ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವಿವಿಯಾಗಿ ಸಾಣೇಹಳ್ಳಿ- ಸಿ.ಎಂಗೆ ಮನವಿ: ಬಿ.ಎಸ್‌.ಯಡಿಯೂರಪ್ಪ

ನಾಟಕೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಭರವಸೆ
Last Updated 3 ನವೆಂಬರ್ 2021, 6:40 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ‘ನಾನು ಮುಖ್ಯಮಂತ್ರಿ ಆಗಿದ್ದರೆ ಈಗಲೇ ಸಾಣೇಹಳ್ಳಿಯನ್ನು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿ ರೂಪಿಸಲು ಆದೇಶ ನೀಡುತ್ತಿದ್ದೆ. ಆದರೆ, ಹಾಗೆ ಮಾಡಲು ಈಗ ನನ್ನಿಂದ ಸಾಧ್ಯವಿಲ್ಲ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿನಂತಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಮಂಗಳವಾರ ಸಂಜೆ ನಡೆದ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬದ ಸ್ಮರಣಾರ್ಥ ಸಿಜಿಕೆ ನುಡಿ–ಚಿತ್ರ ಟಂಕಸಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಗ್ರಾಮವೊಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿರುವ ಹಿಂದೆ ಪಂಡಿತಾರಾಧ್ಯ ಶ್ರೀಗಳ ಶ್ರಮವಿದೆ. ಅವರು ನಾಟಕ ಚಳವಳಿ ಪ್ರಾರಂಭಿಸಿದ್ದಾರೆ. ವಚನ ಸಂದೇಶ ಸಾರವನ್ನು ನಿರಂತರವಾಗಿ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ನಾಟಕ ಕಲೆ ನಶಿಸುವ ಈ ಕಾಲದಲ್ಲಿ ರಕ್ಷಿಸಿ, ಬೆಳೆಸುತ್ತಿರುವುದು ಸ್ವಾಗತಾರ್ಹ ಸಂಗತಿ’ ಎಂದರು.

‘ನಾಟಕ ಕಲೆ ನಶಿಸುವ ಈ ಕಾಲದಲ್ಲಿ ರಕ್ಷಿಸಿ, ಬೆಳೆಸುತ್ತಿರುವುದು ಸ್ವಾಗತಾರ್ಹ ಸಂಗತಿ. ಈ ಪುಣ್ಯ ಸ್ಥಳದಲ್ಲಿ ನಾಟಕ ಪ್ರದರ್ಶನದ ಜತೆಗೆ ವಿಭಿನ್ನವಾದ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಕಲೆಗಳಲ್ಲಿ ಜನರ ಜೀವನಾದರ್ಶ ಬಿಂಬಿಸುವ ಅಂಶಗಳಿವೆ. ಈ ಬಾರಿ ನಾಟಕೋತ್ಸವದ ಧ್ಯೇಯ ವಾಕ್ಯ ರೈತರನ್ನು ಉತ್ತೇಜಿಸುವಂತ್ತಿದೆ. ರೈತರಿಗಾಗಿ ನೀರಾವರಿ ಯೋಜನೆ ರೂಪಿಸಿದ್ದೇನೆ. ಅನ್ನದಾತರ ಹಿತ ಕಾಪಾಡಲು ಇನ್ನೂ ರೂಪಿಸ ಬೇಕಿರುವ ಯೋಜನೆಗಳು ಬಹಳಷ್ಟಿದೆ’ ಎಂದು ತಿಳಿಸಿದರು.

‘ನಮ್ಮೆಲ್ಲರ ಸುದೈವ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಕೆರೆಕಟ್ಟೆ ತುಂಬಿ ಈ ಬಾರಿ ರೈತರು ಒಳ್ಳೆಯ ಬೆಳೆ ಬೆಳೆದಿದ್ದಾರೆ. ಮುಂದೆಯೂ ರೈತರ ನೆಮ್ಮದಿಯ ಜೀವನಕ್ಕೆ ಭಗವಂತ ಸಹಕರಿಸಲಿ. ಕೋವಿಡ್‌ನಿಂದಾಗಿ ಎರಡು ವರ್ಷದಿಂದ ಈ ರೀತಿ ಭವ್ಯ ಕಾರ್ಯಕ್ರಮ ನೋಡಲು ನಮ್ಮೆಲ್ಲರಿಗೆ ಆಗಿರಲಿಲ್ಲ. ಇಂತಹ ಕಾರ್ಯಕ್ರಮಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದವು. ಬೆಳ್ಳಿಹಬ್ಬ ನೋಡುವ ಸೌಭಾಗ್ಯ ಸಿಕ್ಕಿದೆ’ ಎಂದು ಹೇಳಿದರು.

ಶಿವಸಂಚಾರ ನಾಟಕಗಳ ಉದ್ಘಾಟಿಸಿದ ಬೆಂಗಳೂರು ರಾಷ್ಟ್ರೀಯ ರಂಗಶಾಲಾ ಶಾಖೆ ನಿರ್ದೇಶಕಿ ವೀಣಾ ಶರ್ಮಾ ಭೂಸನೂರಮಠ, ‘ಸಣ್ಣ ಊರು ಸಾಣೇಹಳ್ಳಿಯನ್ನು ದೇಶದೆಲ್ಲೆಡೆ ಜನರು ನೋಡುವಂತೆ ಪಂಡಿತಾರಾಧ್ಯಶ್ರೀಗಳು ಮಾಡಿರುವುದು ಮೆಚ್ಚುಗೆಯ ಸಂಗತಿ. ಕಲೆ ಪ್ರದರ್ಶನದ ವಾತಾವರಣ ನಿರ್ಮಿಸಿರುವುದು ಜಗತ್ತಿಗೆ ಮಾದರಿ’ ಎಂದು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿದ ಬೆಂಗಳೂರು ಕವಿ ಡಾ. ದೊಡ್ಡರಂಗೇಗೌಡ, ‘ಕನ್ನಡಕ್ಕೆ ಭದ್ರವಾದ ಬೇರುಗಳಿರುವುದನ್ನು ಕನ್ನಡಿಗರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಈ ಭಾಷೆಯನ್ನು ಯಾರು ನಾಶ ಮಾಡಲು ಹಾಗೂ ಕನ್ನಡಿಗರಲ್ಲಿ ಭಾಷೆ ಬಗೆಗಿನ ಕೆಚ್ಚು, ಪರಾಕ್ರಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಯನ್ನು ಪ್ರತಿಪಾದಿಸಿದ್ದು ಜಗತ್ತಿಗೆ ಮಾದರಿ. ಬಸವಾದಿ ಶಿವಶರಣರ ಸಂದೇಶವನ್ನು ಪ್ರಸ್ತುತದಲ್ಲಿ ಸಾರುತ್ತಿರುವ ಇಂತಹ ಸಾಣೇಹಳ್ಳಿ ಶ್ರೀಮಠವು
ಸಾಂಸ್ಕೃತಿಕ ವಿಶ್ವವಿದ್ಯಾನಿಲಯವಾಗಿ ರೂಪಿಸಬೇಕು’ ಎಂದು ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

2021ರ ನಾಟಕೋತ್ಸವ ಉದ್ಘಾಟಿಸಿದ ರಂಗಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ‘ಇಲ್ಲಿನ ಶಿವಸಂಚಾರ ಕಲಾವಿದರು ಹಲವು ನಾಟಕಗಳನ್ನು ಹಲವೆಡೆ ಪ್ರದರ್ಶಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಸರ್ಕಾರದ ಯಾವುದೇ ಏಜೆನ್ಸಿ ಈ ರೀತಿ ನಾಟಕಗಳನ್ನು ಪ್ರದರ್ಶಿಸಿಲ್ಲ. ರಂಗ ಕಲಾವಿದರ ಹಿತ ಕಾಪಾಡಲು ಬಿ.ಎಸ್‌. ಯಡಿಯೂರಪ್ಪ ಅವರು ಮಾಡಿರುವ ಸಹಾಯ ಜೀವನದಲ್ಲಿ ಮರೆಯುವಂತಿಲ್ಲ’ ಎಂದು ತಿಳಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಲೋಕಕ್ಕೆ ಅನ್ನ ನೀಡುವ ಶಕ್ತಿಯಿರುವುದು ಕೃಷಿಕನಿಗೆ ಮಾತ್ರ. ಆತ ಬೇಡಿಕೆಗಳಿಗೆ ಧರಣಿಗೆ ಕೂತರೆ ಅನ್ನ ಇಲ್ಲದಂತಾಗುತ್ತದೆ. ಕೃಷಿಕನ ನೆಮ್ಮದಿಗೆ ಬೇಕಾದ ಎಲ್ಲಾ ಮೂಲಸೌಲಭ್ಯ ಸಿಕ್ಕಿದೆಯೇ ಎಂಬುದನ್ನು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ. ರೈತರನ್ನು ಕಡೆಗಣಿಸಿದರೆ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ. ರೈತರ ಹಿತ ಕಾಪಾಡಲು ಗಂಭೀರವಾಗಿ ಚಿಂತನೆ ಮಾಡಬೇಕಿದೆ’

ಸಾಂಸ್ಕೃತಿಕ ಶ್ರೀಮಂತಿಕೆ ಕಟ್ಟುವುದು ಕಟ್ಟಡ ಕಟ್ಟಿಸಿದೊಷ್ಟು ಸುಲಭವಲ್ಲ. ಬಿ.ಎಸ್‌. ಯಡಿಯೂರಪ್ಪ ಅವರಂತಹ ಜನರಪರ ಕಾಳಜಿಯ ಸೇವಕರನ್ನು ಕಾಣುವುದು ಅಪರೂಪ. ನಮ್ಮ ರಂಗಭೂಮಿ ಚಟುವಟಿಕೆಗೆ ಸಾಕಷ್ಟು ಸಹಕಾರ ಹಾಗೂ ನೆರವು ನೀಡಿದ್ದಾರೆ. ಸಾಂಸ್ಕೃತಿಕ ವಿಶ್ವವಿದ್ಯಾಲಯ ಮಾಡುವ ಜತೆಗೆ ರಂಗಶಾಲೆ ಚಟುವಟಿಕೆಗೆ ಅನುದಾನವನ್ನು ಸರ್ಕಾರ ಕೊಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡರು, ಶಾಸಕ ಮಾಡಾಳು ವಿರೂಪಾಕ್ಷಪ್ಪ, ಸಾಹಿತಿ ಚಂದ್ರಶೇಖರ್‌ ತಾಳ್ಯ ಅವರೂ ಹಾಜರಿದ್ದರು.

ಸಮಾರಂಭದಲ್ಲಿ ಶಿವಸಂಚಾರ 25ರ ಕೈಪಿಡಿ, ಹಿಂದಣ ಹೆಜ್ಜೆಯ ನೋಡಿ..., ಸಮಾಧಾನ ಕೃತಿಗಳು ಲೋಕಾರ್ಪಣೆಗೊಂಡವು. ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆಯ ಮಕ್ಕಳು ನೃತ್ಯ ರೂಪಕ ಪ್ರದರ್ಶಿಸಿದರು. ಚಂದ್ರಶೇಖರ್‌ ತಾಳ್ಯ ರಚನೆ ಹಾಗೂ ಛಾಯಾ ಭಾರ್ಗವಿ ನಿರ್ದೇಶನದ ‘ಒಕ್ಕಲಿಗ ಮುದ್ದಣ್ಣ’ ನಾಟಕವನ್ನು ಶಿವಸಂಚಾರ ಕಲಾವಿದರು ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT