರಿನಲ್ಲಿ ಉತ್ತಮ ಮಳೆ: ಹಲವು ಕೆರೆಗಳಿಗೆ ಹರಿದು ಬಂದ ನೀರು

Published 2 ಜೂನ್ 2024, 16:20 IST
Last Updated 2 ಜೂನ್ 2024, 16:20 IST
ಅಕ್ಷರ ಗಾತ್ರ

ಚಿತ್ರದುರ್ಗ/ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ವಿವಿಧೆಡೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಉತ್ತಮ ಮಳೆ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ.

ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರಿನಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದ್ದು, ಹರಿಹರದಲ್ಲಿ ತುಂತುರು ಮಳೆಯಾಗಿದೆ.

ಕೋನಾಪುರ, ತುಪ್ಪದಕ್ಕನಹಳ್ಳಿ ಕೆರೆ, ಅಮುಕುಂದಿ ಕೆರೆ, ಮೋಟಮಲ್ಲಯ್ಯ ಕೆರೆ, ಪಕ್ಕುರ್ತಿ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ಸಮೃದ್ಧವಾಗಿ ನೀರು ಹರಿದುಬಂದಿವೆ.

ತಾಲ್ಲೂಕಿನ ದೇವಸಮುದ್ರ ವ್ಯಾಪ್ತಿಯಲ್ಲಿ ಅತ್ಯಧಿಕ 7 ಸೆಂ. ಮೀ ಮಳೆಯಾಗಿದೆ. ರಾಯಾಪುರದಲ್ಲಿ 5.7 ಸೆಂ. ಮೀ., ರಾಂಪುರ ವ್ಯಾಪ್ತಿಯಲ್ಲಿ 6.5 ಸೆಂ. ಮೀ. ಮಳೆಯಾಗಿದೆ.

ಗಾಳಿ, ಮಳೆಯಿಂದಾಗಿ ದೇವಸಮುದ್ರ ಹೋಬಳಿ ವ್ಯಾಪ್ತಿಯ ಜೆ.ಬಿ. ಹಳ್ಳಿ ಗ್ರಾಮದಲ್ಲಿ ಬಾಳೆ ತೋಟಗಳಿಗೆ ಹಾನಿಯಾಗಿದೆ. ಜಂಬನಮಲ್ಕಿ ಗ್ರಾಮದಲ್ಲಿ ಮನೆ ಬಿದ್ದಿದೆ.

ಚಿಕ್ಕಜಾಜೂರು ವ್ಯಾಪ್ತಿಯ ಹಿರೇಎಮ್ಮಿಗನೂರು, ನಂದಿಹಳ್ಳಿ, ಅಂತಾಪುರ ಗ್ರಾಮಗಳಲ್ಲಿ ಭಾನುವಾರ ಸಂಜೆ ಮುಕ್ಕಾಲು ಗಂಟೆ ಬಿರುಸಿನ ಮಳೆಯಾಗಿದೆ. ಹಲವು ಕಡೆಗಳಲ್ಲಿ ಹೊಲಗಳಲ್ಲಿ ನೀರು ನಿಂತಿದೆ. 

ಭಾರಿ ಮಳೆ, ಕುಸಿದ ಮನೆ:


ಕುಡತಿನಿ (ಬಳ್ಳಾರಿ ವರದಿ): ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ತಡ ರಾತ್ರಿ ಉತ್ತಮ ಮಳೆ ಸುರಿದಿದ್ದು, ಜೋರು ಗಾಳಿ, ಮಳೆಗೆ ಪಟ್ಟಣದ 8ನೇ ವಾರ್ಡ್‍ನಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಸಿಮೆಂಟ್ ಶೀಟಿನ ಮನೆ ಸಂಪೂರ್ಣ ಕುಸಿದಿದೆ.

ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ, ಧಾನ್ಯಗಳು, ಇತರೆ ವಸ್ತುಗಳಿಗೆ ಹಾನಿಯಾಗಿದೆ.

ವಾರದಿಂದ ಬಿಡುವು ಕೊಟ್ಟಿದ್ದ ಮಳೆ, ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಸುರಿದಿದೆ. ಗಾಳಿ ಆರ್ಭಟವೂ ಜೋರಾಗಿತ್ತು. ಮಳೆ ಮಾಪನ ಕೇಂದ್ರದಲ್ಲಿ 3.4 ಸೆಂ.ಮೀ ಮಳೆಯ ಪ್ರಮಾಣ ದಾಖಲಾಗಿದೆ. 

ವಿಜಯಪುರ ವರದಿ:

ನಗರದಲ್ಲಿ ಭಾನುವಾರ ಸಂಜೆ ಅರ್ಧ ತಾಸು ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆ ಸುರಿಯಿತು.

ವಾರದಿಂದ ಮಳೆಯಿಲ್ಲದೇ ಬೇಸಿಗೆ ಬಿಸಿಲು 40 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಉಷ್ಣಾಂಶ ಹೆಚ್ಚಳದಿಂದ ಜನ ಹೈರಾಣಾಗಿದ್ದರು. ಭಾನುವಾರ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು. 

ಮೊಳಕಾಲ್ಮುರು ಸಮೀಪದ ದೇವಸಮುದ್ರ ಹೋಬಳಿ ವ್ಯಾಪ್ತಿಯ ಜೆಬಿಹಳ್ಳಿ ಗ್ರಾಮದಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿವೆ
ಮೊಳಕಾಲ್ಮುರು ಸಮೀಪದ ದೇವಸಮುದ್ರ ಹೋಬಳಿ ವ್ಯಾಪ್ತಿಯ ಜೆಬಿಹಳ್ಳಿ ಗ್ರಾಮದಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿವೆ
ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಹೊಲವೊಂದರಲ್ಲಿ ನೀರು ನಿಂತಿರುವುದು 
ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಹೊಲವೊಂದರಲ್ಲಿ ನೀರು ನಿಂತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT