ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಅರಳಿತು ಬಸ್; ಜನಾಕರ್ಷಣೆಯ ಕೇಂದ್ರವಾದ ದುಮ್ಮಿ ಶಾಲೆ

ರೈಲಿನ ಚಿತ್ರಕ್ಕೂ ಮನಸೋತ ಜನ
Last Updated 22 ಅಕ್ಟೋಬರ್ 2020, 2:51 IST
ಅಕ್ಷರ ಗಾತ್ರ

ಹೊಳಲ್ಕೆರೆ: ಶಾಲೆಯ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಂತೆ ಕಣ್ಣುಗಳು ಇದ್ದಕ್ಕಿದ್ದಂತೆ ಶಾಲೆಯ ಆವರಣದತ್ತ ಹೊರಳುತ್ತವೆ. ಇದೇನು ಕೆಎಸ್‌ಆರ್‌ಟಿಸಿ ಬಸ್ ಶಾಲೆಯ ಒಳಗೆ ಬಂದಿದೆ ಎಂದು ಕ್ಷಣಕಾಲ ಭಾಸವಾಗುತ್ತದೆ. ಮತ್ತೊಂದು ಬದಿಯ ಕೊಠಡಿಗಳತ್ತ ಕಣ್ಣು ಹಾಯಿಸಿದಾಗ ರೈಲು ನಿಂತ ಅನುಭವ.

ಶಾಲೆಯ ಆವರಣ ಪ್ರವೇಶಿಸಿ ಮೊಬೈಲ್‌ನಲ್ಲಿ ಒಂದೆರಡು ಫೋಟೊ ತೆಗೆದುಕೊಳ್ಳದೆ ಮುಂದೆ ಹೋಗಲು ಮನಸ್ಸಾಗುವುದಿಲ್ಲ. ಇನ್ನು ಸೆಲ್ಫಿ ಕ್ರೇಜ್‌ ಉಳ್ಳವರು ಗಂಟೆಗಟ್ಟಲೆ ನಿಂತು ವಿವಿಧ ಭಂಗಿಯಲ್ಲಿ ಫೋಟೊ ತೆಗೆದುಕೊಳ್ಳುವ ದೃಶ್ಯ ಇಲ್ಲಿ ಸಾಮಾನ್ಯ.

ತಾಲ್ಲೂಕಿನ ದುಮ್ಮಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣವಿದು.

ಶಾಲೆಯ ಗೋಡೆಯ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಮಾದರಿಯ ಚಿತ್ರ ಬಿಡಿಸಲಾಗಿದೆ. ಕೆಂಪು ಬಣ್ಣದ ಬಸ್ ಚಿತ್ರ ಎಲ್ಲರನ್ನು ಆಕರ್ಷಿಸುತ್ತದೆ. ಬಸ್ ಮುಂಭಾಗ ‘ದುಮ್ಮಿ ಎಕ್ಸ್ ಪ್ರೆಸ್’ ‘ದುಮ್ಮಿ-ಹೊಳಲ್ಕೆರೆ’ ಎಂದು ಬರೆಸಲಾಗಿದೆ. ಹೊರಭಾಗಲ್ಲಿ ‘ಕರ್ನಾಟಕ ಶಿಕ್ಷಣ ಸಾರಿಗೆ’ ಎಂದು ಬರೆಸಲಾಗಿದೆ.

ಚಿತ್ರ ಕಲಾವಿದ ಮಂಜುನಾಥ್ ಕೈಯಲ್ಲಿ ಸರ್ಕಾರಿ ಬಸ್ ಸುಂದರವಾಗಿ ಮೂಡಿ ಬಂದಿದ್ದು, ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಮತ್ತೊಂದು ಭಾಗದ ಕೊಠಡಿಗಳ ಮುಂದೆ ರೈಲಿನ ಚಿತ್ರ ಮೂಡಿದ್ದು, ನೀಲಿ ಬಣ್ಣದ ರೈಲು ಡಬ್ಬಿಗಳು ಆಕರ್ಷಕವಾಗಿವೆ.

ಶಾಲೆಯ ಸಹ ಶಿಕ್ಷಕ ರವಿಕುಮಾರ್ ಕಲ್ಪನೆಯಲ್ಲಿ ಈ ಚಿತ್ರಗಳು ಮೂಡಿಬಂದಿವೆ. ‘ಕೆಲವು ಕಡೆ ಶಾಲೆಗಳ ಗೋಡೆಗಳಿಗೆ ರೈಲು, ಬಸ್ ಚಿತ್ರಗಳನ್ನು ಬಿಡಿಸಿರುವ ಬಗ್ಗೆ ಫೇಸ್‌ಬುಕ್, ವಾಟ್ಸ್ಆ್ಯಪ್‌ಗಳಲ್ಲಿ ನೋಡುತ್ತಿದ್ದೆ. ನಮ್ಮ ಶಾಲೆಗೂ ಇದೇ ಮಾದರಿಯ ಚಿತ್ರಗಳನ್ನು ಬರೆಸಬೇಕು ಎಂದು ತೀರ್ಮಾನಿಸಿ ಶಾಲೆಯ ಶಿಕ್ಷಕರೊಂದಿಗೆ ಚರ್ಚಿಸಿದೆ. ಆಗ ಮುಖ್ಯಶಿಕ್ಷಕರಾಗಿದ್ದ ನೀಲಮ್ಮ ಹಾಗೂ ಸಹ ಶಿಕ್ಷಕ ಶಿವಕುಮಾರ್, ದೇವೇಂದ್ರಯ್ಯ, ಕನ್ಯಾಕುಮಾರಿ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾಮಣ್ಣ, ಸಿಆರ್‌ಪಿ ಬಸವರಾಜ್ ಹಾಗೂ ಶಾಲೆಯ ಎಲ್ಲ ಶಿಕ್ಷಕರು ಪ್ರೋತ್ಸಾಹ ನೀಡಿದರು. ಗ್ರಾಮಸ್ಥರಿಂದ ₹16,000 ದೇಣಿಗೆ ಸಂಗ್ರಹಿಸಿ ಬಸ್ ಚಿತ್ರ ಬರೆಸಿದೆ. ನನ್ನ ಬೈಕ್ ನಂಬರ್ ಅನ್ನೇ ಬಸ್ ನಂಬರ್ ಆಗಿ ಬರೆಸಿದ್ದೇನೆ’ ಎನ್ನುತ್ತಾರೆ ಶಿಕ್ಷಕ ರವಿಕುಮಾರ್.

‘ರೈಲಿನ ಚಿತ್ರ ಬರೆಸಿರುವ ಕೊಠಡಿಗಳು ಶಿಥಿಲಗೊಂಡಿದ್ದವು. ಜಿಲ್ಲಾ ಪಂಚಾಯಿತಿಯಿಂದ ಕೊಠಡಿಗಳನ್ನು ದುರಸ್ತಿ ಮಾಡಿಸಲಾಯಿತು. ದುರಸ್ತಿ ಮಾಡಿದವರಿಗೆ ‘ನಾವು ರೈಲಿನ ಮಾದರಿಯ ಚಿತ್ರ ಬರೆಸಬೇಕು. ನಮಗೆ ಅಗತ್ಯವಾದ ಬಣ್ಣ ತಂದುಕೊಡಿ’ ಎಂದು ಕೇಳಿಕೊಂಡೆವು. ಅವರು ಮರುಮಾತಾಡದೆ ನಾವು ಕೇಳಿದ ಬಣ್ಣ ಕೊಡಿಸಿದರು. ನಾನು
ಸಾಮಾನ್ಯ ಶಿಕ್ಷಕನಾದರೂ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ನಾನೇ ರೈಲಿನ ಮಾದರಿಯ ಸ್ಕೆಚ್ ತಯಾರಿಸಿದೆ. ಗ್ರಾಮದ ಕಲಾವಿದ ಹನುಮಂತಪ್ಪ ಅವರೊಂದಿಗೆ ಸೇರಿ ಚಿತ್ರ ಬಿಡಿಸಿದೆ’ ಎನ್ನುತ್ತಾರೆ ಶಿಕ್ಷಕ ರವಿಕುಮಾರ್.

***

ಮಕ್ಕಳ ದಾಖಲಾತಿ ಹೆಚ್ಚಳ

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಈ ವರ್ಷ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಕಳೆದ ವರ್ಷ 150 ಮಕ್ಕಳಿದ್ದ ಶಾಲೆಯಲ್ಲಿ ಈಗ 180 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಆಕರ್ಷಣೆಯಿಂದ ಈ ವರ್ಷ ಕಾನ್ವೆಂಟ್‌ಗಳಿಂದ 30 ವಿದ್ಯಾರ್ಥಿಗಳು ಇಲ್ಲಿಗೆ ಬಂದು ದಾಖಲಾಗಿದ್ದಾರೆ.

ಶಾಲೆಯ ಆಕರ್ಷಣೆಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದು ಶಿಕ್ಷಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT