ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಮನೆಯಲ್ಲೇ ಸರಳ ವಿವಾಹ

ಮಾಸ್ಕ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಂದನ್, ಭೂಮಿಕಾ
Last Updated 5 ಏಪ್ರಿಲ್ 2020, 14:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಹಡುವುದನ್ನು ತಡೆಯಲು ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಇಲ್ಲಿನ ಮುನ್ಸಿಪಲ್ ಕಾಲೊನಿಯ ಮನೆಯೊಂದರಲ್ಲಿ ಭಾನುವಾರ ಸರಳ ವಿವಾಹ ಜರುಗಿತು. ಮುಖಕ್ಕೆ ಮಾಸ್ಕ್‌ ಧರಿಸಿಕೊಂಡ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರಿನ ಮಾದನಾಯ್ಕನಹಳ್ಳಿಯ ಎನ್. ಚಂದನ್ ಮತ್ತು ಚಿತ್ರದುರ್ಗದ ಕೆಳಗೋಟೆಯ ಕೆ. ಭೂಮಿಕಾ ಅವರುಬೆಳಿಗ್ಗೆ 9.30ರಿಂದ 10.30ರವರೆಗೆ ನಿಗದಿಯಾಗಿದ್ದ ಮುಹೂರ್ತದಲ್ಲಿ ಮದುವೆಯಾದರು. ವಿವಾಹಕ್ಕೆ ಕುಟುಂಬದ ಸದಸ್ಯರು ಮಾತ್ರ ಸಾಕ್ಷಿಯಾಗಿದ್ದರು.ಸರಳವಾಗಿ ಮನೆಯಲ್ಲಿಯೇ ನಡೆದ ಮದುವೆಗೆ ವಧು–ವರ, ಅವರ ತಂದೆ–ತಾಯಿ, ಒಬ್ಬರು ಸಂಬಂಧಿ ಹಾಗೂ ಪುರೋಹಿತರು ಮಾತ್ರ ಭಾಗವಹಿಸಿದ್ದರು.

ವಿವಾಹದ ದಿನಾಂಕ ನಿಗದಿಯಾದ ಬಳಿಕ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲಾಗಿತ್ತು. ಕಲ್ಯಾಣ ಮಂಟಪ ಕೂಡ ಗೊತ್ತು ಮಾಡಲಾಗಿತ್ತು. ಆದರೆ, ಕೊರೊನಾ ಸೋಂಕಿನಿಂದ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿತು. ಕಲ್ಯಾಣ ಮಂಟಪ, ದೇಗುಲ ಎಲ್ಲವೂ ಮುಚ್ಚಿದವು. ನಿಗದಿಯಾದ ವಿವಾಹ ನಿಲ್ಲಿಸಬಾರದು ಎಂಬ ಕಾರಣಕ್ಕೆ ಸರಳವಾಗಿ ನಡೆಸಲು ಪೋಷಕರು ನಿರ್ಧರಿಸಿ ಅಧಿಕಾರಿಗಳಿಂದ ಅನುಮತಿ ಪಡೆದದಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ 6ಕ್ಕಿಂತ ಹೆಚ್ಚು ಜನ ಸೇರದಂತೆ ತಹಶೀಲ್ದಾರ್‌ ಷರತ್ತು ವಿಧಿಸಿದ್ದರು. ಪುರೋಹಿತರು ಸೇರಿ ಏಳು ಜನರಿದ್ದರು. ಶುಭ ಸಮಾರಂಭಕ್ಕೆ ಸಮಸಂಖ್ಯೆಯಲ್ಲಿರಬೇಕು ಎಂಬ ನಂಬಿಕೆಯ ಮೇರೆಗೆ ಮತ್ತೊಬ್ಬ ಸಂಬಂಧಿಕರನ್ನು ಕರೆಸಿಕೊಂಡು ವಿವಾಹ ಕಾರ್ಯ ಮುಗಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

‘ಗುರು-ಹಿರಿಯರು ಸೇರಿ ಮುಂಚೆಯೇ ಮುಹೂರ್ತ ನಿಶ್ಚಯ ಮಾಡಿದ್ದರಿಂದ ಮನೆಯಲ್ಲಿಯೇ ಸರಳವಾಗಿ ವಿವಾಹ ನಡೆಸಿದ್ದೇವೆ’ ಎಂದು ಭೂಮಿಕಾ ತಂದೆ ಟಿ. ಲಕ್ಷ್ಮಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT