ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಯೋಜನೆಯಲ್ಲಿ ಹಗರಣ

ತಾ. ಪಂ. ತ್ರೈಮಾಸಿಕ ಸಭೆಯಲ್ಲಿ ಶಾಸಕರು, ಜಿ.ಪಂ. ಸದಸ್ಯರ ಆಕ್ಷೇಪ
Last Updated 30 ನವೆಂಬರ್ 2020, 14:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಹಗರಣ, ರೈತರಿಗೆ ತಲುಪದ ಕೇಂದ್ರದ ಕೆಲ ಯೋಜನೆ, ಅಧಿಕಾರಿಗಳ ನಿರ್ಲಕ್ಷೆ, ವಿದ್ಯುತ್ ಸಮಸ್ಯೆ, ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ ಹೀಗೆ ವಿವಿಧ ಇಲಾಖೆಗಳ ವಿಷಯಗಳು ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚೆಯ ಮುನ್ನಲೆಗೆ ಬಂದವು.

ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕರಾದಿಯಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು ವಿವಿಧ ಇಲಾಖೆಗಳಲ್ಲಿ ಕರ್ತವ್ಯಲೋಪ ಎತ್ತು ಹಿಡಿಯುವ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಭಾಗ್ಯ ಬಸವರಾಜನ್, ‘ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಯಂತ್ರಗಳು ತುಕ್ಕು ಹಿಡಿಯುವ ಹಂತ ತಲುಪಿವೆ. ಕೆಲವೆಡೆ ಬಾಗಿಲು ಮುರಿದು ಹೋಗಿವೆ. ಹೀಗಾಗಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಏಜೆನ್ಸಿಗಳೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸರ್ಕಾರದ ಹಣ ಗುತ್ತಿಗೆದಾರರ ಪಾಲಾಗಿ, ಪೋಲಾಗುತ್ತಿದೆ’ ಎಂದು ದೂರಿದರು. ಇದಕ್ಕೆ ಸದಸ್ಯೆ ಜಯಪ್ರತಿಭಾ ದನಿಗೂಡಿಸಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ಕುಡಿಯುವ ನೀರಿನ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಕಳೆದ ಬಾರಿ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಹೊರ ರಾಜ್ಯದ ಕೆಲ ಏಜೆನ್ಸಿಯವರು ಗುತ್ತಿಗೆ ಪಡೆದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿತು. ಈ ಕುರಿತು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿ’ ಎಂದು ಸದಸ್ಯರಿಗೆ ಸೂಚಿಸಿದರು.

ಇನ್ನೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ನೀಡಿದ ಅಸಮರ್ಪಕ ಉತ್ತರಕ್ಕೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ನರಸಿಂಹರಾಜು ಸಿಡಿಮಿಡಿಗೊಂಡರು.

‘ನನ್ನ ಕ್ಷೇತ್ರದಲ್ಲಿ ಆರ್‌ಒ ಘಟಕ ಸ್ಥಾಪಿಸಿ 5 ವರ್ಷಗಳೇ ಕಳೆದಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ’ ಎಂದ ಅವರು, ‘ಗುತ್ತಿಗೆ ಪಡೆದವರನ್ನು ಸಮರ್ಥಿಸಿಕೊಳ್ಳುವುದನ್ನು ಅಧಿಕಾರಿಗಳು ಮೊದಲು ಬಿಡಬೇಕು. ಆಗ ಎಲ್ಲವೂ ಸರಿಹೋಗಲಿದೆ’ ಎಂದರು.

‘ನಗರ ವ್ಯಾಪ್ತಿಯ ಮುಖ್ಯ ರಸ್ತೆ ವಿಸ್ತರಣೆ ಸಂಬಂಧ ರಸ್ತೆ ಅಕ್ಕಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಕಾಮಗಾರಿಗೆ ಕೇವಲ ಸಿಮೆಂಟ್ ಇಟ್ಟಿಗೆ ಬಳಸಲಾಗುತ್ತಿದೆ. ಇದು ಹೆಚ್ಚು ದಿನ ಬಾಳಿಕೆ ಬರಲ್ಲ. ₹ 25 ಕೋಟಿಯ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ಚೌಕಾಸಿ ಯಾಕೆ’ ಎಂದು ಶಾಸಕರು ನಗರಸಭೆ ಎಂಜಿನಿಯರ್ ಮನೋಹರ್ ಅವರನ್ನು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಲಿಂಗರಾಜು, ಉಪಾಧ್ಯಕ್ಷೆ ಸಿ. ಶಾಂತಮ್ಮ ರೇವಣಸಿದ್ದಪ್ಪ, ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಾನಾಯ್ಕ, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT