ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್; ಶ್ರಾವಣ ಮಾಸದ ಪೂಜೆ ಸರಳ

ಕೋವಿಡ್ ಕಾರಣಕ್ಕೆ ಆಡಂಬರ, ಸಂಭ್ರಮಕ್ಕೆ ಇಲ್ಲ ಅವಕಾಶ
Last Updated 8 ಆಗಸ್ಟ್ 2021, 12:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಶ್ರಾವಣ ಮಾಸ ಆ. 8ರಿಂದ ಆರಂಭವಾಗಲಿದೆ. ಪ್ರತಿ ವರ್ಷ ಈ ಮಾಸದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ವಿಶೇಷ ಪೂಜೆಗಳನ್ನು ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆಸಲು ಇಲ್ಲಿಯ ಅನೇಕ ದೇಗುಲಗಳ ಆಡಳಿತ ಮಂಡಳಿಗಳು ನಿರ್ಧರಿಸಿವೆ.

ಕೋಟೆನಗರಿಯ ನವದುರ್ಗೆಯರು, ಶಿವ, ಗಣಪತಿ, ವೆಂಕಟೇಶ್ವರ, ನರಸಿಂಹಸ್ವಾಮಿ, ಆಂಜನೇಯ ಸೇರಿ ವಿವಿಧ ದೇಗುಲಗಳಲ್ಲಿ ನಿತ್ಯ ಪೂಜೆಗಳು ನಡೆಯಲಿವೆ. ಆದರೆ, ಕೋವಿಡ್‌ಗೂ ಮುನ್ನ ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳು ಈ ಬಾರಿ ಕಂಡುಬರುತ್ತಿಲ್ಲ. ಮೂರನೇ ಅಲೆಯ ಮೂನ್ಸೂಚನೆ ಕಾರಣ ವೈಭವದಿಂದ ಆಚರಿಸಲು ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಶ್ರಾವಣದ ಮೊದಲ ದಿನ ಸೋಮವಾರ ಬಂದಿದೆ. ಶಿವ ದೇಗುಲಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ದೇಗುಲಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚು. ಆದರೆ, ಕೋವಿಡ್‌ ಕಾರಣಕ್ಕೆ ಗುಂಪು–ಗುಂಪಾಗಿ ದೇಗುಲ ಪ್ರವೇಶಿಸಲು ಅವಕಾಶ ನೀಡದಿರಲು ಹಾಗೂ ತೀರ್ಥ, ಪ್ರಸಾದ ವಿತರಿಸದಿರಲು ಆಡಳಿತ ಮಂಡಳಿ, ಸೇವಾ ಟ್ರಸ್ಟ್‌ಗಳು ತೀರ್ಮಾನಿಸಿವೆ. ಭಕ್ತರು ತಪ್ಪದೇ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ದೇಗುಲಗಳ ಮುಂಭಾಗ ನಾಮಫಲಕ, ಕರಪತ್ರ ಕೂಡ ಅಂಟಿಸಲಾಗಿದೆ.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇವತೆ ದೇಗುಲಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜೆ ನಡೆಯಲಿದೆ. ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ, ಮಾರಿಕಾಂಬ, ದುರ್ಗಾ ಪರಮೇಶ್ವರಿ ದೇಗುಲಗಳಲ್ಲಿ ಭಕ್ತರು ಆಸಕ್ತಿ ತೋರಿದರೆ ಮಾತ್ರ ವಿಶೇಷಾಲಂಕಾರ ಸೇವೆ ನೇರವೇರಿಸಲಾಗುತ್ತದೆ.

***

ಕೋವಿಡ್‌ಗೂ ಮುನ್ನ ವಾರದ ಪೂಜೆಯನ್ನು ಭಕ್ತರು ಮುಂಚಿತವಾಗಿ ಕಾಯ್ದಿರಿಸುತ್ತಿದ್ದರು. ಈ ಬಾರಿ ಇನ್ನೂ ಯಾರು ಕಾಯ್ದಿರಿಸಿಲ್ಲ. ಆಸಕ್ತಿಯಿಂದ ಮುಂದೆ ಬಂದರೆ ಮಾತ್ರ ಸಿದ್ಧತೆ ಮಾಡಿಕೊಳ್ಳುತ್ತೇವೆ.

ಗಿರೀಶ್‌, ಪೂಜಾರಿ, ಕಣಿವೆಮಾರಮ್ಮ ದೇಗುಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT