ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ‘ಚೊಂಬು ನೆಗ್ಗಿತ್ತು, ಚಪ್ಪಲಿ ಬಿದ್ದಿತ್ತು, ಮುಖ ಹುದುಗಿತ್ತು...’

Last Updated 27 ಜುಲೈ 2021, 3:34 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಅಮ್ಮ ಬೇಲಿ ದಾಟಿ ಜೋಳದ ಹೊಲದೊಳಗೆ ಹೆಜ್ಜೆ ಹಾಕಿದರು. ಸಮೀಪದಲ್ಲೇ ನೆಗ್ಗಿದ ಚೊಂಬು ಕಾಣಿಸಿತು. ಮತ್ತೆರಡು ಹೆಜ್ಜೆ ಮುಂದಿಟ್ಟಾಗ ಚಪ್ಪಲಿ ಬಿದ್ದಿದ್ದು ಗೊತ್ತಾಯಿತು. ಆತಂಕದಿಂದಲೇ ಕಾಲಿಟ್ಟಾಗ ಅಕ್ಕನ ಮುಖ ಮಣ್ಣಿನಲ್ಲಿ ಹುದುಗಿತ್ತು. ಅಘಾತಗೊಂಡ ಅಮ್ಮ ಜೋರಾಗಿ ಕಿರುಚಿದರು...’

ಸಂತ್ರಸ್ತ ಬಾಲಕಿಯ ತಂಗಿ ಘಟನೆಯನ್ನು ಬಿಡಿಸಿಟ್ಟ ಪರಿ ಇದು. ಮನೆಯಿಂದ ನೂರು ಮೀಟರ್‌ ದೂರದಲ್ಲಿರುವ ಬೇಲಿ ಮರೆಯಲ್ಲಿ ಇಂತಹದೊಂದು ದುರಂತ ಸಂಭವಿಸಿತೇ ಎಂಬ ಸತ್ಯವನ್ನು ನಂಬಲು ಯಾರಿಗೂ ಸಾಧ್ಯವಾಗುತ್ತಿಲ್ಲ.

‘ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅಪ್ಪ–ಅಮ್ಮ ಮತ್ತು ನಾನು ಭರಮಸಾಗರ ಆಸ್ಪತ್ರೆಗೆ ತೆರಳಿದ್ದೆವು. ಅಕ್ಕ ಹಾಗೂ ತಮ್ಮ ಮಾತ್ರ ಮನೆಯಲ್ಲಿದ್ದರು. ಸಾಂಬಾರು ಮಾಡಲು ಮೊಟ್ಟೆ ತರುವಂತೆ ಅಕ್ಕ ಹೇಳಿದ್ದಳು. ಅಕ್ಕನಿಗೆ ಇಷ್ಟವಾದ ಜಿಲೇಬಿಯನ್ನು ಅಪ್ಪ ಖರೀದಿಸಿದ್ದರು. ಮನೆಗೆ ಬಂದಾಗ ಅಕ್ಕ ಇರಲಿಲ್ಲ. ನಾವೆಲ್ಲರೂ ಜಿಲೇಬಿ ತಿಂದು ಅಕ್ಕನಿಗೆ ಉಳಿಸಿದೆವು. ಬಹು ಹೊತ್ತಾದರೂ ಅಕ್ಕ ಬಾರದಿರುವುದರಿಂದ ಅಮ್ಮ, ಅಪ್ಪ ಹುಡುಕಲು ಹೊರಟರು. ಅಮ್ಮನೊಂದಿಗೆ ನಾನೂ ಹೋದೆ’ ಎಂದು ಘಟನೆಯನ್ನು ನೆನಪಿಸಿಕೊಂಡಳು.

‘ಅಕ್ಕನ ದೇಹವನ್ನು ಅಮ್ಮ ಬಾಚಿ ತಬ್ಬಿದಳು. ಒಬ್ಬಳೇ ಎತ್ತಿಕೊಂಡು ರಸ್ತೆಗೆ ತಂದಳು. ಅಳುವ ಧ್ವನಿ ಕೇಳಿ ನೆರೆಹೊರೆಯವರು ಧಾವಿಸಿದರು. ಬಾಯಿಂದ ಕಚ್ಚಿದ ಗಾಯಗಳು ಅಕ್ಕನ ದೇಹದ ಮೇಲಿದ್ದವು. ಮುಖವನ್ನು ಕೆಸರಲ್ಲಿ ಹುದುಗಿಸಿ ಕಾಲಿಂದ ತುಳಿಯಲಾಗಿತ್ತು. ಮುಖ ತೊಳೆದು ಉಸಿರು ಇದೆಯೇ ಎಂಬುದನ್ನು ಗಮನಿಸಿದೆವು. ತರಚಿತ ಮುಖದಿಂದ ರಕ್ತ ಸೋರುತ್ತಿತ್ತು...’ ಎಂದು ಕಣ್ಣೀರು ಸುರಿಸಿದಳು ಬಾಲಕಿ.

ಜಾಲಿ ಮರದಡಿ ಇಸ್ಪೀಟ್‌:ಬಾಲಕಿ ಕೊಲೆಯಾದ ಸ್ಥಳದಿಂದ ಅನತಿ ದೂರದಲ್ಲಿ ಜಾಲಿ ಮರಗಳಿವೆ. ಇಲ್ಲಿ ಇಸ್ಪೀಟ್‌ ಆಡಲು ಹಲವು ಗ್ರಾಮಗಳಿಂದ ಜನರು ಬರುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇಸ್ಪೀಟ್‌ ಆಡಲು ನಿತ್ಯ ಅನೇಕರು ಇಲ್ಲಿಗೆ ಬರುತ್ತಿದ್ದರು. ಹಲವು ಬಾರಿ ಪೊಲೀಸರು ದಾಳಿ ನಡೆಸಿದರೂ ಸೆರೆ ಸಿಕ್ಕಿರಲಿಲ್ಲ. ಗ್ರಾಮಸ್ಥರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಇಸ್ಪೀಟ್‌ ಆಡಲು ಕುಳಿತವರು ಇಲ್ಲಿಯೇ ಮದ್ಯ ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT