ಶುಕ್ರವಾರ, ಮೇ 27, 2022
24 °C
ಮಾಜಿ ಸಚಿವ ಎಚ್. ಆಂಜನೇಯ ಹೇಳಿಕೆ

ಚಿತ್ರದುರ್ಗ | ಏಕ ಸಂಸ್ಕೃತಿ ಹೇರಿಕೆ: ಬಹುತ್ವ ಭಾರತಕ್ಕೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಸಂವಿಧಾನ ಹಾಗೂ ಸಂಸ್ಕೃತಿ ಬದಲಾವಣೆಯ ನಡೆಗಳಿಂದ ದೇಶಕ್ಕೆ ಹೆಚ್ಚಿನ ಅಪಾಯವಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಪಟ್ಟಣದ ತೇರುಬೀದಿಯಲ್ಲಿ ದಲಿತ ಸಂಘರ್ಷ ಸಮಿತಿಯು ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‍ರಾಂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಎಲ್ಲೆಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ. ಹೊಸ ಸಂಸ್ಕೃತಿಯನ್ನು ಸೃಷ್ಟಿಸುತ್ತೇವೆ ಎಂಬ ಭ್ರಮೆಯಲ್ಲಿ ಕೆಲವು ರಾಜಕೀಯ ಪಕ್ಷಗಳಿವೆ. ಇದರಿಂದಾಗಿ ದೇಶದಲ್ಲಿ ಆತಂಕದ ವಾತಾವರಣ ಇದೆ. ಇದರಿಂದ ಈಚೆಗೆ ಅಂಬೇಡ್ಕರ್ ಜಯಂತಿ ದೊಡ್ಡ ಪ್ರಮಾಣದಲ್ಲಿ ಜರುಗುತ್ತಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದಾಯಕ್ಕೆ ಸೇರಿದ 18 ಶಾಸಕರಿದ್ದರು. ಇದೀಗ 6ಕ್ಕೆ ಇಳಿದಿದೆ. ಸಮುದಾಯದ ಶಾಸಕರ ಸಂಖ್ಯೆ ಇಳಿಮುಖಕ್ಕೆ ಒಗ್ಗಟ್ಟಿನ ಕೊರತೆ ಕಾರಣವಾಗಿದೆ’ ಎಂದರು.

‘ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್‍ಸಿಪಿ, ಟಿಎಎಸ್‍ಪಿ ಯೋಜನೆ ಜಾರಿಗೊಳಿಸಿದೆ. ಈಗ ಈ ಹಣ ಅನ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ, ಭೋವಿ ಸೇರಿ ಇತರೆ ಜಾತಿಗಳು ಮೀಸಲಾತಿಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿವೆ’ ಎಂದು ಆರೋಪಿಸಿದರು.

ಪರಿಶಿಷ್ಟ ಜನಾಂಗದ ಪ್ರತಿ ಕುಟುಂಬಕ್ಕೆ ₹ 25 ಲಕ್ಷ ನೇರವಾಗಿ ನೀಡುವ ಯೋಜನೆ ಜಾರಿಯಾಗಬೇಕು. ಸಮುದಾಯದವರಿಗೆ ನೇರ ಸಾಲ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು. ಸರ್ಕಾರ ಇದಕ್ಕೆ ಒಪ್ಪದೇ ಇದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ‘ಮೊಳಕಾಲ್ಮುರು ಕ್ಷೇತ್ರದಲ್ಲಿ ಶೇ 78 ಜನರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ್ದಾರೆ. ಈಗಾಗಲೇ 40 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕ್ಷೇತ್ರದಲ್ಲಿರುವ ಶೇ 17 ಪರಿಶಿಷ್ಟ ವರ್ಗಗಳ ಅಧಿಕಾರಿಗಳು ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ಡಾ.ಬಿ. ಯೋಗೀಶ್‍ಬಾಬು, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಚಿಂತಕ ಡಾ.ಗಿರೀಶ್, ಕೆ.ಸಿ. ಅಕ್ಷತಾ ಮಾತನಾಡಿದರು.

ಸಿಪಿಐ ಜಿ.ಬಿ. ಉಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಟಿ. ಕೋಡಿ ಭೀಮರಾಯ, ಸದಸ್ಯರಾದ ಟಿ.ಮಂಜುಳಾ, ಸೈಯದ್‍ ಅನ್ವರ್, ಕೆ.ಪಿ. ತಿಪ್ಪೇಸ್ವಾಮಿ, ಮುಖಂಡರಾದ ವಿಜಯ್‍ಕುಮಾರ್, ಕುದಾಪುರ ತಿಪ್ಪೇಸ್ವಾಮಿ, ಸಮರ್ಥರಾಯ, ಮಹಮ್ಮದ್‍ ಯೂಸೂಫ್, ಬಿ.ಟಿ.ಶಿವಕುಮಾರ್, ಮರಿಪಾಲಯ್ಯ, ಮಲ್ಲೇಶ್, ಶ್ರೀಕಾಂತ್, ಓಬಳೇಶ್, ರಮೇಶ್, ಶಿವದತ್ತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.