ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಂಕಿಮಲೆ ಬೆಟ್ಟ ಪ್ರವಾಸಿ ತಾಣವಾಗಿಸಲು ಮನವಿ

ಶಿಲಾಯುಗ ಐತಿಹ್ಯ: ಸಮುದಾಯ ಭವನಗಳ ನಿರ್ಮಾಣಕ್ಕೆ ಸೀಮಿತ
Last Updated 7 ಜುಲೈ 2021, 10:02 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜಿಲ್ಲೆಯ ಪ್ರಾಗೈತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ತಾಲ್ಲೂಕಿನ ನುಂಕಿಮಲೆ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಪಟ್ಟಣದ ಹಾಗೂ ಹಲವು ಜಿಲ್ಲೆಗಳ ಜನರ ಮನೆ ದೇವರಾಗಿರುವ ನುಂಕಿಮಲೆ ಸಿದ್ದೇಶ್ವರ ಸ್ವಾಮಿಗೆ ಶಿಲಾಯುಗ ಕಾಲದ ಐತಿಹ್ಯವಿದೆ. ಶಿಲಾಯುಗ ಕಾಲದಲ್ಲಿ ನುಂಕಿಮಲೆ ಬೆಟ್ಟದಲ್ಲಿದ್ದ ಜನವಸತಿಗೆ ಮೇಲೆ ನುಂಕವ್ವ, ಮಲಿಯವ್ವ ಎಂಬ ರಕ್ಕಸಿಯರು ಕಾಟ ನೀಡುತ್ತಿದ್ದರಂತೆ. ಇವರಿಂದ ಕಾಪಾಡಿದ ಸಿದ್ದೇಶ್ವರ ಸ್ವಾಮಿ ನಂತರ ಅಲ್ಲಿ ಪ್ರತಿಷ್ಠಾಪನೆಗೊಂಡನು ಎಂಬ ಐತಿಹ್ಯವಿದೆ.

ಬೆಟ್ಟದಲ್ಲಿ ಸಿದ್ದೇಶ್ವರ ದೇವಸ್ಥಾನ ಹಾಗೂ ನುಂಕಪ್ಪ ದೇವಸ್ಥಾನಗಳು ಪ್ರತ್ಯೇಕವಾಗಿವೆ. ನಾಥ ಪಂಥದ ಮಠವು ಇಲ್ಲಿದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ನೂರಾರು ಎಕರೆ ವಿಸ್ತೀರ್ಣದ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಸುತ್ತಲೂ ಬೃಹತ್ ಹೆಬ್ಬಂಡೆಗಳ ಬೆಟ್ಟವಿದೆ. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಮಲೆನಾಡಿನಂತೆ ಕಂಗೊಳಿಸುತ್ತಿರುತ್ತದೆ. ಬುಡಕಟ್ಟು ಸಂಸ್ಕೃತಿಗಳನ್ನು ಇಲ್ಲಿಯ ದೇವಸ್ಥಾನದಲ್ಲಿ ಹಾಗೂ ಹಬ್ಬಗಳಲ್ಲಿ ಕಾಣಬಹುದು. ತಾಲ್ಲೂಕಿನ 33 ಹಳ್ಳಿಗಳ ಮನೆ ದೇವರಾಗಿದೆ ಎಂದು ಸಾಹಿತಿ ಸೂಲೇನಹಳ್ಳಿ ರಾಜು ಹೇಳಿದರು.

‘ಬೆಟ್ಟದಲ್ಲಿ ಎರಡು ಐತಿಹಾಸಿಕ ಹೊಂಡಗಳಿವೆ. ಇದರಲ್ಲಿ ಒಂದನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂಳು ತೆಗೆಯಲಾಗಿದೆ. ಪಕ್ಕದ ಮತ್ತೊಂದು ಹೊಂಡ ಹೂಳಿನಿಂದ ತುಂಬಿ ತುಳುಕುತ್ತಿದೆ. ಕುಡಿಯುವ ನೀರಿನ ತೊಟ್ಟಿ, ಶೌಚಾಲಯಗಳು ಸೇವೆಯಿಂದ ದೂರವಾಗಿವೆ. ಸಮುದಾಯ ಭವನಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ’ ಎಂದು ದೂರಿದರು.

‘ಬೆಟ್ಟದ ಮೇಲೆ ಪಾರ್ಕ್‌ ನಿರ್ಮಾಣ ಮಾಡಿ, ಮಕ್ಕಳ ಆಟಿಕೆಗಳನ್ನು ಅಳವಡಿಸಬೇಕು. ಪ್ರವಾಸಿಗಳು ಬಂದು ಕುಳಿತುಕೊಳ್ಳಲು ಹಾಗೂ ವಿಹಾರಕ್ಕೆ ಸ್ಥಳ ಅಭಿವೃದ್ಧಿಪಡಿಸಬೇಕು. ಈಗ ಬರುವ ಹಲವರು ಗಿಡಗಳ ಬದಿಯಲ್ಲಿ ಕುಳಿತು ಮದ್ಯಸೇವನೆ ಮಾಡುವುದು, ಮಾಂಸಾಹಾರ ಊಟ ಮಾಡಿ ಬೇಕಾಬಿಟ್ಟಿ ಊಟದ ತಟ್ಟೆಗಳನ್ನು ಎಸೆಯುವುದು ಮಾಡುತ್ತಾರೆ. ಇದರಿಂದ ಆವರಣದಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿವೆ. ಆದ್ದರಿಂದ ಕಾವಲುಗಾರರ ನೇಮಕ ಮಾಡುವ ಮೂಲಕ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಪ್ರವಾಸಿಗರಾದ ತಿಪ್ಪೇಸ್ವಾಮಿ, ಸಿದ್ದಪ್ಪ
ಹೇಳಿದರು.

ತಾಲ್ಲೂಕಿನ ಮಟ್ಟಿಗೆ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಇದೊಂದು ಸ್ಥಳ ಮಾತ್ರ ಸೂಕ್ತವಾಗಿದೆ. ಈಚೆಗೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ಮಾಡಿದಲ್ಲಿ ಜಿಲ್ಲೆಯ ಮಟ್ಟಿಗೆ ಶಾಲಾ ವಿದ್ಯಾರ್ಥಿಗಳು, ಜನರು ಒಂದು ದಿನದ ಮಟ್ಟಿಗೆ ಪ್ರವಾಸಕ್ಕೆ ಬರಲು ಅನುಕೂಲವಾಗಲಿದೆ. ಜತೆಗೆ ಸಮೀಪದಲ್ಲಿರುವ ಹಲವು ಪ್ರಾಗೈತಿಹಾಸಿಕ ಸ್ಥಳಗಳು ಬೆಳಕಿಗೆ ಬರಲು ಅನುಕೂಲವಾಗಲಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಸಂಪರ್ಕ ದಾರಿ

ನುಂಕಿಮಲೆ ಬೆಟ್ಟ ಬೆಂಗಳೂರು- ಬಳ್ಳಾರಿ ಹೆದ್ದಾರಿಯಲ್ಲಿನ ಮೇಗಳಹಟ್ಟಿ ಕ್ರಾಸ್‌ನಿಂದ 4 ಕಿ.ಮೀ ದೂರದಲ್ಲಿದೆ. ಸಾರಿಗೆ ಇಲಾಖೆ ಪ್ರತಿ ಭಾನುವಾರ ಬಸ್ ವ್ಯವಸ್ಥೆ ಮಾಡಿದೆ. ಉತ್ತಮ ರಸ್ತೆ ವ್ಯವಸ್ಥೆಯಿದೆ. ಮೊಳಕಾಲ್ಮುರು ಅಥವಾ ಹಾನಗಲ್‌ನಿಂದ ಆಟೊಗಳಲ್ಲಿ ಸಹ ಬಂದು ಹೋಗಬಹುದಾಗಿದೆ. ಸುತ್ತಲಿನ ಐತಿಹ್ಯ ಸ್ಥಳಗಳ ಪಟ್ಟಿ ಮಾಡಿ ಪ್ರತಿ ಭಾನುವಾರ ಬಸ್ ವ್ಯವಸ್ಥೆ ಮಾಡಿದಲ್ಲಿ ಬಂದು ಹೋಗುವವರಿಗೆ ಅನುಕೂಲವಾಗುತ್ತದೆ ಎಂಬುದು ಪ್ರವಾಸಿಗರ ಮನವಿ.

....

ಮೊಳಕಾಲ್ಮುರು ತಾಲ್ಲೂಕು ಶಿಲಾಯುಗ ಕಾಲದ ಐತಿಹ್ಯ ಹೊಂದಿದೆ. ಪ್ರಚಾರದ ಕೊರತೆಯಿಂದಾಗಿ ನಮ್ಮ ತಾಲ್ಲೂಕಿನ ಜನರಿಗೆ ಇದರ ಮಾಹಿತಿ ಇಲ್ಲದಂತಾಗಿದೆ. ಪ್ರವಾಸೋದ್ಯಮ ಇಲಾಖೆ ಮಾಹಿತಿ ಫಲಕಗಳನ್ನು ಹಾಕಿ ಪ್ರಚುರ ಪಡಿಸಬೇಕು.

-ಸೂಲೇನಹಳ್ಳಿ ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT