ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65 ವರ್ಷಗಳ ನಂತರ ವಾಣಿವಿಲಾಸಕ್ಕೆ ದಾಖಲೆಯ ನೀರು

ರಭಸ ಕಳೆದುಕೊಂಡಿದ್ದ ವೇದಾವತಿ ಮತ್ತೊಮ್ಮೆ ಮೈದುಂಬಿ ಹರಿದ ಪರಿಣಾಮ
Last Updated 6 ಆಗಸ್ಟ್ 2022, 4:17 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 65 ವರ್ಷಗಳ ನಂತರ ಸತತ ಎರಡನೇ ಬಾರಿಗೆ 125 ಅಡಿ ದಾಟಿದ್ದು, ಇನ್ನು ಕೇವಲ 5 ಅಡಿ ನೀರು ಬಂದಲ್ಲಿ 1933ರ ದಾಖಲೆಯನ್ನು ಸರಿಗಟ್ಟಲಿದೆ.

ಆರೇಳು ದಶಕಗಳ ನಂತರ ವೇದಾವತಿ ನದಿ ಮತ್ತೊಮ್ಮೆ ಮೈದುಂಬಿ ಹರಿದ ಕಾರಣ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಶುಕ್ರವಾರ 125 ಅಡಿ ದಾಟಿದೆ. 2021ರಲ್ಲಿ 125.50 ಅಡಿ ದಾಖಲಾಗಿತ್ತು. ಜಲಾಶಯ ಭರ್ತಿಗೆ ಕೇವಲ 5 ಅಡಿ ನೀರು ಬೇಕಿದ್ದು, ಕೋಡಿ ಬೀಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಜನಿಸಿರುವ ವೇದಾ ನದಿಗೆ ಸಖರಾಯಪಟ್ಟಣದ ಸಮೀಪದಲ್ಲಿ ಅಯ್ಯನ ಕೆರೆ ನಿರ್ಮಿಸಿದ್ದರೆ, ಆವತಿ ನದಿಗೆ ಮದಗದಕೆರೆ ನಿರ್ಮಿಸಲಾಗಿದೆ. ಈ ವರ್ಷ ಎರಡೂ ಕೆರೆಗಳು ಕೋಡಿ ಬಿದ್ದುದರಿಂದ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ವಾಣಿವಿಲಾಸ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು 1897ರಲ್ಲಿ ಆರಂಭಿಸಿ, 1907ರಲ್ಲಿ ಪೂರ್ಣಗೊಳಿಸಲಾಗಿದೆ. ಬಯಲು
ಸೀಮೆಯ ಜನರ ನೀರಿನ ಬೇಗೆಯನ್ನು ನೀಗಿಸಲು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪ ನಂಜಮ್ಮಣ್ಣಿ ಅವರ ಹೆಸರಿನಲ್ಲಿ ಜಲಾಶಯ ನಿರ್ಮಿಸಿದ್ದರು. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 30 ಟಿಎಂಸಿ ಅಡಿ ಇದೆ.

ಮರೆಯಾದ ಆತಂಕ: 2019ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿತ್ತು. ಅದೃಷ್ಟವಶಾತ್ ಅದೇ ವರ್ಷ ನಿರೀಕ್ಷೆಗೂ ಮೀರಿ ಸುರಿದ ಹಿಂಗಾರು ಮಳೆಯಿಂದ, ಭದ್ರಾ ಯೋಜನೆಯಿಂದ ತಾತ್ಕಾಲಿಕವಾಗಿ ನೀರು ಹರಿಸಿದ ಪರಿಣಾಮವಾಗಿ ನೀರಿನ ಮಟ್ಟ 102 ಅಡಿ ತಲುಪಿತ್ತು. 2020ರಲ್ಲಿ 106, 2021ರಲ್ಲಿ 125.50 ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ 125 ಅಡಿ ದಾಟಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡತೊಡಗಿದೆ.

ಈ ಬಾರಿ ಮುಂಗಾರು ಉತ್ತಮವಾಗಿ ಸುರಿದ ಕಾರಣ ನದಿ ಪಾತ್ರದ ಎಲ್ಲ ಬ್ಯಾರೇಜುಗಳು ಭರ್ತಿಯಾಗಿವೆ. ನೀರಿಗಾಗಿ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿಲ್ಲ.

‘ಜೂನ್ 15ರಿಂದ ಅಕ್ಟೋಬರ್ 15ರವರೆಗೆ ಭದ್ರಾ ಜಲಾಶಯದ ನೀರನ್ನು ವಾಣಿವಿಲಾಸಕ್ಕೆ ಹರಿಸಬೇಕೆಂದು ಸರ್ಕಾರದ ಆದೇಶವಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನೀರು ಹರಿಸುವುದಕ್ಕೆ ತಡೆ ಒಡ್ಡಿವೆ. ವರುಣನ ಕೃಪೆಯಿಂದ ಭದ್ರಾ ನೀರಿಗಿಂತ ಸ್ವಲ್ಪ ಹೆಚ್ಚಿನ ನೀರೇ ನದಿಯ ಮೂಲಕ ಹರಿದು ಬಂದಿದೆ. ಇದುವರೆಗೆ 1933ರಲ್ಲಿ ಒಮ್ಮೆ ಮಾತ್ರ ಜಲಾಶಯ ಭರ್ತಿಯಾಗಿತ್ತು.

ಒಡೆಯರ್ ಭೇಟಿ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1901ರಲ್ಲಿ ಜಲಾಶಯಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು, ಅವರ ಬದ್ಧತೆಗೆ ನಿದರ್ಶನವಾಗಿದೆ. ಯೋಜನೆಗೆ ಅವಿಸ್ಮರಣೀಯ ಕಾಣಿಕೆ ನೀಡಿರುವ ಎಂಜಿನಿಯರ್‌ಗಳಾದ ಎಚ್.ಡಿ. ರೈಸ್, ಮೆಕನೀಲ್ ಕ್ಯಾಂಪ್‌ಬೆಲ್, ಸಿ.ಟಿ. ದಲಾಲ್ ಅವರನ್ನು ಬಯಲುಸೀಮೆಯ ಜನ ಎಂದೂ ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT