ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತ ಸಮುದಾಯಗಳು ಒಗ್ಗಟ್ಟಾಗಬೇಕಿದೆ

ಸಂತ ಸೇವಲಾಲ್ ಜಯಂತ್ಯುತ್ಸವದಲ್ಲಿ ಮಾಜಿ ಸಚಿವ ಆಂಜನೇಯ ಅಭಿಮತ
Published 29 ಫೆಬ್ರುವರಿ 2024, 16:19 IST
Last Updated 29 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಂಬಾಣಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಸಂಘಟಿತ ಹೋರಾಟ ನಡೆಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಲಾಲ್ ಮಹಾರಾಜರ 285ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ದಲಿತ ಸಮುದಾಯದ ಭಾಗವಾಗಿರುವ ಲಂಬಾಣಿ ಜನಾಂಗ ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.

‘ದಲಿತರಿಗೂ ಮತ್ತು ಲಂಬಾಣಿಗರಿಗೂ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡು ಸಮುದಾಯಗಳು ಸಹೋದರ ಸಮುದಾಯಗಳಾಗಿದ್ದು, ಜೊತೆ-ಜೊತೆಯಲ್ಲಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ಆಗ ಎಲ್ಲಾ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಾಧ್ಯವಿದೆ’ ಎಂದರು.

‘ಪರಿಶಿಷ್ಟ ಜಾತಿ ಜನರು ರಾಜಕೀಯವಾಗಿ ಒಗ್ಗಟ್ಟಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ದಿನ ಎದುರಾಗಿದೆ. ತಮ್ಮ ತೀರ್ಮಾನವೇ ಅಂತಿಮವಾಗಿದೆ. ಇಂತಹ ಸಂದರ್ಭದಲ್ಲಿ ಶೋಷಿತರು ಒಂದಾಗಬೇಕು’ ಎಂದು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಂತ ಸೇವಲಾಲ್ ಮಹಾರಾಜರ 285ನೇ ಜಯಂತ್ಯುತ್ಸವದ ಮೆರವಣಿಗೆಗೆ ಭಯಾಗಡ್ ಮಹಾಮಠದ ಮಠ್‌ ಸಮಿತಿ ಅಧ್ಯಕ್ಷ ಎನ್‌.ಹನುಮಂತ ನಾಯ್ಕ್ ಚಾಲನೆ ನೀಡಿದರು. ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ಭಾಗದಿಂದ ಆಗಮಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಸಾಗಿದರು.

ಸಮಾರಂಭದಲ್ಲಿ ಪತ್ರಕರ್ತರಾದ ಟಿ.ಕೆ.ಬಸವರಾಜ್‌, ತಿಪ್ಪೇಸ್ವಾಮಿ ಸಂಪಿಗೆ, ಎಚ್‌.ಲಕ್ಷ್ಮಣ್, ಮಹಮ್ಮದ್‌ ಹನೀಫ್‌, ಮಹಮ್ಮದಿ ಅವರನ್ನು ಸನ್ಮಾನಿಸಲಾಯಿತು. ಸಂತ ಸೇವಲಾಲ್‌ ಕುರಿತು ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್‌.ವಿಶ್ವಸಾಗರ್‌ ಉಪನ್ಯಾಸ ನೀಡಿದರು.

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‌ ಕುಮಾರ್‌, ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್‌. ನಿಂಗಾನಾಯ್ಕ್‌. ಸ್ಪೂರ್ತಿ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ರೂಪಾನಾಯ್ಕ್, ಚಳ್ಳಕೆರೆ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನ ಅಧ್ಯಕ್ಷೆ ಗೀತಾ ಹನುಮಂತ ನಾಯ್ಕ್‌, ಮುಖಂಡರಾದ ತಿಪ್ಪೇಶ್‌ ನಾಯ್ಕ್‌, ಅನಿಲ್‌, ಜಿ.ಎಸ್‌.ಟಿ.ಚಂದ್ರು, ಗಣೇಶ್‌ ನಾಯ್ಕ್‌, ಈಶ್ವರ್‌ ನಾಯ್ಕ್‌, ಎಲ್‌.ರಮೇಶ್‌ ನಾಯ್ಕ್‌, ಲೋಕೇಶ್‌ ನಾಯ್ಕ್‌, ವಲಸೆ ಶಂಕರನಾಯ್ಕ್‌ ಇದ್ದರು.

ಲಂಬಾಣಿ ಸಮುದಾಯದಲ್ಲಿ ಹಿರಿಯ ಮುಖಂಡರಿದ್ದಾರೆ. ಅವರಿಗೆ ಈವರೆಗೂ ಸೂಕ್ತ ರಾಜಕೀಯ ಸ್ಥಾನಮಾನ ದೊರೆತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಖುದ್ದು ಮಾತನಾಡಿ ರಾಜಕೀಯದಲ್ಲಿ ಸ್ಥಾನಮಾನ ದೊರೆಯುವಂತೆ ಮಾಡುತ್ತೇನೆ.

ಎಚ್‌.ಆಂಜನೇಯ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT