ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಗೇರಿಯ 4,849 ಕುಟುಂಬಕ್ಕೆ ಹಕ್ಕುಪತ್ರ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹರ್ಷ

ರಾಜ್ಯ ಸರ್ಕಾರ ಆದೇಶ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹರ್ಷ
Last Updated 2 ಮಾರ್ಚ್ 2021, 16:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯ 22 ಕೊಳಗೇರಿಗಳ 4,849 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

‘ಚಿತ್ರದುರ್ಗ ನಗರದಲ್ಲಿ 38 ಕೊಳಗೇರಿಗಳಿವೆ. ಇವುಗಳಲ್ಲಿ 22 ಕೊಳಗೇರಿಯ 92 ಎಕರೆ 26 ಗುಂಟೆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ಸಿಗಲಿದೆ. ಇದರಿಂದ 35 ಸಾವಿರಕ್ಕೂ ಅಧಿಕ ಜನರಿಗೆ ಅನುಕೂಲವಾಗಲಿದೆ. ಕೊಳಗೇರಿ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಕನಸು ಈಡೇರುವ ಕಾಲ ಕೂಡಿಬಂದಿದೆ. ವರ್ಷಾಂತ್ಯದ ಹೊತ್ತಿಗೆ ಹಕ್ಕುಪತ್ರ ಲಭ್ಯವಾಗಲಿವೆ’ ಎಂದು ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಗರಸಭೆ ವ್ಯಾಪ್ತಿಯಲ್ಲಿರುವ ಕೊಳಗೇರಿಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗುತ್ತದೆ. ಅಗತ್ಯ ಸಿದ್ಧತೆ ಮಾಡಿಕೊಂಡು ಕಾಲಮಿತಿಯಲ್ಲಿ ಹಕ್ಕುಪತ್ರ ಹಸ್ತಾಂತರಿಸಲು ಸೂಚಿಸಲಾಗಿದೆ. ಪ್ರತಿ ಕುಟುಂಬಕ್ಕೆ ಕನಿಷ್ಠ 600 ಚದರ ಅಡಿ ನಿವೇಶನ ಲಭ್ಯವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿ ₹2 ಸಾವಿರ ಶುಲ್ಕ ಹಾಗೂ ಸಾಮಾನ್ಯ ವರ್ಗ ₹4 ಸಾವಿರ ಶುಲ್ಕ ಭರಿಸಬೇಕಾಗುತ್ತದೆ’ ಎಂದು ವಿವರಿಸಿದರು.

‘ನಗರ ವ್ಯಾಪ್ತಿಯಲ್ಲಿ 38 ಘೋಷಿತ ಕೊಳಗೇರಿಗಳಿದ್ದರೂ 22 ಕೊಳಗೇರಿ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರ ಸಿಗಲಿದೆ. ವಿಜಯನಗರ, ಜಿ.ಎಚ್‌.ತಿಪ್ಪಾರೆಡ್ಡಿ ನಗರ, ಹಿಮ್ಮತ್‌ ನಗರ, ಜೈನ್‌ ಕಾಲೊನಿ, ಯೂನಿಯನ್‌ ಟಾಕೀಸ್‌ ಹಿಂಭಾಗ, ಸಿಹಿನೀರು ಹೊಂಡದ ಸಮೀಪದ ಕೊಳಗೇರಿಗಳಲ್ಲಿ ಸಮಸ್ಯೆಗಳಿವೆ. ಕೆಲವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

7,252 ಶೀಘ್ರ ವಸತಿ:‘ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯಕ್ಕೆ ಕೋರಿ 13,500 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸಿದವರಲ್ಲಿ 7,252 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆಶ್ರಯ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ’ ಎಂದು ಹೇಳಿದರು.

‘ಮೇಗಳಹಳ್ಳಿಯ 15 ಎಕರೆ 2 ಗುಂಟೆ ವಿಸ್ತೀರ್ಣದಲ್ಲಿ 1,001 ಮನೆ ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ₹6.3 ಲಕ್ಷ ವೆಚ್ಚವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ₹3.5 ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹2.7 ಲಕ್ಷ ಸಬ್ಸಿಡಿ ದೊರೆಯಲಿದೆ. ಉಳಿದ ಹಣವನ್ನು ಸಾಲದ ರೂಪದಲ್ಲಿ ಬ್ಯಾಂಕಿನಲ್ಲಿ ಲಭ್ಯವಾಗಲಿದೆ. 1,176 ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.

ಪೌರಾಯುಕ್ತ ಜಿ.ಟಿ.ಹನುಮಂತರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸತೀಶ್ ರೆಡ್ಡಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ ನಾರಾಯಣರೆಡ್ಡಿ ಇದ್ದರು.

‘ಶಾಲೆಗೆ ₹17 ಕೋಟಿ’:ನಬಾರ್ಡ್ ಹಾಗೂ ಜಿಲ್ಲಾ ಖನಿಜಾ ಪ್ರತಿಷ್ಠಾನ ನಿಧಿಯ (ಡಿಎಂಎಫ್)₹17 ಕೋಟಿಯನ್ನು ಕ್ಷೇತ್ರ ವ್ಯಾಪ್ತಿಯ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಜಂಪಣ್ಣನಹಟ್ಟಿ, ಅನ್ನೇಹಾಳು ಗ್ರಾಮದಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಹಾಗೂ ಗೊಡಬನಾಳ್, ಕಕ್ಕೇಹರವು ಸೇರಿ ಹಲವು ಗ್ರಾಮಗಳಲ್ಲಿ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನಗರ ಪ್ರದೇಶದಿಂದ ದೂರ ಇರುವ ಗ್ರಾಮಗಳಿಗೆ 25 ವರ್ಷಗಳ ಹಿಂದೆಯೇ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಪ್ರತಿಭಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಇದ್ದರು.

ವಿಜಯನಗರದ ಕೊಳಗೇರಿಯಲ್ಲಿ ಪ್ರಭಾವಿಗಳು ಮನೆ ಕಟ್ಟಿಕೊಂಡಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇವನ್ನು ಮತ್ತೊಬ್ಬರಿಗೆ ಬಾಡಿಗೆ ನೀಡಲಾಗಿದೆ. ಅನೇಕರು ರಸ್ತೆ ಬದಿ ಮಳಿಗೆ ನಿರ್ಮಿಸಿ ಹಣ ಸಂಪಾದಿಸುತ್ತಿದ್ದಾರೆ.

–ಜಿ.ಎಚ್‌.ತಿಪ್ಪಾರೆಡ್ಡಿ,ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT