ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕಟ್ಟಡ ತೆರವುಗೊಳಿಸದೇ ಕಾಮಗಾರಿ ಶುರು

ಬಿ.ಡಿ.ರಸ್ತೆ ವಿಸ್ತರಣೆ ಎರಡನೇ ಹಂತ ಆರಂಭ, ಸ್ವಾಧೀನ ಪ್ರಕ್ರಿಯೆ ನನೆಗುದಿಗೆ
Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷಿತ ಬಿ.ಡಿ.ರಸ್ತೆ ವಿಸ್ತರಣೆಯ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಮಾಲೀಕರ ಮನವೊಲಿಸುವ ಪ್ರಯತ್ನ ನಡೆಸಿದ ನಗರಸಭೆ, ಕಟ್ಟಡ ತೆರವುಗೊಳಿಸದೇ ಕಾಮಗಾರಿ ಕೈಗೆತ್ತಿಕೊಂಡಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿವೆ.

ಗಾಂಧಿ ವೃತ್ತದಿಂದ ಎಸ್‌ಬಿಎಂ ವೃತ್ತದ ವರೆಗಿನ ಒಂದು ಬದಿಯ ರಸ್ತೆ ವಿಸ್ತರಣೆಯ ಕಾಮಗಾರಿ ವಾರದಿಂದ ಶುರುವಾಗಿದೆ. ಟಾರು ರಸ್ತೆ, ಪಾದಚಾರಿ ಮಾರ್ಗ, ಚರಂಡಿಯನ್ನು ಕಿತ್ತುಹಾಕಿ ಹೊಸದಾಗಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಬಹುದಿನಗಳಿಂದ ಎದುರು ನೋಡುತ್ತಿದ್ದ ಕಟ್ಟಡ ತೆರವು ಕಾರ್ಯ ಮಾತ್ರ ನನೆಗುದಿಗೆ ಬಿದ್ದಿದೆ.

ಬಿ.ಡಿ.ರಸ್ತೆ ವಿಸ್ತರಣೆಯ ಕಾಮಗಾರಿಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಚಳ್ಳಕೆರೆ ಗೇಟಿನಿಂದ ಪ್ರವಾಸಿ ಮಂದಿರದವರೆಗಿನ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಪ್ರವಾಸಿಮಂದಿರದಿಂದ ಕನಕ ವೃತ್ತದವರೆಗಿನ ಕಾಮಗಾರಿ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಅಂದಾಜು ₹ 19 ಕೋಟಿ ವೆಚ್ಚವಾಗಲಿದೆ. ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಸ್ಥಳವನ್ನು ಸ್ವಾದೀನಕ್ಕೆ ಪಡೆಯುವ ಉದ್ದೇಶದಿಂದ ಗಾಂಧಿವೃತ್ತ ಹಾಗೂ ಪ್ರವಾಸಿಮಂದಿರದ ನಡುವಿನ ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿತ್ತು.

ರಸ್ತೆ ವಿಭಜಕದಿಂದ ಎರಡೂ ಬದಿಗೆ 13.5 ಮೀಟರ್‌ ವಿಸ್ತರಣೆ ಆಗುತ್ತಿದೆ. ರಸ್ತೆ ವಿಭಜಕ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ರಸ್ತೆಯ ಎರಡೂ ಬದಿಗೆ ಇನ್ನೂ ಐದು ಅಡಿಯಷ್ಟು ಜಾಗವನ್ನು ಸ್ವಾಧೀನ ಪಡೆಸಿಕೊಳ್ಳಬೇಕಿದೆ. ಇಲ್ಲಿ ಕೆಲ ಪ್ರಭಾವಿಗಳಿಗೆ ಸೇರಿದ ಹಲವು ವಾಣಿಜ್ಯ ಕಟ್ಟಡಗಳಿದ್ದು, ಸ್ವಾಧೀನಕ್ಕೆ ಪಡೆಯಬೇಕಿದೆ. ಸ್ವಾಧೀನ ಪ್ರಕ್ರಿಯೆ ನಡೆಯದಿರುವುದರಿಂದ ಚರಂಡಿ ನಿರ್ಮಾಣ ವಿಳಂಬವಾಗುವ ಸಾಧ್ಯತೆ ಇದೆ.

‘ಗಾಂಧಿ ವೃತ್ತದಿಂದ ಪ್ರವಾಸಿ ಮಂದಿರದವರೆಗಿನ ಬಿ.ಡಿ.ರಸ್ತೆ ವಿಸ್ತರಣೆಗೆ ಅಗತ್ಯವಿರುವ ಸ್ಥಳದ ಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಎರಡೂ ಬದಿಗೆ ಐದು ಅಡಿಯಷ್ಟು ಜಾಗವನ್ನು ಮಾತ್ರ ಸ್ವಾಧೀನಕ್ಕೆ ಪಡೆಯಬೇಕಿದೆ. ಕೆಲ ಕಟ್ಟಡದ ಮೆಟ್ಟಿಲು, ಬಾಗಿಲುವರೆಗೆ ತೆರೆವುಗೊಳಿಸಬೇಕಿದೆ. ಇನ್ನೂ ಕೆಲ ಕಟ್ಟಡಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಈಗಿರುವ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಸ್ವಾಧೀನಕ್ಕೆ ಪಡೆಯುತ್ತೇವೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು.

ರಸ್ತೆ ವಿಸ್ತರಣೆಗೆ ಅಗತ್ಯವಿರುವ ಸ್ಥಳವನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವಂತೆ ಕಟ್ಟಡಗಳ ಮಾಲೀಕರನ್ನು ನಗರಸಭೆ ಹಲವು ಬಾರಿ ಕೋರಿಕೊಂಡಿದೆ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಸಮ್ಮುಖದಲ್ಲಿ ಹಲವು ಸುತ್ತಿನ ಸಂದಾನ ಸಭೆಗಳೂ ನಡೆದಿವೆ. ನ್ಯಾಯಾಲಯದ ಮೊರೆಹೋಗಿ ಕಾಮಗಾರಿಗೆ ತೊಡಕುಂಟು ಮಾಡದಂತೆ ವ್ಯಾಪಾರಿಗಳನ್ನು ಕೋರಲಾಗಿತ್ತು. ಈ ಪ್ರಯತ್ನ ಸಫಲವಾದಂತೆ ಕಾಣುತ್ತಿಲ್ಲ.

‘ಕಟ್ಟಡದ ಮಾಲೀಕರಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿರಬಹುದು. ಇದರಿಂದ ಕಾಮಗಾರಿಗೆ ಯಾವುದೇ ತೊಂದರೆ ಇಲ್ಲ. ಸ್ವಯಂ ಪ್ರೇರಿತವಾಗಿ ಜಾಗ ಬಿಟ್ಟುಕೊಡುವಂತೆ ಕೋರಿಕೊಳ್ಳುತ್ತಿದ್ದೇವೆ. ಕಾಂಕ್ರೀಟ್‌ ರಸ್ತೆ, ವಿಭಜಕ ಸೇರಿ ಇತರ ಕಾಮಗಾರಿ ನಡೆಸುತ್ತೇವೆ. ಸೂಕ್ತ ಸಮಯದಲ್ಲಿ ಸ್ವಾಧೀನಕ್ಕೆ ಪಡೆಯುತ್ತೇವೆ’ ಎನ್ನುತ್ತಾರೆ ಪೌರಾಯುಕ್ತರು.

ಸ್ವಾಧೀನ ಪ್ರಕ್ರಿಯೆ ವಿಳಂಬ

ಬಿ.ಡಿ.ರಸ್ತೆಯ ಮೊದಲ ಹಂತದ ಕಾಮಗಾರಿ ಹಾಗೂ ದಾವಣಗೆರೆ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ನಿಗದಿತ ಸ್ಥಳವನ್ನು ಸ್ವಾಧೀನಕ್ಕೆ ಪಡೆಯುವಲ್ಲಿಯೂ ವಿಳಂಬವಾಗಿದೆ. ಕಾಮಗಾರಿ ಕೈಗೆತ್ತಿಕೊಂಡ ಬಳಿಕ ಗುರುತಿಸಿದ ಜಾಗವನ್ನು ಸ್ವಾಧೀನಕ್ಕೆ ಪಡೆದ ನಿದರ್ಶನಗಳಿವೆ.

ರಸ್ತೆ ವಿಸ್ತರಣೆಗೆ ಗುರುತಿಸಿದ ಜಾಗವನ್ನು ಬಿಟ್ಟುಕೊಡಲು ಕೆಲ ಧಾರ್ಮಿಕ ಕೇಂದ್ರಗಳು ಒಪ್ಪಿರಲಿಲ್ಲ. ಇಂತಹ ಸ್ಥಳಗಳನ್ನು ಬಿಟ್ಟು ಕಾಮಗಾರಿ ನಡೆಸಲಾಗಿತ್ತು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ಹಲವು ಬಾರಿ ನಗರ ಸಂಚಾರ ನಡೆಸಿ ಸೂಚನೆ ನೀಡಿದ್ದರು. ಬಳಿಕ ಕಾನೂನು ಪ್ರಕಾರ ಸ್ವಾಧೀನಕ್ಕೆ ಪಡೆಯಲಾಯಿತು.

***

ಸ್ವಾಧೀನ ಪ್ರಕ್ರಿಯೆ ಮುಗಿಯುವವರೆಗೂ ಕಾಯಲು ಸಾಧ್ಯವಿಲ್ಲ. ಅಭಿವೃದ್ಧಿ ಕಾಮಗಾರಿಗೆ ಈಗಿರುವ ರಸ್ತೆಯೇ ಸಾಕು. ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಗುರುತಿಸಿದ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗುವುದು.

–ಜೆ.ಟಿ.ಹನುಮಂತರಾಜು

ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT