ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಶರಣ ಸಂಸ್ಕೃತಿ ಉತ್ಸವ 22ರಿಂದ

ಜನಜಂಗುಳಿ ಸೇರುವ ಕಾರ್ಯಕ್ರಮ ರದ್ದು, ಕೋವಿಡ್ ಸೋಂಕಿನ ಬಗ್ಗೆಯೂ ಜಾಗೃತಿ
Last Updated 19 ಅಕ್ಟೋಬರ್ 2020, 11:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವ ಅ.22ರಿಂದ 28ರವರೆಗೆ ಸರಳವಾಗಿ ನಡೆಯಲಿದ್ದು, ಮಠದಲ್ಲಿ ಭರದ ಸಿದ್ಧತೆ ಶುರುವಾಗಿವೆ. ಕೊರೊನಾ ಸೋಂಕಿನ ಕಾರಣಕ್ಕೆ ಉತ್ಸವದ ಕೆಲ ಆಚರಣೆಗಳನ್ನು ಕೈಬಿಡಲಾಗಿದೆ.

‘ಕೊರೊನಾ ಸೋಂಕು ಆವರಿಸಿಕೊಂಡು ಹತ್ತು ತಿಂಗಳು ಸಮೀಪಿಸುತ್ತಿದೆ. ಮುಕ್ತ ಜೀವನಕ್ಕೆ ಸೋಂಕು ಅಡ್ಡಿಯಾಗಿದೆ. ಪರಂಪರಾಗತವಾಗಿ ಬಂದಿರುವ ಧಾರ್ಮಿಕ ಉತ್ಸವ ಆಯೋಜಿಸಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಕೋವಿಡ್‌ ಕಾರಣಕ್ಕೆ ಸರ್ಕಾರ ರೂಪಿಸಿದ ಚೌಕಟ್ಟಿನ ಒಳಗೆ ಉತ್ಸವ ನಡೆಯಲಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೆಚ್ಚು ಭಕ್ತರು ಸೇರದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಾಲ್ಕು ವೇದಿಕೆಗಳನ್ನು ರೂಪಿಸಲಾಗಿದ್ದು, ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಅಂತರ ಪಾಲಿಸುವಂತೆ ಭಕ್ತರಿಗೆ ತಿಳಿವಳಿಕೆ ನೀಡಲಾಗುತ್ತದೆ. ಜನಜಂಗುಳಿ ಸೇರುವ ಜನಪದ ಕಲಾಮೇಳ, ಕುಸ್ತಿಪಂದ್ಯ, ಜಮುರಾ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ. ಯುಟ್ಯೂಬ್ ಹಾಗೂ ಫೇಸ್‍ಬುಕ್‌ ನೇರ ಪ್ರಸಾರವನ್ನು ಭಕ್ತರು ವೀಕ್ಷಿಸಬಹುದು’ ಎಂದು ಹೇಳಿದರು.

‘ಅ.22ರಂದು ಜನಪದ ಕಲೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಜನಪದ ಗೀತೆ, ಭಜನೆ ಹಾಗೂ ವೀರಗಾಸೆಯಲ್ಲಿ ಸ್ಪರ್ಧೆ ನಡೆಯಲಿವೆ. ಅ.23ರಂದು ರಕ್ತದಾನ ಹಾಗೂ ಪ್ಲಾಸ್ಮಾದಾನ ಶಿಬಿರ ಆಯೋಜಿಸಲಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ಅಗತ್ಯವಿದೆ ಎಂಬುದನ್ನು ಭಕ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ವಚನಕಮ್ಮಟ ಪರೀಕ್ಷೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದರು.

‘ಅದೇ ದಿನ ಶ್ವಾನ ಪ್ರದರ್ಶನ ನಡೆಯಲಿದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಗುತ್ತದೆ. ಅ.24ರಿಂದ 28ರವರೆಗೆ ನಿತ್ಯವೂ ಸಹಜ ಶಿವಯೋಗ ಮತ್ತು ಬಸವತತ್ವ ಧ್ವಜಾರೋಹಣ ನಡೆಯಲಿದೆ. ಜೋಡೆತ್ತು ಮತ್ತು ಸಾಕು ಪ್ರಾಣಿಗಳ ಪ್ರದರ್ಶನ ಅ.24ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೈಗಾರಿಕಾ ಹಾಗೂ ಕೃಷಿ ವಸ್ತುಪ್ರದರ್ಶನ ಅಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. ಬಯಲುಸೀಮೆ ನೀರಾವರಿ ಯೋಜನೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ನೀರಾವರಿ ಸಚಿವ ರಮೇಶ ಜಾರಕಿಹೊಳಿ, ಕೃಷಿ ಸಚಿವ ಬಿ.ಸಿ.ಪಾಟೀಲ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 6.30ಕ್ಕೆ ಮುರುಘಾಶ್ರೀ ಹಾಗೂ ಭರಮಣ್ಣನಾಯಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ಹೇಳಿದರು.

‘ಅ.25ರಂದು ಭಾನುವಾರ ಮಹಿಳಾ ಗೋಷ್ಠಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿಚಾರ ಸಂಕಿರಣ ನಡೆಯಲಿವೆ. ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭಾಗವಹಿಸಲಿದ್ದಾರೆ. ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲಿಸುತ್ತಿರುವ ಗೀತನಮನದಲ್ಲಿ ರಾಜೇಶ್‌ ಕೃಷ್ಣನ್ ಮತ್ತು ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ’ ಎಂದರು.

‘ಅ.26ರಂದು ಸರಳ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ವಾಹನದಲ್ಲಿ ಹೊರಟು ಕೋಟೆಯ ಪ್ರಾಚೀನ ಮಠ ತಲುಪಲಾಗುತ್ತದೆ. ಅಂದು ಸಂಜೆ 6.30ಕ್ಕೆ ನಡೆಯುವ ಮಕ್ಕಳ ಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಪಾಲ್ಗೊಳ್ಳಲಿದ್ದಾರೆ. ವ್ಯಸನಮುಕ್ತ ಸಮಾಜದ ಕುರಿತು ಅ.27ರಂದು ವಿಚಾರ ಸಂಕಿರಣ ನಡೆಯಲಿದೆ. ಹೊಳಲ್ಕೆರೆ ತಾಲ್ಲೂಕಿನ ಒಂಟಿಕಂಬದ ಮಠದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ ಜರುಗಲಿದೆ’ ಎಂದು ವಿವರಿಸಿದರು.

ಮುರುಘಾಶ್ರೀ ಮ್ಯೂಸಿಯಂ ಸಿದ್ಧ

1ರಿಂದ 20ನೇ ಶತಮಾನದವರೆಗಿನ ಅಪೂರ್ವ ವಸ್ತುಗಳನ್ನು ಒಳಗೊಂಡಿರುವ ಸುಸಜ್ಜಿತ ‘ಮುರುಘಾಶ್ರೀ ವಸ್ತುಸಂಗ್ರಹಾಲಯ’ ಲೋಕಾರ್ಪಣೆಗೆ ಸಜ್ಜಾಗಿದೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘ದೇಶದ ವಿವಿಧೆಡೆಯ ವಸ್ತುಗಳನ್ನು ಮ್ಯೂಸಿಯಂ ಒಳಗೊಂಡಿದೆ. ತುಂಬಾ ಕಾಳಜಿವಹಿಸಿ ವಸ್ತುಸಂಗ್ರಹಾಲಯ ರೂಪಿಸಲಾಗಿದೆ. ನಿತ್ಯ ನಾಲ್ಕು ಗಂಟೆ ವಸ್ತುಸಂಗ್ರಹಾಲಯದ ಒಳಗೆ ಕಳೆದಿದ್ದೇನೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅ.24ರಂದು ಉದ್ಘಾಟಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮಠದ ನಾಲ್ಕು ಪೀಠಾಧ್ಯಕ್ಷರಿಗೆ ಸಲ್ಲಿಸಿದ ಭಿನ್ನವತ್ತಳೆ, ಪಲ್ಲಕ್ಕಿ, ಪೂಜಾ ಸಾಮಗ್ರಿ, ಪೀಠೋಪಕರಣ ಮ್ಯೂಸಿಯಂನಲ್ಲಿ ಇರಲಿವೆ. ಅಪರೂಪದ ಚಿತ್ರ, ದೇಶ ಮತ್ತು ವಿದೇಶದ ನೋಟು, ಹಸ್ತಪ್ರತಿ, ಅಂಚೆಚೀಟಿ, ಆಯುಧಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತಿದೆ’ ಎಂದರು.

ನಾಟಕ ರಚಿಸಿದ ಶರಣರು

ಲಾಕ್‌ಡೌನ್‌ ಸಂದರ್ಭದಲ್ಲಿ ಅಹಾರ ಧಾನ್ಯದ ಕಿಟ್‌ ವಿತರಿಸಿದ ಶಿವಮೂರ್ತಿ ಮುರುಘಾ ಶರಣರು ಮೂರು ನಾಟಕಗಳನ್ನು ರಚಿಸಿದ್ದಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಏನು ಮಾಡಿದಿರಿ ಎಂಬ ಪ್ರಶ್ನೆ ಬಹುತೇಕರಿಗೆ ಎದುರಾಗುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಗ್ರಂಥಗಳ ಅಧ್ಯಯನ ಅನಿವಾರ್ಯ. ಪುಸ್ತಕಗಳ ಅಧ್ಯಯನದೊಂದಿಗೆ ಕೃತಿ ರಚಿಸಿದೆ. ತೀರಾ ಹಳೆಯ ಕಾಲದ ತಾಳೆಗರಿಯಲ್ಲಿ ರಚಿಸಿದ ಸಾಹಿತ್ಯ ಅಧ್ಯಯನ ಮಾಡಿದೆ. 80 ವರ್ಷ ಹಳೆಯದಾದ ಫೋಟೊ ಆಲ್ಬಂಗಳನ್ನು ವೀಕ್ಷಿಸಿದೆ’ ಎಂದು ವಿವರಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್ ಶಿವಕುಮಾರ್, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಎಸ್.ಷಣ್ಮುಖಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT