ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಪ್ರಜ್ಞೆಯ ಅನುಭಾವಿ ಅಕ್ಕಮಹಾದೇವಿ: ಶಿವಾಚಾರ್ಯ ಸ್ವಾಮೀಜಿ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 12 ಆಗಸ್ಟ್ 2021, 6:30 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ‘ಕನ್ನಡ ನಾಡಿನ ಇತಿಹಾಸದಲ್ಲಿ ಅಕ್ಕಮಹಾದೇವಿಯಂತಹ ಅನುಭಾವಿ ಮತ್ತು ವೈಚಾರಿಕ ಪ್ರಜ್ಞೆಯ ದಿಟ್ಟ ಮಹಿಳೆಯನ್ನು ಕಾಣುವುದು ಅಪರೂಪ. ಆದರ್ಶ ಬದುಕಿನ ಪುರುಷ ಮತ್ತು ಮಹಿಳೆ ಯಾರೆಂದರೆ ತಕ್ಷಣ ನೆನಪಾಗುವುದು ಬಸವಣ್ಣ ಮತ್ತು ಅಕ್ಕಮಹಾದೇವಿ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 11ನೇ ದಿನವಾದ ಬುಧವಾರ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಣ್ಣ ಸನ್ಯಾಸಿಯೂ ಅಲ್ಲ, ಸ್ವಾಮಿಯೂ ಅಲ್ಲ. ಅವರನ್ನು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ‘ಗೃಹಸ್ಥ ಜಗದ್ಗುರು’ ಎಂದು ಗೌರವಿಸಿದ್ದಾರೆ. ಹಾಗಂತ ಬಸವಣ್ಣನವರು ಒಂದು ಮಠದ ಜಗದ್ಗುರುಗಳೇ ಎಂದರೆ ಅಲ್ಲ. ಅವರಿಗೆ ನೀಲಾಂಬಿಕೆ, ಗಂಗಾಂಬಿಕೆ ಎನ್ನುವ ಪತ್ನಿಯರಿದ್ದರು. ಅಂಥವರು ಜಗದ್ಗುರು ಆಗಲು ಹೇಗೆ ಸಾಧ್ಯ? ಜಗದ್ಗುರು ಎಂದರೆ ಜಗತ್ತಿನ ನೋವು, ನಲಿವುಗಳನ್ನು ಅರಿತು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಎಲ್ಲ ಜನರ ಸಂಕಷ್ಟಗಳಿಗೆ ಪರಿಹಾರ ನೀಡಿ, ಅವರನ್ನು ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಶುದ್ಧ ಮನಸ್ಸಿರುವವರು’ ಎಂದು
ತಿಳಿಸಿದರು.

‘ಅಕ್ಕಮಹಾದೇವಿ ಬಾಲ್ಯದಿಂದಲೇ ವಿರಕ್ತ ಜೀವನ ಸ್ವೀಕರಿಸಿ ಆಧ್ಯಾತ್ಮಿಕ ಬದುಕನ್ನು ಅಪ್ಪಿಕೊಂಡವಳು. ಶರಣಸತಿ ಲಿಂಗಪತಿ ತತ್ವಕ್ಕೆ ಬದ್ಧಳಾದವಳು. ಏನೆಲ್ಲ ಇಕ್ಕಟ್ಟು, ಬಿಕ್ಕಟ್ಟುಗಳನ್ನು ಜಯಿಸಿ ಕಲ್ಯಾಣಕ್ಕೆ ಬಂದ ಅಕ್ಕನಿಗೆ ಅಲ್ಲಮ
ಪ್ರಭುದೇವರಿಂದಲೇ ಸಿಡಿಲಿನಂತಹ ಪ್ರಶ್ನೆಗಳು; ತಾರುಣ್ಯವನ್ನು ಹೊಂದಿರುವ ನೀನು ಇತ್ತಲೇಕೆ ಬಂದೆ? ನಿನ್ನ ಪತಿ ಯಾರು? ಕೌಶಿಕನೊಂದಿಗೆ ಮದುವೆ ಆಗಿ ಅವನ ಮೇಲೆ ತಪ್ಪು ಹೊರಿಸಿ ಬಂದಿರುವೆಯಲ್ಲವೇ? ದೇಹ ಮೋಹ ಇಲ್ಲವೆಂದ ಮೇಲೆ ದೇಹಕ್ಕೆ ಕೂದಲ ಮರೆಯೇಕೆ? ಎಂಬ ಪ್ರಶ್ನೆಗೆ ಅಕ್ಕ ಬೆಚ್ಚದೆ ಬೆದರದೆ ಅವರ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸುವಳು’ ಎಂದು ಹೇಳಿದರು.

ಅಕ್ಕಮಹಾದೇವಿ ವಿಷಯ ಕುರಿತು ಮಾತನಾಡಿದ ಮುಂಬೈನ ಉಪನ್ಯಾಸಕಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ, ‘ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಸುಂದರವಾದ ಸಾಹಿತ್ಯರೂಪ ವಚನ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ಇದು ಜನಸಾಮಾನ್ಯರನ್ನು ಆಕರ್ಷಿಸಿದೆ. ವಚನ ಸಾಹಿತ್ಯ ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ದೊಡ್ಡ ಮಾನವೀಯ ಮೌಲ್ಯ. ವಚನ ಸಾಹಿತ್ಯ ಹಾಗೆಯೇ ಶ್ರೀಮಂತ
ಗೊಂಡಿರುವಂಥದ್ದಲ್ಲ. ಇದಕ್ಕಾಗಿ ಅನೇಕ ಶರಣರು ಶ್ರಮಿಸಿದ್ದಾರೆ’ ಎಂದು ವಿವರಿಸಿದರು.

ಶಿರಹಟ್ಟಿಯ ಸಂತೋಷ ಅಂಗಡಿ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನ ಗೀತೆ ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತನಾಟ್ಯ ಶಾಲೆಯ ಡಿ.ಎಸ್‌. ಸುಪ್ರಭೆ ಹಾಗೂ ಡಿ.ಜೆ. ಮುಕ್ತ ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT