ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಕ್ಕೆ ತರಾಸು ಕೊಡುಗೆ ಅನನ್ಯ

ಟಿ.ಎಸ್. ವೆಂಕಣ್ಣಯ್ಯ, ತ.ಸು. ಶಾಮರಾಯ, ತರಾಸು ಪುತ್ಥಳಿ ಅನಾವರಣ
Last Updated 21 ಮಾರ್ಚ್ 2023, 5:38 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆಯ ತಳಕು ಗ್ರಾಮದ ದಿಗ್ಗಜ ಸಾಹಿತಿಗಳಾದ ತರಾಸು, ತ.ಸು. ಶಾಮರಾಯರು ಮತ್ತು ಟಿ.ಎಸ್. ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು
ಹೇಳಿದರು.

ತಳಕು ಗ್ರಾಮದ ತರಾಸು ವೃತ್ತದಲ್ಲಿ ಸೋಮವಾರ ₹ 15 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಟಿ.ಎಸ್. ವೆಂಕಣ್ಣಯ್ಯ, ತ.ಸು. ಶಾಮರಾಯ ಮತ್ತು ತರಾಸು ಅವರ ಪುತ್ಥಳಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

‘ಜಿಲ್ಲೆಯ ತಳಕು ಗ್ರಾಮದಲ್ಲಿ ತರಾಸು ಕುಟುಂಬುವು ಜೀವಿಸಿದೆ ಎಂಬುದೇ ನಮ್ಮಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಕನ್ನಡದ ಶ್ರೇಷ್ಠ ರಾಷ್ಟ್ರಕವಿ ಕುವೆಂಪು ಅವರಿಗೆ ಗುರುಗಳಾಗಿದ್ದ ಟಿ.ಎಸ್. ವೆಂಕಣ್ಣಯ್ಯ, ಕಾದಂಬರಿ ಕ್ಷೇತ್ರಕ್ಕೆ ಅಮೋಘ ಸಾಹಿತ್ಯದ ಕೊಡುಗೆ ನೀಡಿರುವ ತರಾಸು, ಹಾಗೂ ಸಾಹಿತ್ಯ ಚರಿತ್ರೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ತ.ಸು. ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಶ್ವಿನಿ ದೇವತೆಗಳಂತೆ ಮಿನುಗಿದ್ದಾರೆ. ಇಂತಹ ಮಹಾನ್ ಸಾಹಿತಿಗಳ ಪುತ್ಥಳಿಗಳನ್ನು ಅವರ ಹುಟ್ಟೂರಿನಲ್ಲಿ ನಿರ್ಮಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಇದನ್ನು ಮನಗಂಡು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 15ಲಕ್ಷ ವೆಚ್ಚದಲ್ಲಿ ಶಿಲೆಯ ಕಟ್ಟಡ ಮತ್ತು ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ತಳಕು ಸೇರಿದಂತೆ ಈ ಭಾಗದ ಜನರು ಈ ಮೂರು ಜನ ಸಾಹಿತಿಗಳ ಸಾಹಿತ್ಯ ಸೇವೆಯನ್ನು ನಿತ್ಯ ಸ್ಮರಿಸಬೇಕಿದೆ’ ಎಂದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷರಾದ ಪಿ.ಎಂ. ಮಂಜುನಾಥ, ಈ. ರಾಮರೆಡ್ಡಿ, ಮುಖಂಡರಾದ ಜಯಪಾಲಯ್ಯ, ಪಾಪೇಶ್, ಮಲ್ಲೇಶ್, ಶಿವಪ್ರಕಾಶ್‌ರೆಡ್ಡಿ, ರೈತಮುಖಂಡ ಓಬಣ್ಣ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT