ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ; ಶೇಂಗಾ ಬೆಳೆಗಾರ ಕಂಗಾಲು

ಹಿರಿಯೂರು ತಾಲ್ಲೂಕಿನ 21,464 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ
Last Updated 28 ಅಕ್ಟೋಬರ್ 2020, 4:53 IST
ಅಕ್ಷರ ಗಾತ್ರ

ಹಿರಿಯೂರು: ‘ಕಾಲ ಕಾಲಕ್ಕೆ ಮಳೆ ಬಂದಿದೆ. ಈ ಬಾರಿ ಶೇಂಗಾ ಬಂಪರ್ ಬೆಳೆ ಬರುತ್ತದೆ. ಅದಕ್ಕೆ ತಕ್ಕಂತೆ ದರ ಸಿಕ್ಕಲ್ಲಿ ಹಿಂದಿನ ಮೂರ್ನಾಲ್ಕು ವರ್ಷಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು’ ಎಂಬ ಕನಸಿನಲ್ಲಿದ್ದ ಶೇಂಗಾ ಬೆಳೆಗಾರರು ಸೆಪ್ಟೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಹಿಂಗಾರು ಹಂಗಾಮಿಗೆ 21,464 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಹಿಂದಿನ 2–3 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಅತಿ ಹೆಚ್ಚು ಬಿತ್ತನೆಯಾಗಿದ್ದು, ಬೆಳೆ ಹಾಳಾಗಿರುವ ಕಾರಣದಿಂದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

‘ಬಿತ್ತನೆ ಸಮಯದಲ್ಲಿ ಉತ್ತಮ ಮಳೆಯಾಗಿ ಶುಭ ಸೂಚನೆ ದೊರೆತಿತ್ತು. ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಹೆಚ್ಚು ಬಿತ್ತನೆ ಆಗಿತ್ತು. ಆದರೆ, ಆಗಸ್ಟ್ ತಿಂಗಳಲ್ಲಿ ಹೂಬಿಟ್ಟು ಕಾಯಿಕಟ್ಟುವ ಕಾಲಕ್ಕೆ ಮಳೆ ಕೈಕೊಟ್ಟ ಕಾರಣ, ಇಳುವರಿ ಕುಂಠಿತವಾಗುವ ಆತಂಕ ಎದುರಾಗಿತ್ತು. ಮಳೆ ಅಭಾವದ ನಡುವೆಯೂ ಹಲವು ರೈತರು ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್ ಪಡೆದು ಔಷಧ ಸಿಂಪರಣೆ ಮಾಡಿ ಬೆಳೆಯನ್ನು ಉಳಿಸಿಕೊಂಡಿದ್ದರು. ಆದರೆ, ಸೆಪ್ಟೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯು ರೈತರ ಆಸೆಗೆ ತಣ್ಣೀರೆರಚಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಉಲ್ಫತ್ ಜೈಬಾ ಹೇಳುತ್ತಾರೆ.

ಬೇಕಿದ್ದಾಗ ಬಾರದ ಮಳೆ: ‘ಜುಲೈ ತಿಂಗಳಲ್ಲಿ ವಾಡಿಕೆ ಮಳೆ 53 ಮಿ.ಮೀ ಇದ್ದು, ಈ ವರ್ಷ 121 ಮಿ.ಮೀ ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ 61 ಮಿ.ಮೀ ಬದಲಿಗೆ 49 ಮಿ.ಮೀ ಮಳೆಯಾದರೆ, ಸೆಪ್ಟೆಂಬರ್‌ನಲ್ಲಿ 119 ಮಿ.ಮೀ. ಬದಲಿಗೆ 206 ಮಿ.ಮೀ, ಅಕ್ಟೋಬರ್ 23ರವರೆಗೆ 22 ಮಿ.ಮೀ ಬದಲಿಗೆ 42 ಮಿ.ಮೀ ಮಳೆಯಾಗಿದೆ. ಆಗಸ್ಟ್‌ನಲ್ಲಿ 61 ಮಿ.ಮೀ ವಾಡಿಕೆ ಮಳೆಯಾಗಿದ್ದರೆ ಶೇಂಗಾ ಇಳುವರಿ ಹೆಚ್ಚುತ್ತಿತ್ತು’ ಎನ್ನುವರು ಉಲ್ಫತ್ ಜೈಬಾ.

ಪ್ರಸ್ತುತ ತಾಲ್ಲೂಕಿನ ಬಹುತೇಕ ಕಡೆ ಶೇಂಗಾ ಕೊಯ್ಲು ನಡೆಯುತ್ತಿದೆ. ಬಳ್ಳಿಯನ್ನು ಕಿತ್ತರೆ ಕಾಯಿ ಬಿಟ್ಟು ಬಳ್ಳಿಮಾತ್ರ ಕೈಗೆ ಬರುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಮಳೆಗೆ ಬಳ್ಳಿ ಸಂಪೂರ್ಣ ಹಾಳಾಗಿದ್ದು, ಜಾನುವಾರುಗಳಿಗೆ ಮೇವು ಇಲ್ಲವಾಗಿದೆ. ಒಂದು ಗಿಡದಲ್ಲಿ ಸರಾಸರಿ 20ರಿಂದ 25 ಕಾಯಿಕಟ್ಟಬೇಕಾದ ಗಿಡಗಳಲ್ಲಿ 8ರಿಂದ 10 ಕಾಯಿ ಕಟ್ಟಿರುವುದು ರೈತರಿಗೆ ಆಘಾತ ತಂದಿದೆ.

‘ಐದಾರು ದಿನಗಳ ಹಿಂದೆ ಬಿದ್ದ ಜಿನುಗು ಮಳೆಗೆ ಕಟಾವು ಮಾಡಿದ್ದ ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಅಕಾಲಿಕ ಮಳೆಯಿಂದ ಗಿಡದಲ್ಲಿ ಕಾಯಿಗಳಿಲ್ಲ, ದನಕರುಗಳಿಗೆ ಬೇಕಿದ್ದ ಬಳ್ಳಿಯೂ ಕೈಗೆ ಸಿಕ್ಕಿಲ್ಲ. ಇಷ್ಟೆಲ್ಲ ಕಷ್ಟಗಳ ನಡುವೆ ಮಾರುಕಟ್ಟೆಗೆ ಹೋದರೆ ದರ ಕುಸಿತವಾಗಿದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದಲ್ಲಿ ರೈತರು ಉಳಿಯುವುದು ಕಷ್ಟ’ ಎನ್ನುತ್ತಾರೆ ಹೇಮದಳ ಗ್ರಾಮದ ಗಿರಿಯಪ್ಪ.

ಬೆಳೆ ವಿಮೆ ಮಾಹಿತಿ

ತಾಲ್ಲೂಕಿನಲ್ಲಿ ಸುಮಾರು 9,129 ರೈತರು ಬೆಳೆ ವಿಮೆ ಪಾವತಿಸಿದ್ದು, ಮಾರ್ಗಸೂಚಿ ಪ್ರಕಾರ ರೈತರು ಆಲಿಕಲ್ಲು ಮಳೆ, ಭೂಕುಸಿತ, ಭೂಮುಳುಗಡೆ ಮುಂತಾದ ಪ್ರಕೃತಿ ವಿಕೋಪಗಳು, ಬೆಳೆ ಕಟಾವು ಮಾಡಿ ಹೊಲದಲ್ಲಿ ಒಣಗಲು ಬಿಟ್ಟು 14 ದಿನಗಳ ಒಳಗೆ ಮಳೆಯಿಂದ ಹಾನಿ ಸಂಭವಿಸಿದಲ್ಲಿ ಪರಿಹಾರ ಪಡೆಯಲು ಅವಕಾಶವಿರುತ್ತದೆ.

ಬೆಳೆ ಹಾನಿ ಸಂಭವಿಸಿದ 72 ಗಂಟೆಗಳ ಒಳಗೆ ಸೂಕ್ತ ದಾಖಲೆಗಳೊಂದಿಗೆ ವಿಮಾ ಕಂಪನಿಗೆ ಸಲ್ಲಿಸಿದಲ್ಲಿ ವಿಮಾ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯೂನಿವರ್ಸಲ್ ಸೋಂಪೋ ಸಂಸ್ಥೆಯ ಅಧಿಕಾರಿಗಳಾದ ಮಹೇಶ್ (89703–50189), ಮಂಜುನಾಥ್ (80735–74328) ಅವರನ್ನು ಸಂಪರ್ಕಿಸುವಂತೆ ಉಲ್ಫತ್ ಜೈಬಾ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT