ಶುಕ್ರವಾರ, ಜನವರಿ 24, 2020
21 °C
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ವಿದ್ಯಾರ್ಥಿಗಳ ಸಂಭ್ರಮ

ಚಿತ್ರದುರ್ಗ: ಮಕ್ಕಳ ಪ್ರತಿಭೆಗೆ ನೆರೆದಿದ್ದವರು ಅಚ್ಚರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮದಕರಿನಾಯಕ ರಣರಂಗಕ್ಕೆ ತೆರಳುವ ಸನ್ನಿವೇಶದ ಸಂಭಾಷಣೆಯೊಂದಿಗೆ ಬಾಲಕನೊಬ್ಬ ವೇದಿಕೆ ಆವರಿಸಿದ. ಮತ್ತೊಬ್ಬ ವಿದ್ಯಾರ್ಥಿ ಕನ್ನಡ ಭಾಷಾಭಿಮಾನದ ಕುರಿತು ಮನಸ್ಸಿಗೆ ನಾಟುವಂತೆ ಹಾಡು ಹೇಳಿದ. ಹೀಗೆ ವಿವಿಧ ರೀತಿಯಲ್ಲಿ ಪ್ರೇಕ್ಷಕರಿಗೆ ವಿದ್ಯಾರ್ಥಿಗಳು ರಸದೌತಣ ನೀಡಿದರು.

ಇಲ್ಲಿನ ಮಹಾರಾಣಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಮುಂದಾದ ವೇಳೆ ಕಂಡು ಬಂದ ದೃಶ್ಯವಿದು.

ಸ್ಪರ್ಧೆಗಾಗಿ ಕಾಲೇಜಿನ ಪ್ರತಿ ಕೊಠಡಿಯಲ್ಲೂ ಪ್ರತ್ಯೇಕ ವಿಭಾಗಗಳನ್ನು ವಿಂಗಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ವಿವಿಧ ಬಗೆಯ ವೇಷಭೂಷಣ ಧರಿಸಿದ್ದ ಶಾಲಾ ಮಕ್ಕಳು ಉತ್ಸಾಹದಿಂದಲೇ ಲೀಲಾಜಾಲವಾಗಿ ಅಭಿನಯಿಸಲು ಮುಂದಾದರು. ಒಂದೆಡೆ ನಾಟಕ, ಮತ್ತೊಂದೆಡೆ ಕೋಲಾಟ ಹೀಗೆ ಇಡೀ ವಾತಾವರಣ ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಮೇಳೈಸಿತು.

ಹೊಳಲ್ಕೆರೆ ತಾಲ್ಲೂಕಿನ ಮಾಳೇನಹಳ್ಳಿಯ ವಿದ್ಯಾರ್ಥಿಗಳು ಜನಪದ ನೃತ್ಯ ಶೈಲಿಯಲ್ಲಿ ಜಡೆ ಕೋಲಾಟ ಪ್ರಸ್ತುತ ಪಡಿಸಿದಾಗ ನೆರೆದಿದ್ದವರು ಮೌನಕ್ಕೆ ಶರಣಾದರು. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದ ವೇದಾವತಿ ಶಾಲಾ ಮಕ್ಕಳು ವೀರಗಾಸೆಯನ್ನು ಶಕ್ತಿಮೀರಿ ಮನಮೋಹಕವಾಗಿ ಪ್ರದರ್ಶಿಸಿದರು.

ಇಸಮುದ್ರ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕೋಲಾಟ ಆಕರ್ಷಕವಾಗಿತ್ತು. ಹೊಸದುರ್ಗ ತಾಲ್ಲೂಕಿನ ಬೆಲಗೂರು ಗ್ರಾಮದ ಗಂಗಮ್ಮ ಭೀಮೋಜಪ್ಪ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಂಸಾಳೆ ಪ್ರದರ್ಶಿಸಿದರು.

ನಾಡು, ನುಡಿ, ದೇಶಾಭಿಮಾನ ಮೂಡಿಸುವಂಥ ಪಾತ್ರಗಳಲ್ಲೂ ವಿದ್ಯಾರ್ಥಿಗಳು ಮಿಂಚಿದರು. ಅಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿಯುಳ್ಳ ನಾಟಕ ಪ್ರದರ್ಶಿಸಿ ಮೆಚ್ಚುಗೆಗೂ ಪಾತ್ರರಾದರು. ಒಟ್ಟಾರೆ ಕಾರಂಜಿ ವಿದ್ಯಾರ್ಥಿಗಳ ಪ್ರತಿಭೆ ಹೊರತೆಗೆಯುವುದರ ಜತೆಗೆ ಅರಿವು ಮೂಡಿಸಿದ್ದು, ವಿಶೇಷವಾಗಿತ್ತು.

ವೈಯಕ್ತಿಕ ವಿಭಾಗದಲ್ಲಿ ಭಾಷಣ, ಧಾರ್ಮಿಕ ಪಠಣ, ಜನಪದ ಗೀತೆ, ಭಾವಗೀತೆ, ಭರತನಾಟ್ಯ, ಛದ್ಮವೇಷ, ಆಶುಭಾಷಣ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್ ಹಾಗೂ ಸಾಮೂಹಿಕ ವಿಭಾಗದಲ್ಲಿ ನೃತ್ಯ, ಸಂಗೀತ, ನಾಟಕ, ಕೋಲಾಟ, ಕಂಸಾಳೆ, ದೃಶ್ಯ ಕಲೆ ಸ್ಪರ್ಧೆಗಳು ನಡೆದವು.

ಶಾಸಕ ತಿಪ್ಪಾರೆಡ್ಡಿ ಉದ್ಘಾಟಿಸಿದರು. ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಮುಖ್ಯಸ್ಥ ಸಂದೀಪ್, ಜಿಲ್ಲಾ ಪಂಚಾಯಿತಿ ಸದಸ್ಯ ಗುರುಮೂರ್ತಿ, ಡಿಡಿಪಿಐ ರವಿಶಂಕರರೆಡ್ಡಿ, ಡಿವೈಪಿಸಿ ನಾಗಭೂಷಣ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಪ್ಪ, ಕಲೋತ್ಸವ ನೋಡಲ್ ಅಧಿಕಾರಿ ಎಚ್.ಗೋವಿಂದಪ್ಪ, ಇಲಾಖೆ ಅಧಿಕಾರಿಗಳಾದ ತಿಪ್ಪೇಸ್ವಾಮಿ, ನರಸಿಂಹಪ್ಪ, ವಿಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಅವರೂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು