ಮಂಗಳವಾರ, ಡಿಸೆಂಬರ್ 1, 2020
26 °C
5 ವರ್ಷಗಳಲ್ಲಿ ಹೆಚ್ಚಿನ ಇಳುವರಿ, ಗುಣಮಟ್ಟ ಹೆಚ್ಚಳ

ಮೊಳಕಾಲ್ಮುರು: ಕೂಲಿ ಕಾರ್ಮಿಕರಿಗೆ ವರದಾನವಾದ ಕರಡಿ ಕಾಟ!

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಕರಡಿ ಕಾಟವಿದ್ದಲ್ಲಿ ಜನರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಆದರೆ, ತಾಲ್ಲೂಕಿನಲ್ಲಿ ಕರಡಿ ಕಾಟವು ನೂರಾರು ದಿನಗೂಲಿಗಳ ಹೊಟ್ಟೆಪಾಡಿನ ನೆರವಿಗೆ ಬಂದಿದೆ ಎಂದರೆ ಅಚ್ಚರಿಯಾಗಬಹುದು.

ಹೌದು. ತಾಲ್ಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಈ ವರ್ಷ ಸೀತಾಫಲ ಭರಪೂರವಾಗಿ ಬಿಟ್ಟಿದ್ದು, ಈ ಮಾತಿಗೆ ಪುಷ್ಟಿ ನೀಡುತ್ತದೆ.

ಗುಡ್ಡಗಳಲ್ಲಿ ಕರಡಿ ಸಂಖ್ಯೆ ಹೆಚ್ಚಳವಾಗಿದ್ದು, ಅಲ್ಲಿ ಆಹಾರದ ಕೊರತೆಯಿಂದಾಗಿ ತಪ್ಪಲಿನ ರೈತರ ಪಪ್ಪಾಯ, ದಾಳಿಂಬೆ ತೋಟಗಳಿಗೆ ಲಗ್ಗೆ ಇಡುತ್ತಿದ್ದವು. ಸಾರ್ವಜನಿಕರಿಂದ ದೂರು ಬಂದ ಕಾರಣ ಬೆಟ್ಟದಲ್ಲಿ ಕರಡಿಗಳಿಗೆ ಆಹಾರ ಸಿಗಲಿ ಎಂಬ ಉದ್ದೇಶದಿಂದ ಸೀತಾಫಲ ಕೀಳಲು ಟೆಂಡರ್ ಕರೆಯುವುದನ್ನು ಅರಣ್ಯ ಇಲಾಖೆ ಈ ಬಾರಿ ರದ್ದು ಮಾಡಿದೆ. ಆದ್ದರಿಂದ ಅನೇಕರು ಬೆಟ್ಟಕ್ಕೆ ಬಂದು ಕಾಯಿ ಕಿತ್ತು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ.

ಮೊಳಕಾಲ್ಮುರು ಕೈಮಗ್ಗ ರೇಷ್ಮೆ ಸೀರೆಗೆ ಪ್ರಸಿದ್ಧವಾಗಿರುವ ರೀತಿ ಸೀತಾಫಲ ಕೃಷಿಗೂ ಪ್ರಸಿದ್ಧಿ ಪಡೆದಿದೆ. ತಾಲ್ಲೂಕಿನ ಅಲ್ಲಲ್ಲಿ ಹರಡಿರುವ ಗುಡ್ಡಗಳಲ್ಲಿ ಪ್ರಕೃತಿದತ್ತವಾಗಿ ಹಣ್ಣಿನ ಗಿಡಗಳು ನೂರಾರು ವರ್ಷಗಳಿಂದ ಬೆಳೆದುಕೊಂಡು ಬಂದಿವೆ. ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ಐದಾರು ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿ ಕಂಡುಬಂದಿದೆ.

ಪಟ್ಟಣದ ಸುತ್ತಲಿನ, ಹೀರೆಅಡವಿ, ನುಂಕಪ್ಪನ ಬೆಟ್ಟ, ಕೂಗಬಂಡೆ, ಮರ್ಲಹಳ್ಳಿ, ರಾಯದುರ್ಗ ರಸ್ತೆ, ಹಾನಗಲ್ ಸುತ್ತಲಿನ ಬೆಟ್ಟಗಳು, ಹಿರೇಕೆರೆಹಳ್ಳಿ, ಭೈರಾಪುರ, ಕಾಟನಾಯಕನಹಳ್ಳಿ, ಎದ್ದಲ ಬೊಮ್ಮಯ್ಯನಹಟ್ಟಿ ಅಡವಿಯ ನೂರಾರು ಹೆಕ್ಟೇರ್ ವಿಸ್ತೀರ್ಣದಲ್ಲಿ ಈ ಹಣ್ಣಿನ ಗಿಡಗಳು ಪ್ರಕೃತಿದತ್ತವಾಗಿ ಬೆಳೆದಿವೆ.

ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳ ಮಧ್ಯಭಾಗದಿಂದ ನವೆಂಬರ್ ಅಂತ್ಯದವರೆಗೆ ಹಣ್ಣು ಬಿಡುತ್ತವೆ. ಬೇರುಹುಳು ಬಾಧೆ, ಅಡುಗೆ ಮಾಡಲು ಸೌದೆಗಾಗಿ ಗಿಡಗಳನ್ನು ಬೇಸಿಗೆಯಲ್ಲಿ ಕಡಿಯುತ್ತಿದ್ದ ಕಾರಣ ಗಿಡಗಳ ಪ್ರಮಾಣ ಕುಸಿತವಾಗಿತ್ತು. ಕಳೆದ ವರ್ಷ, ಈ ವರ್ಷ ಮಳೆ ಉತ್ತಮವಾಗಿರುವ ಕಾರಣ ಗಿಡಗಳು ಚೇತರಿಸಿಕೊಂಡಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಕೋಟೆ ಬಡಾವಣೆಯ ಕೃಷ್ಣಪ್ಪ, ‘5 ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ಸಾರಿ ಹೆಚ್ಚಿನ ಇಳುವರಿ ಬಂದಿದೆ. 40-50 ಹಣ್ಣಿನ ಒಂದು ಕುಪ್ಪೆ ಕಾಯಿಯನ್ನು ₹ 100ರಿಂದ ₹ 120ಕ್ಕೆ ಬಿಕರಿ ಮಾಡಲಾಗುತ್ತಿದೆ. 2-3 ತಿಂಗಳು ನೂರಾರು ಮಹಿಳೆಯರು, ವೃದ್ಧರಿಗೆ ಇದು ಹೊಟ್ಟೆಪಾಡು ಕಲ್ಪಿಸಿದೆ. ರಸ್ತೆಬದಿ ಗಿಡಗಳು, ಹಳ್ಳಗಳ ಬದಿಯ ಗಿಡಗಳಲ್ಲಿ ಹೆಚ್ಚು ಹಣ್ಣುಗಳು ಬಿಟ್ಟಿವೆ ಎಂದು ಹೇಳಿದರು.

ಹಿಂದೆ ಇಲ್ಲಿಂದ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಮಾರುಕಟ್ಟೆಗಳಿಗೆ ಹಣ್ಣು ಕಳುಹಿಸಲಾಗುತ್ತಿತ್ತು. ಇತ್ತೀಚೆಗೆ ಕಡಿಮೆಯಾಗಿದೆ. ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 150 ‘ಎ’ ಬದಿಯಲ್ಲಿ ಸೀಜನ್‌ನಲ್ಲಿ ಹಣ್ಣು ಮಾರಾಟ ಜೋರಾಗಿ ನಡೆಯುತ್ತದೆ. ತಾಲ್ಲೂಕಿನ ಜನರು ದೂರದ ಸಂಬಂಧಿಗಳಿಗೆ ಹಣ್ಣು ಕಳಿಸುವ ವಾಡಿಕೆ ನಡೆದುಕೊಂಡು ಬಂದಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು