ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿ ಸಕ್ಕರೆ ಕಾಲೇಜಿಗೆ ಕೇಂದ್ರದಿಂದ ₹4.20 ಕೋಟಿ ಅನುದಾನ: ಸಚಿವ ಡಿ. ಸುಧಾಕರ್

Published 9 ಜುಲೈ 2024, 14:23 IST
Last Updated 9 ಜುಲೈ 2024, 14:23 IST
ಅಕ್ಷರ ಗಾತ್ರ

ಹಿರಿಯೂರು: ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಯೋಜನೆಯಡಿ ₹ 4.20 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ವಾಣಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರೀಡೆ– ಸಾಂಸ್ಕೃತಿಕ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಅನುದಾನದಲ್ಲಿ ಕಾಲೇಜಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ₹ 1.88 ಕೋಟಿ, ಕಟ್ಟಡದ ನವೀಕರಣಕ್ಕೆ ₹ 1.06 ಕೋಟಿ, ಪೀಠೋಪಕರಣಕ್ಕೆ ₹ 1.01 ಕೋಟಿ, ಶೌಚಾಲಯ ನಿರ್ಮಾಣಕ್ಕೆ ₹ 25 ಲಕ್ಷ ಮೀಸಲಿಡಲಾಗಿದೆ. 2022– 23ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ₹ 1.40 ಕೋಟಿಯಲ್ಲಿ ಸಭಾಂಗಣ ಹಾಗೂ 2 ನೂತನ ಕೊಠಡಿ ನಿರ್ಮಾಣ, ನಗರೋತ್ಥಾನ ಯೋಜನೆಯಡಿ ಬಿಡುಗಡೆ ಆಗಿರುವ 15 ಲಕ್ಷದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುವುದು’ ಎಂದು ಸಚಿವರು ಮಾಹಿತಿ ನೀಡಿದರು.

ಮಹಿಳಾ ವಸತಿ ನಿಲಯಕ್ಕೆ ಬೇಡಿಕೆ: ಕಾಲೇಜು ಮುಂಭಾಗ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿನಿಲಯ ಆರಂಭಿಸಿದಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಪದವಿ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಂದು ಕೆಲವು ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರೆ, ಎಸ್ಸಿ, ಎಸ್ಟಿ ಹಾಸ್ಟೆಲ್ ಗಳು ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಇರುವ ಕಾರಣ ಕಾಲೇಜಿಗೆ ಬಂದು–ಹೋಗಲು ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಸಚಿವರಿಗೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ 2023–24 ನೇ ಸಾಲಿನಲ್ಲಿ ಬಿ.ಎ, ಬಿಕಾಂ ಹಾಗೂ ಬಿಬಿಎ ಪದವಿಗಳಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ದಿವ್ಯಾ, ಬಿಂದು, ಅಲೀಂ ಅವರನ್ನು ಸಚಿವರು ಸನ್ಮಾನಿಸಿದರು.

ಪ್ರಾಂಶುಪಾಲ ಪ್ರೊ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಪುರಸ್ಕಾರಕ್ಕೆ 1 ಲಕ್ಷ ರೂಪಾಯಿ ದತ್ತಿನಿಧಿ ಆರಂಭಿಸಿರುವ ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ, ಜೆ.ಆರ್.ಸುಜಾತಾ, ಸಿದ್ದಲಿಂಗಯ್ಯ, ಪ್ರೊ.ಧರಣೇಂದ್ರಯ್ಯ, ಜಿ.ಪ್ರೇಮ್ ಕುಮಾರ್, ಗಿಡ್ಡೋಬನಹಳ್ಳಿ ಅಶೋಕ್, ಲೋಕೇಶ್, ದಾದಾವಲಿ, ಬಿ. ತಿಪ್ಪೇಸ್ವಾಮಿ, ಕೆ.ವಿ. ರಘು, ರಮ್ಯರಾಜು, ಬಿ.ಆರ್. ಹೇಮಲತ, ಜನಾರ್ದನ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT