ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಹೊಲದ ತುಂಬ ಕಳೆ

ಶೀತಗಾಳಿ, ತೇವಾಂಶ ಹೆಚ್ಚಳ: ಮೆಕ್ಕೆಜೋಳ ಬೆಳವಣಿಗೆ ಕುಂಠಿತ
Last Updated 7 ಜುಲೈ 2022, 4:37 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ, ಶೀತ ವಾತಾವರಣದಿಂದ ಮೆಕ್ಕೆಜೋಳದ ಬೆಳವಣಿಗೆ ಕುಂಠಿತವಾಗಿದೆ.

ಬಿ.ದುರ್ಗ, ಕಸಬಾ ಹೋಬಳಿಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಒಂದು ತಿಂಗಳಾಗಿದೆ. ರಾಮಗಿರಿಯ ಕೆಲವು ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ತಾಳ್ಯ ಹೋಬಳಿಯಲ್ಲಿ ಈಗ ಬಿತ್ತನೆ ಆರಂಭವಾಗಿದೆ. ನಿರಂತರ ಸೋನೆ ಮಳೆಯಿಂದ ಈಗಾಗಲೇ ಬಿತ್ತನೆ ಆಗಿ 20ರಿಂದ 30 ದಿನಗಳ ಮೆಕ್ಕೆಜೋಳದ ಬೆಳೆಯ ಮಧ್ಯೆ ಹುಲ್ಲು, ಕಳೆ ಬೆಳೆದಿದ್ದು, ತೆಗೆಯಲು ಸಾಧ್ಯವಾಗುತ್ತಿಲ್ಲ. ಹೊಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಎಡೆಕುಂಟೆ ಹೊಡೆಯಲೂ ಆಗುತ್ತಿಲ್ಲ. ಮಳೆ ಹೀಗೆಯೇ ಮುಂದುವರಿದರೆ ಜೋಳದ ಬೆಳೆ ಬಿಳಿ ಬಣ್ಣಕ್ಕೆ ತಿರುಗುವ ಆತಂಕ ಇದೆ ಎನ್ನುತ್ತಾರೆ ರೈತರು.

ಕಸಬಾ, ರಾಮಗಿರಿ ಹೋಬಳಿಯ ಕೆಲವು ಕಡೆ ಹಾಗೂ ತಾಳ್ಯ ಹೋಬಳಿಯಲ್ಲಿ ತಡವಾಗಿ ಮಳೆ ಬಂದಿರುವುದರಿಂದ ಈಗ ಬಿತ್ತನೆ ಆರಂಭವಾಗಿದೆ. ಬಿತ್ತನೆಯಾದ ಹೊಲದಲ್ಲಿ ನೀರು ನಿಂತರೆ ಮೊಳಕೆಯೊಡೆದ ಮೆಕ್ಕೆಜೋಳ ಕೊಳೆಯುವ ಆತಂಕ ಇದೆ. ತೇವಾಂಶ ಮತ್ತಷ್ಟು ಹೆಚ್ಚಾದರೆ ಬಿತ್ತನೆ ಮಾಡಿದ ಬೀಜಗಳು ಕೊಳೆಯುವ ಸಂಭವ ಇದೆ. ಮೋಡ ಕವಿದ ವಾತಾವರಣದಿಂದ ಬೆಳವಣಿಗೆಯೂ ಕುಂಠಿತವಾಗುತ್ತಿದೆ ಎಂದು ಚೀರನಹಳ್ಳಿಯ ರೈತ ನರಸಿಂಹಪ್ಪ ಹೇಳಿದರು.

‌ತಾಲ್ಲೂಕಿನಲ್ಲಿ 28,500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಶೇ 70ರಷ್ಟು ಬಿತ್ತನೆ ಪೂರ್ಣಗೊಂಡಿದೆ. 36,000 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಿದ್ದು, ಇನ್ನೂ 7,500 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿದೆ.

ತಾಲ್ಲೂಕಿನಲ್ಲಿ ಜುಲೈ ಮೊದಲ ವಾರಕ್ಕೆ 21.1 ಸೆಂ.ಮೀ ವಾಡಿಕೆ ಮಳೆ ಇದ್ದು, ಈಗಾಗಲೇ 29 ಸೆಂ.ಮೀ. ಮಳೆ ಬಿದ್ದಿದೆ. 136 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 614 ಹೆಕ್ಟೇರ್‌ನಲ್ಲಿ ಹತ್ತಿ, 29 ಹೆಕ್ಟೇರ್‌ನಲ್ಲಿ ಅಲಸಂದೆ, 141 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಆಗಿದೆ.

---

ಒಂದು ವಾರದ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಜೋಳ ಮೊಳಕೆ ಒಡೆದಿದ್ದು, ಮಳೆ ಬಿಡುತ್ತಿಲ್ಲ. ಹೀಗಾದರೆ ಬೆಳೆ ಕೈಗೆ ಸಿಗುವುದು ಕಷ್ಟ.

–ನರಸಿಂಹಪ್ಪ, ರೈತ, ಚೀರನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT