ಮಂಗಳವಾರ, ಆಗಸ್ಟ್ 16, 2022
20 °C
ಬೆಲೆ ಏರಿಕೆ ನಡುವೆಯೂ ಖರೀದಿ ಜೋರು; ಬಿಸಿಯೂಟಕ್ಕಿಲ್ಲ ಸದ್ಯಕ್ಕೆ ತೊಂದರೆ

ರಷ್ಯಾ-ಉಕ್ರೇನ್ ಯುದ್ಧ: ಕೈ ಸುಡುತ್ತಿದೆ ಅಡುಗೆ ಎಣ್ಣೆ, ಲೀಟರ್‌ಗೆ ₹50 ಏರಿಕೆ

ಕೆ.ಪಿ. ಓಂಕಾರಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರ ನಾಗಲೋಟದಲ್ಲಿ ಓಡುತ್ತಿದೆ. ಕಳೆದೊಂದು ವಾರದಲ್ಲಿ ಸೂರ್ಯಕಾಂತಿ ಎಣ್ಣೆ ಲೀಟರ್‌ಗೆ ಬರೋಬ್ಬರಿ ₹ 50 ಏರಿಕೆ ಕಂಡಿದೆ.

ಜಾಗತಿಕಮಟ್ಟದಲ್ಲಿ ಖಾದ್ಯ ತೈಲದ ದಾಸ್ತಾನು ಖಾಲಿಯಾಗಿರುವುದರಿಂದ ಬೆಲೆ ಹೆಚ್ಚಾಗುತ್ತಿದೆ. ಸೂರ್ಯಕಾಂತಿ ಎಣ್ಣೆಯ ಬಳಕೆ ಮೇಲೆ ಜನರು ಹೆಚ್ಚು ಅವಲಂಬಿತವಾಗಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ-ಪೂರೈಕೆ ನಡುವೆ ಸಮತೋಲನ ಏರ್ಪಡಿಸಲು ಯಾವುದೇ ಪರ್ಯಾಯವಿಲ್ಲದಂತಾಗಿದೆ.

ದೇಶದ ಬಹುತೇಕ ಅಡುಗೆ ಎಣ್ಣೆ ತಯಾರಿಕಾ ಘಟಕಗಳು ಕಚ್ಚಾವಸ್ತುವಿನ ಪೂರೈಕೆಗೆ ಉಕ್ರೇನ್‌ ಮೇಲೆ ಅವಲಂಬಿತವಾಗಿವೆ. ಯುದ್ಧ ಪ್ರಾರಂಭವಾದ ಒಂದೆರಡು ದಿನಕ್ಕೆ ರಫ್ತು ನಿಲುಗಡೆಯಾದ ಪರಿಣಾಮ ಬೆಲೆ ಏರಿಕೆ ಉಂಟಾಗಿದೆ.

ಚಿತ್ರದುರ್ಗದ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಒಕ್ಕೂಟ ನಿಯಮಿತ (ಕೆಒಎಫ್‌)ದಿಂದ ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ ಹಾಗೂ ದಾವಣಗೆರೆಗೆ ನಿತ್ಯ 35 ಸಾವಿರ ಮೆಟ್ರಿಕ್‌ ಟನ್‌ನಷ್ಟು ಅಡುಗೆ ಎಣ್ಣೆ ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಸೂರ್ಯಕಾಂತಿ ಎಣ್ಣೆಯ ಪಾಲು ಶೇ 70ರಷ್ಟಿದೆ. ಪ್ರಾರಂಭದಿಂದಲೂ ನಿಯಮಿತದ ಸೂರ್ಯಕಾಂತಿ ಎಣ್ಣೆಗೆ ಹೆಚ್ಚಿನ ಬೇಡಿಕೆಯಿದೆ. ಕೆಲ ದಿನಗಳಿಂದ ಆಂಧ್ರಪ್ರದೇಶ, ಚೆನ್ನೈ ಹಾಗೂ ಶ್ರೀರಂಗಪಟ್ಟಣದಿಂದ ರಫ್ತಾಗುತ್ತಿದ್ದ ವಿವಿಧ ಬ್ರಾಂಡ್‌ನ ಎಣ್ಣೆಗಳು ತಯಾರಿಕೆಯಿಲ್ಲದೆ ಸ್ಥಗಿತಗೊಂಡಿವೆ. ಆದ್ದರಿಂದ ಬೇಡಿಕೆಯ ಜತೆ ಅಭಾವ ಮತ್ತಷ್ಟು ಹೆಚ್ಚಾಗಿದೆ.

ಬೆಲೆ ಏರಿಕೆಯ ಆತಂಕದಲ್ಲಿರುವ ಹೆಚ್ಚಿನ ಗ್ರಾಹಕರು ಮನೆಗಳಲ್ಲಿ ಅಡುಗೆ ಎಣ್ಣೆಯ ದಾಸ್ತಾನಿಗೆ ಮುಂದಾಗಿದ್ದಾರೆ. ತಿಂಗಳಿಗೆ ಹತ್ತು ಲೀಟರ್‌ ಖರೀದಿಸುತ್ತಿದ್ದವರು ಸಹ ಈಗ 20ರಿಂದ 30 ಲೀಟರ್‌ ಖರೀದಿಸುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ಖರೀದಿಗೆ ಮಿತಿ ಹೇರಿದ್ದರೆ ಅನೇಕ ಕಡೆ ಯಾವುದೇ ನಿರ್ಬಂಧ ಹೇರುತ್ತಿಲ್ಲದಿರುವುದು ಕಂಡುಬರುತ್ತಿದೆ.

ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲದೆ ಇತರ ಖಾದ್ಯ ತೈಲ ದರ ಕೂಡ ಏರಿಕೆ ಕಂಡಿದೆ. ಆದರೆ, ಜನರು ಮಾತ್ರ ಸೂರ್ಯಕಾಂತಿಯ ಗುಂಗಿನಿಂದ ಹೊರಬರುತ್ತಿಲ್ಲ. ಇದನ್ನೇ ಕೆಲ ಅಂಗಡಿ ಮಾಲೀಕರು ದುರುಪಯೋಗಪಡಿಸಿಕೊಂಡು ಎಂಆರ್‌ಪಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಳ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಬಿಸಿಯೂಟಕ್ಕಿಲ್ಲ ಸಮಸ್ಯೆ: ಅಡುಗೆ ಎಣ್ಣೆಯ ಕೃತಕ ಅಭಾವ ಸೃಷ್ಟಿಯ ನಡುವೆಯೂ ಶಾಲೆಗಳ ಬಿಸಿಯೂಟಕ್ಕೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ನಿಯಮಿತದಿಂದ ತುಮಕೂರು, ದಾವಣಗೆರೆ ಹಾಗೂ ಬಳ್ಳಾರಿ ಶಾಲೆಗಳಿಗೆ ತಿಂಗಳಿಗೆ 1.50 ಲಕ್ಷ ಲೀಟರ್‌ ಅಡುಗೆ ಎಣ್ಣೆ ನೀಡಲಾಗುತ್ತಿದೆ. ಒಂದೆರಡು ದಿನ ತಡವಾದರೂ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದೇವೆ ಎನ್ನುತ್ತಾರೆ ನಿಯಮಿತದ ಅಧಿಕಾರಿಗಳು.

‘ಹಬ್ಬಗಳು ಪ್ರಾರಂಭವಾಗುತ್ತಿರುವ ಕಾರಣ ಜನರು ಆತಂಕದಲ್ಲೇ ದಿನಸಿಗಿಂತಲೂ ಹೆಚ್ಚಾಗಿ ಎಣ್ಣೆ ಖರೀದಿ ಮಾಡುತ್ತಿದ್ದಾರೆ. ನಿತ್ಯ 10 ಲೀಟರ್‌ನ 10 ಬಾಕ್ಸ್‌ ಖಾಲಿಯಾಗುತ್ತಿತ್ತು. ಆದರೆ, ಹತ್ತು ದಿನಗಳಿಂದ 15ರಿಂದ 20 ಬಾಕ್ಸ್‌ ಖರ್ಚಾಗುತ್ತಿವೆ. ಬೆಲೆ ಏರಿಕೆ ಆಗುತ್ತದೆ ಎಂಬ ಲೆಕ್ಕಾಚಾರ ಬಹುತೇಕರಲ್ಲಿದೆ. ಎಂಟ್ಹತ್ತು ದಿನಗಳಲ್ಲಿ ಎರಡು ದಿನಕ್ಕೊಮ್ಮೆ ಬೆಲೆಯಲ್ಲಿ ಬದಲಾವಣೆ ಕಾಣುತ್ತಿದೆ. ಆದರೆ, ಗ್ರಾಹಕರನ್ನು ಕಳೆದುಕೊಳ್ಳಬಾರದೆಂಬ ದೃಷ್ಟಿಯಿಂದ ನಿಗದಿತ ದರಕ್ಕಿಂತ ಕಡಿಮೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಚಿತ್ರದುರ್ಗದ ಪ್ರಾವಿಜನ್‌ ಸ್ಟೋರ್‌ ಮಾಲೀಕರು.

ಉಕ್ರೇನ್‌ನಿಂದ ಖಾದ್ಯ ತೈಲ ಉತ್ಪನ್ನಗಳನ್ನು ಹೊತ್ತು ಬರಬೇಕಿದ್ದ ಹಡಗಿನ ಸಂಚಾರದಲ್ಲಿ ವಿಳಂಬವಾದ್ದರಿಂದ ಬೆಲೆಯಲ್ಲಿ ಬದಲಾವಣೆ ಆಗುತ್ತಿದೆ. ಒಂದು ತಿಂಗಳವರೆಗೆ ನಿಯಮಿತದಲ್ಲಿ ದಾಸ್ತಾನಿದೆ. ಆದರೆ, ಎಂಆರ್‌ಪಿ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವಂತಿಲ್ಲ. ಹೆಚ್ಚು ದಾಸ್ತಾನು ಮಾಡಿ ಅಭಾವ ಸೃಷ್ಟಿಸಬಾರದು.

- ಬಿ.ಸಿ. ಆನಂದ್‌, ವ್ಯವಸ್ಥಾಪಕ ನಿರ್ದೇಶಕರು, ಕೆಒಎಫ್‌

ಕೊರೊನಾದಿಂದ ಬದುಕು ದುಸ್ಥರವಾಗಿದ್ದು, ಅಡುಗೆ ಎಣ್ಣೆ ದರ ಏಕಾಏಕಿ ಹೆಚ್ಚಾಗಿರುವುದು ಕುಟುಂಬದ ತಿಂಗಳ ಬಜೆಟ್‌ ಮೇಲೆ ಪರಿಣಾಮ ಬೀರಿದೆ. ಸರ್ಕಾರ ಕೂಡಲೇ ಬೆಲೆ ನಿಗದಿಪಡಿಸಬೇಕು.

- ವಿಶ್ವನಾಥ್‌, ಕಾರ್ಮಿಕ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು