ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿ: ತಾಲ್ಲೂಕಿಗೆ 50 ಸಾವಿರ ಜನ

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ
Last Updated 6 ಜನವರಿ 2021, 3:27 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದ ಪ್ರತಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಸುಮಾರು 50 ಸಾವಿರ ಜನರಿಗೆ ವೃತ್ತಿ ಕೌಶಲ ತರಬೇತಿಯನ್ನು ಮುಂಬರುವ ಆರ್ಥಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಭರವಸೆ ನೀಡಿದರು.

‘ರಾಜ್ಯದಲ್ಲಿ ನಿಗಮಕ್ಕೆ ಸಂಬಂಧಿಸಿದಂತೆ 206 ಜಾತಿಗಳ ಸುಮಾರು 2.5 ಕೋಟಿ ಜನರು ಒಳಪಟ್ಟಿದ್ದಾರೆ. ವಿದೇಶಿ ಉತ್ಪನ್ನಗಳ ಹೊಡೆತಕ್ಕೆ ಗ್ರಾಮೀಣ ವೃತ್ತಿಗಳು ನಲುಗಿ ಹೋಗಿವೆ. ಆದ್ದರಿಂದ ಸಂಪ್ರದಾಯ- ಸಾಂಪ್ರದಾಯಿಕ ಉತ್ಪನ್ನಕ್ಕೆ ಒತ್ತು ನೀಡಲು, ಆಧುನಿಕ ಸ್ಪರ್ಶ ನೀಡಲು ತರಬೇತಿ ಆಯೋಜಿಸಲಾಗುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದರು.

‘ನಿಗಮದ ವ್ಯಾಪ್ತಿಯೊಳಗೆ ಚೈತನ್ಯ ಸಬ್ಸಿಡಿ ಯೋಜನೆ, ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ, ಗಂಗಾಕಲ್ಯಾಣ ನೀರಾವರಿ ಯೋಜನೆ ಇವೆ. ಇವುಗಳ ಲಾಭ ಪಡೆದು ಸಮುದಾಯದವರು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

ಶೇ 1ರಷ್ಟು ಬಡ್ಡಿ ದರದಲ್ಲಿ ಸಾಲ: ‘ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿ ವೃತ್ತಿಪರ ಉನ್ನತ ವ್ಯಾಸಂಗಕ್ಕೆ ಸಿಇಟಿ ಮೂಲಕ ಆಯ್ಕೆಯಾಗುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ 1 ಅಥವಾ ಶೇ 2ರ ಬಡ್ಡಿ ದರದಲ್ಲಿ ಗರಿಷ್ಠ ₹ 1 ಲಕ್ಷ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು. ಆದರೆ, ವಾರ್ಷಿಕ ಆದಾಯ ₹ 3.5 ಲಕ್ಷ ಮಿತಿಯಲ್ಲಿರಬೇಕು’ ಎಂದರು.

‘ಕೋವಿಡ್ ಕಾರಣಕ್ಕೆ ಎಲ್ಲ ಕ್ಷೇತ್ರಗಳು ತತ್ತರಿಸಿ ಹೋಗಿವೆ. ಅದಕ್ಕಾಗಿ ನಿಗಮಕ್ಕೆ ₹ 250 ಕೋಟಿ ಬದಲು ಈ ಬಾರಿ ₹ 80 ಕೋಟಿ ಅನುದಾನ ಲಭಿಸಿದೆ. ಈ ನಡುವೆಯೂ ಚಿತ್ರದುರ್ಗ ಜಿಲ್ಲೆಯಲ್ಲಿ ಗಂಗಾಕಲ್ಯಾಣ ಸೇರಿ ವಿವಿಧ ಯೋಜನೆಗಳು ಗುರಿ ಮೀರಿ ಸಾಧನೆ ಯಾಗಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅನುದಾನದ ನಿರೀಕ್ಷೆಯಲ್ಲಿದ್ದೇವೆ’ ಎಂದರು.

‘ಬಹುತೇಕ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೆಲವೆಡೆ ಹಿಂಬಾಲಕರಿಗೆ ನೀಡಲಾಗುತ್ತಿದೆ ಎಂಬ ದೂರುಗಳಿವೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಆಯ್ಕೆ ವಿಧಾನದಲ್ಲಿ ಬದಲಾವಣೆ ಮಾಡಲು ಅವಕಾಶ ಇದ್ದರೆ, ಸರ್ಕಾರದೊಂದಿಗೆ ಚರ್ಚಿಸಿ ಉತ್ತಮ ನಿರ್ಧಾರಕ್ಕೆ ಬರಲಾಗುವುದು’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಪ್ರವೀಣ್, ರಮೇಶ್, ಶಿವಣ್ಣಾಚಾರ್, ನಾಗರಾಜ್ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT