ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಿನ ಮೇಲೆ ಉರುಳಾಡಿದ ಭಕ್ತರು

Last Updated 23 ಫೆಬ್ರುವರಿ 2020, 13:37 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಸೊಂಡೆಕೊಳ ಗ್ರಾಮದಲ್ಲಿ ಶಿವರಾತ್ರಿ ಅಂಗವಾಗಿ ಶನಿವಾರ ನಡೆದ ಜಾತ್ರೆಯಲ್ಲಿ ಮುಳ್ಳಿನ ಮೇಲೆ ಉರುಳಾಡಿ ಭಕ್ತರು ಹರಕೆ ತೀರಿಸಿದರು.

ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಮೈನವಿರೇಳಿಸುತ್ತದೆ. ಮುಳ್ಳಿನ ಹಾಸಿಗೆಯ ಮೇಲೆ ಉರುಳಾಡಿ ಭಕ್ತಿ ಸಮರ್ಪಿಸಿದವರನ್ನು ಜನರು ಅಭಿನಂದಿಸಿದರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಇಂತಹ ಹರಕೆ ತೀರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮ್ಯಾಸನಾಯಕ ಸಮುದಾಯದ ಜನರು ಈ ಆಚರಣೆಯನ್ನು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಶಿವರಾತ್ರಿ ಜಾಗರಣೆ ನಡೆದ ಮರುದಿನ ಭೈರಲಿಂಗೇಶ್ವರ, ಬೊಮ್ಮಲಿಂಗೇಶ್ವರ ಹಾಗೂ ಅಹೋಬಲ ನರಸಿಂಹಸ್ವಾಮಿಯ ಜಾತ್ರೆ ನಡೆಯುತ್ತದೆ. ಆಸೆ, ಆಕಾಂಕ್ಷೆಯನ್ನು ಈಡೇರಿಸಿದ ದೇವರಿಗೆ ಮುಳ್ಳಿನ ಮೇಲೆ ಉರುಳಾಡುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.

ದೇಗುಲದ ಸಮೀಪವೇ ಮುಳ್ಳಿನ ರಾಶಿಯನ್ನು ಸುರಿಯಲಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು ವಿಶೇಷ ಶಕ್ತಿ ಆವಾಹಿಸಿಕೊಂಡವರಂತೆ ವರ್ತಿಸುತ್ತಾರೆ. ತಕ್ಷಣ ಅವರನ್ನು ಮುಳ್ಳಿನ ರಾಶಿಯ ಮೇಲೆ ಮಲಗಿಸಲಾಗುತ್ತದೆ. ದೇವರನ್ನು ಜಪಿಸುತ್ತಾ ಭಕ್ತಿಯಿಂದ ಉರುಳಾಡುತ್ತಾರೆ. ಇದರಿಂದ ನಾಡಿಗೆ ಒಳಿತಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.

‘ಪೂರ್ವಿಕರು ಆಚರಿಸಿಕೊಂಡು ಬಂದಿರುವ ಮುಳ್ಳಿನ ಪವಾಡವನ್ನು ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಹರಕೆ ಹೊತ್ತವರು ಉಪವಾಸ ವ್ರತ ಆಚರಿಸಿ ಭಕ್ತಿ ಸಮರ್ಪಿಸುತ್ತಾರೆ. ಶಿವರಾತ್ರಿ ಅಂಗವಾಗಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ’ ಎಂದು ಗ್ರಾಮದ ಮುಖಂಡ ನೀಲಕಂಠಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT