ಗುರುವಾರ , ಜೂನ್ 17, 2021
21 °C

ತಿಂಗಳಲ್ಲಿ ಒಂದು ದಿನವಾದರೂ ವಾಹನ ಬಿಟ್ಟು ಓಡಾಡಲು ಮನವಿ: ಡಿ.ಚಂದ್ರಶೇಖರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಿರಿಯೂರು: ‘ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು–ನೌಕರರು, ಸಾರ್ವಜನಿಕರು ತಿಂಗಳಲ್ಲಿ ಒಂದು ದಿನವಾದರೂ ತಮ್ಮಲ್ಲಿರುವ ವಾಹನವನ್ನು ಬಿಟ್ಟು ನಡೆದು ಹೋದಲ್ಲಿ ಆರೋಗ್ಯ ಸುಧಾರಣೆ ಜತೆಗೆ ಇಂಧನ ಉಳಿತಾಯ, ಪರಿಸರ ಸಂರಕ್ಷಣೆಗೆ ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ’ ಎಂದು ಪ್ರಾಂಶುಪಾಲ ಪ್ರೊ. ಡಿ.ಚಂದ್ರಶೇಖರಪ್ಪ ಮನವಿ ಮಾಡಿದರು.

ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಗರದಲ್ಲಿ ಗಾಂಧೀ ವೃತ್ತದಿಂದ ಹುಳಿಯಾರು ರಸ್ತೆಯಲ್ಲಿರುವ ಕಾಲೇಜಿನವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಚಿಕ್ಕವರಿದ್ದಾಗ ಬಹುತೇಕ ಬಡವರು ಮತ್ತು ಮಧ್ಯಮ ವರ್ಗದವರ ಮನೆಗಳಲ್ಲಿ ಸೈಕಲ್ ಇದ್ದರೆ ಅದೇ ದೊಡ್ಡ ಸಂಭ್ರಮವಾಗಿತ್ತು. ಸ್ವಲ್ಪ ಅನುಕೂಲಸ್ಥರು ದ್ವಿಚಕ್ರ ವಾಹನ, ಶ್ರೀಮಂತರು ಮಾತ್ರ ಕಾರುಗಳನ್ನು ಹೊಂದಿದ್ದರು. ಈಗ ಯಾರಲ್ಲಿ ಯಾವ ವಾಹನಗಳಿವೆ ಎಂದು ಹೇಳುವುದೇ ಕಷ್ಟ. ಶಾಲಾ–ಕಾಲೇಜುಗಳಿಗೆ ಹತ್ತೆಂಟು ಕಿ.ಮೀ. ನಡೆದು ಹೋಗುವ ಪ್ರಮೇಯವೇ ಇಲ್ಲದಂತೆ ಎಲ್ಲೆಂದರಲ್ಲಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಆದರೂ ವಾಹನಗಳ ಸಂಖ್ಯೆ ಹೆಚ್ಚಿರುವುದು ಅಗತ್ಯತೆಗೋ, ತೋರಿಕೆಗೋ ಎಂಬ ಪ್ರಶ್ನೆ ಏಳುತ್ತದೆ ಎಂದು ಅವರು ತಿಳಿಸಿದರು.

ಮನೆಯಿಂದ 2–3 ಕಿ.ಮೀ. ದೂರ ಇರುವ ಶಾಲಾ–ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ಪ್ರತಿದಿನ ನಡೆದೇ ಹೋಗಬಹುದು. ಆದರೆ ವಾಹನ ಇಟ್ಟುಕೊಳ್ಳುವುದು ನಮಗೆ ಚಟವಾಗಿ ಬಿಟ್ಟಿದೆ. ಇದರಿಂದ ಇಂಧನದ ಬೆಲೆ ಮಿತಿ ಮೀರಿ ಹೆಚ್ಚುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಪರಿಸರವೂ ಮಲಿನವಾಗುತ್ತದೆ. ಇದು ತಪ್ಪಬೇಕೆಂದರೆ ಅನಿವಾರ್ಯ ಸಂದರ್ಭಗಳಲ್ಲಿ ವಾಹನ ಬಳಸಬೇಕು ಎಂದು ಚಂದ್ರಶೇಖರ್ ಸಲಹೆ ನೀಡಿದರು.

ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ. ರವಿಚಂದ್ರನ್ ಕಾಲ್ನಡಿಗೆಯ ನೇತೃತ್ವ ವಹಿಸಿದ್ದರು. ಪ್ರಾಧ್ಯಾಪಕರಾದ ಹನುಮಂತರಾಯಪ್ಪ, ಪ್ರಸಾದ್, ಪರಮೇಶ್, ಡಿ.ಆರ್. ಪ್ರಸನ್ನಕುಮಾರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು