ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: 25 ಲಕ್ಷ ಪತ್ರ ಚಳವಳಿ ಇಂದಿನಿಂದ

ಪರಿಶಿಷ್ಟ ಜಾತಿಯಿಂದ ಹಲವು ಜಾತಿ ಕೈಬಿಟ್ಟಿರುವ ವದಂತಿ
Last Updated 9 ಜೂನ್ 2020, 21:45 IST
ಅಕ್ಷರ ಗಾತ್ರ

ಚಿತ್ರದುರ್ಗ:ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಮುಖ್ಯಮಂತ್ರಿಗೆ ಒತ್ತಾಯಿಸಿರಾಜ್ಯ ಮೀಸಲಾತಿ ಸಂರಕ್ಷಣೆ ಒಕ್ಕೂಟ ಜೂನ್ 10ರಿಂದ ರಾಜ್ಯದಾದ್ಯಂತ ಪತ್ರ ಚಳವಳಿ ಹಮ್ಮಿಕೊಂಡಿದೆ.

‘ಈ ನಾಲ್ಕು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ವದಂತಿ ಹಬ್ಬಿದೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ. ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಚಳವಳಿ ನಡೆಸಲಾಗುತ್ತಿದೆ. ಈಗಾಗಲೇ 25 ಲಕ್ಷ ಮನೆಗಳಿಗೆ ಅಂಚೆ ಪತ್ರಗಳನ್ನು ತಲುಪಿಸಲಾಗಿದೆ. ಸಮುದಾಯದ ಜನರು ಮುಖ್ಯಮಂತ್ರಿಗೆ ಪತ್ರ ಬರೆಯಲಿದ್ದಾರೆ’ ಎಂದುಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾಲ್ಕು ಸಮುದಾಯಗಳನ್ನು ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಸಂಬಂಧ ವಿಚಾರಣೆ ನಡೆದಿದೆ. ಇದು ನ್ಯಾಯಾಲಯದಲ್ಲಿ ತೀರ್ಮಾನವಾಗುವ ವಿಚಾರವಲ್ಲ. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (ಎನ್‌ಸಿಎಸ್‌ಸಿ) ಮುಂದೆ ಹಾಜರಾಗಲು ಅರ್ಜಿ ಸಲ್ಲಿಸಿದವರಿಗೆ ಸೂಚಿಸಲಾಗಿದೆ. ವಿನಾ ಕಾರಣ ಗೊಂದಲ ಉಂಟು ಮಾಡುವುದು ಸರಿಯಲ್ಲ’ಎಂದರು.

‘ಜಾತಿಗಳನ್ನು ಪಟ್ಟಿಗೆ ಸೇರಿಸುವುದು, ಕೈಬಿಡುವುದು ಕಾನೂನಾತ್ಮಕವಾಗಿ ನಡೆಯಬೇಕು. ಸಂಸತ್ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ಅಥವಾ ವಿವರಣೆ ನೀಡಿ ಎಂದುಆಯೋಗ ಕೇಳಿದೆಯೇ ಹೊರತು ಕೈಬಿಟ್ಟಿಲ್ಲ’ಎಂದರು.

‘ಕೆಲವರು ತಪ್ಪು ಮಾಹಿತಿ ಹರಿಬಿಟ್ಟು ಪರಿಶಿಷ್ಟ ಜಾತಿಯೊಳಗೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಡ ಹೇರಲಾಗುವುದು. ಕೆಲ ಅಧಿಕಾರಿಗಳ ಕಣ್ತಪ್ಪಿನಿಂದಾಗಿ ರಾಜ್ಯದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳು ಔದ್ಯೋಗಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಪರಿಶಿಷ್ಟ ಜಾತಿಯೊಳಗಿನ 101 ಉಪಜಾತಿಗಳಿಗಿಂತಲೂ ಹಿಂದುಳಿದಿವೆ. ಪ್ರಗತಿ ಸಾಧಿಸಲು ಸಾಧ್ಯವಾಗದೆ ಸಮಾಜದ ಮುಖ್ಯವಾಹಿನಿಗೂ ಬರಲು ಆಗಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಲಾಗಿದೆ’ ಎಂದು ವಿವರಿಸಿದರು.

ಬಂಜಾರ ಸಮುದಾಯದ ಮುಖಂಡ ರಾಘವೇಂದ್ರ ನಾಯ್ಕ, ಕೊರಮ-ಕೊರಚ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೈ. ಕುಮಾರ, ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ಲಕ್ಷ್ಮಣ್, ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇದ್ದರು.

**

ನಾಲ್ಕು ಸಮುದಾಯಗಳು ಮಾನಸಿಕ ಅಸ್ಪೃಶ್ಯತೆ ಹಾಗೂ ದೌರ್ಜನ್ಯಕ್ಕೆ ತುತ್ತಾಗಿವೆ. ಅದಕ್ಕಾಗಿ ಮೀಸಲಾತಿಯೊಂದಿಗೆ ಸಮುದಾಯ ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.
-ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT