ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹ ಕಾರ್ಯಕ್ಕಿಲ್ಲಿ ಗ್ರಹಣ

ಸಾರ್ವಜನಿಕರಿಗೆಜಾಗೃತಿಯ ಮದ್ದು,ಹಸಿಕಸ- ಒಣಕಸವಿಭಜನೆ ಇಲ್ಲ
Last Updated 17 ಫೆಬ್ರುವರಿ 2020, 6:08 IST
ಅಕ್ಷರ ಗಾತ್ರ

ನಾಯಕನಹಟ್ಟಿ:ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮ ಮನೆಯ ಕಸ ಬೀದಿ ಸೇರಿ ಎಲ್ಲೆಂದರಲ್ಲಿಕಸದ ರಾಶಿ ಉಂಟಾಗುತ್ತಿದೆ. ಇದರಿಂದ ಪಟ್ಟಣದ ಸೌಂದರ್ಯ ಹಾಳಾಗುತ್ತಿದ್ದು, ಹಲವು ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ದಾರಿ ಮಾಡಿಕೊಡುತ್ತಿದೆ.

ಸಮರ್ಪಕ ಕಸ ವಿಲೇವಾರಿ ಕಾರ್ಯಕ್ಕೆ ಎಷ್ಟೇ ಜಾಗೃತಿ ಮೂಡಿಸಿದರೂ ಪೌರಕಾರ್ಮಿಕರು ಮತ್ತು ಸಾರ್ವಜನಿಕರ ಮಧ್ಯೆ ಸಮನ್ವಯತೆ ಕೊರತೆ ಕಾಣುತ್ತಿದೆ. ಇದು ಕಸ ಸಂಗ್ರಹ ಕಾರ್ಯಕ್ಕೆ ಉಂಟಾಗುತ್ತಿರುವ ದೊಡ್ಡ ಹಿನ್ನಡೆಯಾಗಿದೆ. 16 ವಾರ್ಡ್‌ಗಳಿಂದ ಕೂಡಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ದಿನದಿಂದ ದಿನಕ್ಕೆ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ತಕ್ಕಂತೆ ಪಟ್ಟಣದ ಸ್ವಚ್ಛತೆಯ ನಿರ್ವಹಣೆ ಮಾತ್ರ ಸವಾಲಾಗುತ್ತಿದೆ. ಇಷ್ಟು ವಾರ್ಡ್‌ಗಳಿಂದ ನಿತ್ಯ ಸುಮಾರು 3.5 ಟನ್‌ ಕಸ ಉತ್ಪಾದನೆಯಾಗುತ್ತಿದೆ.

ವಾರಕ್ಕೊಮ್ಮೆ ಕಸ ವಿಲೇವಾರಿ:ಪಟ್ಟಣದ ವ್ಯಾಪ್ತಿ ದೊಡ್ಡದಾಗಿದೆ. ಎಲ್ಲ ವಾರ್ಡ್‌ಗಳಿಗೂ ತೆರಳಿ ನಿತ್ಯ ಕಸ ಸಂಗ್ರಹಿಸಲು ಪೌರಕಾರ್ಮಿಕರ ಕೊರತೆ ಇದೆ. ನಿಗದಿತ ಸಮಯಕ್ಕೆ ಕಸ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇಲ್ಲಿನ ಪೌರಕಾರ್ಮಿಕರು 16 ವಾರ್ಡ್‌ಗಳಲ್ಲಿ ನಿತ್ಯ ಎರಡೆರಡು ವಾರ್ಡ್‌ಗಳಿಗೆ ತೆರಳಿ ಕಸ ಸಂಗ್ರಹ, ವಿಲೇವಾರಿ ಕಾರ್ಯ ಮಾಡುತ್ತಿದ್ದಾರೆ. ವಾರಕ್ಕೆ ಒಂದು ಬಾರಿ ಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ.

ಕಸ ಸಂಗ್ರಹ ಬುಟ್ಟಿ ಇಲ್ಲ:ಪಟ್ಟಣದ ಯಾವ ಸ್ಥಳದಲ್ಲೂ ಕಸ ಸಂಗ್ರಹ ತೊಟ್ಟಿಗಳಾಲೀ, ಬುಟ್ಟಿಗಳಾಗಲೀ ಇಲ್ಲ. ಪಟ್ಟಣದಲ್ಲಿ ಯಾವಾಗಲೂ ಜನಸಂದಣಿಯಿಂದ ಕೂಡಿರುವ ಹಳೇ ಬಸ್‌ನಿಲ್ದಾಣ, ಪಾದಗಟ್ಟೆ, ಸಮುದಾಯ ಆರೋಗ್ಯ ಕೇಂದ್ರ, ವಾಲ್ಮೀಕಿ ವೃತ್ತ, ತೇರುಬೀದಿ, ಹೊರಮಠ, ಒಳಮಠ, ಹಟ್ಟಿಮಲ್ಲಪ್ಪನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಜೆ.ಸಿ. ರಸ್ತೆ ಸೇರಿ ಎಲ್ಲಿಯೂ ಕಸ ಹಾಕಲು ತೊಟ್ಟಿಗಳಿಲ್ಲ.

ಇದರಿಂದ ಈ ಎಲ್ಲ ಸ್ಥಳಗಳಲ್ಲೂ ನಿತ್ಯ ರಾಶಿ ರಾಶಿ ಕಸ ಸೃಷ್ಟಿಯಾಗಿ ರಸ್ತೆಯ ಅಕ್ಕಪಕ್ಕದಲ್ಲಿ ಬಿದ್ದಿರುತ್ತದೆ. ಅಂಗಡಿ, ಹೋಟೆಲ್‌ಗಳು, ತರಕಾರಿಗಳ ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಕಸವನ್ನು ವ್ಯಾಪಾರಸ್ಥರು ಸಂಜೆ ವೇಳೆಗೆ ರಸ್ತೆ ಮೇಲೆಯೇ ಬಿಸಾಡಿ ಹೋಗುತ್ತಾರೆ. ಸ್ವಲ್ಪ ಗಾಳಿ ಬೀಸಿದರೂ ಪಟ್ಟಣದ ತುಂಬ ಕವರ್‌, ಟೀ ಲೋಟ ಕಸ
ಹರಡಿ ಪಟ್ಟಣದ ಸೌಂದರ್ಯ ಹಾಳುಮಾಡುತ್ತಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಹುತೇಕ ವಾರ್ಡ್‌ಗಳ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಸಾರ್ವಜನಿಕರು ಬೀದಿಗೆ ತಂದು ಸುರಿಯುತ್ತಿದ್ದಾರೆ.
ಇದರಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹ ಕಾರ್ಯ ಮೂಲೆಗುಂಪಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಸಾರ್ವಜನಿಕರ ಅಸಹಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ನೇರವಾಗಿ ಬೀದಿಗೆ ಚರಂಡಿಗಳಿಗೆ ಸುರಿಯುತ್ತಿದ್ದಾರೆ. ಇದರಿಂದ ಚರಂಡಿಗಳಲ್ಲಿ ಕಸ ಸಂಗ್ರಹವಾಗಿ ಸೊಳ್ಳೆಗಳ ಆಶ್ರಯ ತಾಣಗಳಾಗಿ ದುರ್ವಾಸನೆ ಬೀರುತ್ತಿವೆ.

ವಿಂಗಡಣೆ ಆಗದ ಹಸಿ-ಒಣ ಕಸ:ನಗರ ಸ್ಥಳೀಯಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ–ಮನೆಯಿಂದ ಸಂಗ್ರಹಿಸಿದಕಸ ಮೂಲದಲ್ಲಿಯೇ ವಿಂಗಡಣೆಯಾದರೆ ಅನುಕೂಲ.ಹಸಿ ಕಸ, ಒಣ ಕಸ ಮತ್ತು ಹಾನಿಕಾರಕ ಕಸವನ್ನು ವಿಂಗಡಿಸಿ ಸಂಗ್ರಹಿಸಲು ಪ್ರತ್ಯೇಕ ಆಟೊ ಟಿಪ್ಪರ್, ಟ್ರ್ಯಾಕ್ಟರ್‌ ವ್ಯವಸ್ಥೆ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಆಟೊ ಟಿಪ್ಪರ್‌ ಕೊರತೆ ಇದೆ.

ಎಲ್ಲ ಮನೆಗಳಿಗೂ ನೀಲಿ ಮತ್ತು ಹಸಿರು ಬಣ್ಣದ ಎರಡು ಕಸದ ಬುಟ್ಟಿಗಳನ್ನು ಉಚಿತವಾಗಿ ಪಟ್ಟಣ ಪಂಚಾಯಿತಿ ನೀಡಬೇಕು. ಇವುಗಳನ್ನು ಬಳಸಿ ಸಾರ್ವಜನಿಕರು ಮನೆಯಲ್ಲಿಯೇ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡಬೇಕು. ಆದರೆ, ಇಲ್ಲಿಯವರೆಗೂ ಪಟ್ಟಣ ಪಂಚಾಯಿತಿ ಸ್ಥಳೀಯ ಆಡಳಿತ ಯಾವುದೇ ಬುಟ್ಟಿಗಳನ್ನು ನೀಡಿಲ್ಲ. ಹೀಗಾಗಿ, ನಾಗರಿಕರು ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಮತ್ತು ಒಣ ಕಸವೆಂದು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡದೇ ಹೊರಗೆ ಚೆಲ್ಲುತ್ತಾರೆ.

ಖಾಲಿ ನಿವೇಶನದಲ್ಲಿ ತ್ಯಾಜ್ಯ:ಮನೆಗಳಲ್ಲಿ ನಿತ್ಯ ಸಂಗ್ರಹವಾಗುವ ಹಸಿ ಮತ್ತು ಒಣ ಕಸ ಹಾಗೂ ಹಾನಿಕಾರಕ ಕಸವನ್ನು ಸಾರ್ವಜನಿಕರು ಖಾಲಿ ನಿವೇಶನಗಳಲ್ಲಿ ಸುರಿಯುತ್ತಿದ್ದಾರೆ. ಹೀಗೆ ಸುರಿದ ಕಸವನ್ನು ತೆಗೆದುಕೊಂಡು ಹೋಗಲು ಪಟ್ಟಣ ಪಂಚಾಯಿತಿ ಸಿಬ್ಬಂದಿ ವಾರಕ್ಕೊಮ್ಮೆ ಬರುತ್ತಾರೆ.ಬೀದಿಯಲ್ಲೇ ವಾರದ ತುಂಬಾ ಸಂಗ್ರಹವಾಗುವ ಕಸವು ದ್ವಿಗುಣಗೊಳ್ಳುತ್ತದೆ. ಹಸಿ ಕಸ ಕೊಳೆತು ದುರ್ವಾಸನೆ ಬೀರುತ್ತದೆ. ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಸುತ್ತಿದೆ.

ಪಟ್ಟಣ ಪಂಚಾಯಿತಿ ನಿಯಮಾವಳಿ ಪ್ರಕಾರ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ,
ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಪೌರಕಾರ್ಮಿಕರು ಇಲ್ಲ. 5 ಜನ ಕಾಯಂ, 9 ಜನ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಸ ಸಾಗಣೆಗೆ ಕೇವಲ ಒಂದು ಟ್ರ್ಯಾಕ್ಟರ್‌ ಮಾತ್ರ ಇದೆ. ಇದರಿಂದ ನಿಗದಿತ ಗುರಿ ಸಾಧನೆ ಕಷ್ಟಸಾಧ್ಯವಾಗುತ್ತಿದೆ ಎಂಬುದು ಪಟ್ಟಣ ಪಂಚಾಯಿತಿ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT