ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ: ತೋಟ ರಕ್ಷಿಸಲು ಟ್ಯಾಂಕರ್‌ ನೀರಿಗೆ ಮೊರೆ

ಬತ್ತಿಹೋದ ಕೊಳವೆ ಬಾವಿಗಳು; ಧರೆಗಿಳಿಯದ ಮಳೆರಾಯ, ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು
ಸಾಂತೇನಹಳ್ಳಿ ಸಂದೇಶ್ ಗೌಡ 
Published 13 ಮೇ 2024, 5:35 IST
Last Updated 13 ಮೇ 2024, 5:35 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಕೊಳವೆ ಬಾವಿಗಳಲ್ಲಿ ನಿಂತು, ನಿಂತು ಬರುವ ನೀರು. ಯಾವಾಗ ನೀರು ನಿಲ್ಲುವುದೋ ಎಂಬ ಆತಂಕ. ಹೊಸ ಕೊಳವೆ ಬಾವಿ ಕೊರೆಸಿದರೆ ನೀರು ಬರುತ್ತದೋ ಇಲ್ಲವೋ ಎಂಬ ಅನುಮಾನ. ಇದೆಲ್ಲದರ ನಡುವೆ ಟ್ಯಾಂಕರ್ ನೀರಿಗೆ ಮೊರೆ ಹೋಗುವ ಅನಿವಾರ್ಯತೆ’...

ತಾಲ್ಲೂಕಿನಲ್ಲಿ ಅಡಿಕೆ ತೋಟ ಹೊಂದಿರುವ ರೈತರ ಸದ್ಯದ ಪರಿಸ್ಥಿತಿ ಇದು.

ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದ ಭೀಕರ ಬರಗಾಲ ಆವರಿಸಿದೆ. ಅಡಿಕೆಯನ್ನೇ ನಂಬಿ ಬದುಕುತ್ತಿರುವ ರೈತರ ಪಾಡು ಹೇಳತೀರದಾಗಿದೆ. ಅಡಿಕೆ ಸೂಕ್ಷ್ಮ ಬೆಳೆಯಾಗಿದ್ದು, ಹೆಚ್ಚು ನೀರು ಬೇಕಾಗುತ್ತದೆ. ಒಂದು ವಾರ ನೀರಿಲ್ಲದಿದ್ದರೂ ತೋಟ ಒಣಗಿ ಹೋಗುವ ಅಪಾಯವಿರುತ್ತದೆ. ತಾಲ್ಲೂಕಿನಲ್ಲಿ ಪ್ರತಿ ಕುಟುಂಬಕ್ಕೂ ಕನಿಷ್ಠ ಎರಡು ಎಕರೆ ತೋಟವಿದ್ದು, ಸಾವಿರ ಅಡಿಕೆ ಮರಗಳಿವೆ. ಗರಿಷ್ಠ 10, 15, 25, 50 ಎಕರೆ ಅಡಿಕೆ ತೋಟ ಹೊಂದಿರುವ ದೊಡ್ಡ ರೈತರೂ ಇದ್ದಾರೆ. ಸಾವಿರ ಅಡಿಕೆ ಮರಗಳಿರುವ ತೋಟಕ್ಕೆ ಎರಡರಿಂದ ನಾಲ್ಕು ಕೊಳವೆಬಾವಿಗಳಿವೆ. ಈಗ ಶೇ 90ರಷ್ಟು ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ಶೇ 10ರಷ್ಟು ಕೊಳವೆಬಾವಿಗಳಲ್ಲಿ ಮಾತ್ರ ಸ್ವಲ್ಪ ನೀರಿದೆ. ಉಳಿದವರು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಬೋರ್‌ವೆಲ್‌ ಲಾರಿ ಮಾಲೀಕರಿಗೆ ಸುಗ್ಗಿ: ಎರಡು ವರ್ಷಗಳ ಹಿಂದೆ ಭಾರಿ ಮಳೆ ಬಂದಿದ್ದರಿಂದ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರಿತ್ತು. ಕಳೆದ ವರ್ಷ ಕಡಿಮೆ ಮಳೆ ಬಂದಿದ್ದರಿಂದ ಈ ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರಿಂದ ಬೋರ್ ವೆಲ್ ಲಾರಿಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬೋರ್‌ವೆಲ್‌ ಲಾರಿಗಳ ಮಾಲೀಕರು ದರ ಹೆಚ್ಚಿಸಿದ್ದಾರೆ. ಜಿಲ್ಲಾಡಳಿತ ದರ ನಿಗದಿ ಮಾಡಿದ್ದರೂ ಅದನ್ನು ಪಾಲಿಸುತ್ತಿಲ್ಲ. ಒಂದು ಅಡಿಗೆ ₹ 130 ರಿಂದ ₹ 140 ರವರೆಗೆ ಹಣ ವಸೂಲಿ ಮಾಡಲಾಗುತ್ತಿದೆ. ರೈತರು ಸಾಲ ಮಾಡಿ ಕೊಳವೆ ಬಾವಿ ಕೊರೆಯಿಸುತ್ತಾರೆ. ಕೊಳವೆಬಾವಿ ವಿಫಲವಾದಲ್ಲಿ ಕಣ್ಣೀರಿಡುತ್ತಾ ಹಣ ಕೊಡುವುದು ಸಾಮಾನ್ಯವಾಗಿದೆ. 

ಕೊಳವೆಬಾವಿಯಲ್ಲಿ ನೀರು ಇರುವ ಕೆಲವು ರೈತರು ಟ್ಯಾಂಕರ್‌ಗಳಿಗೆ ನೀರು ಮಾರಾಟ ಮಾಡುತ್ತಿದ್ದಾರೆ. 5 ಸಾವಿರ ಲೀಟರ್‌ನ ಒಂದು ಟ್ರ್ಯಾಕ್ಟರ್ ಟ್ಯಾಂಕರ್‌ಗೆ ₹ 300 ರಿಂದ ₹ 500 ರವರೆಗೆ ಹಣ ಪಡೆಯುತ್ತಾರೆ. ಕೆಲವು ರೈತರು ನೀರು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಮಳೆಯ ಕಣ್ಣಾಮುಚ್ಚಾಲೆ: ಮೇ ತಿಂಗಳು ಆರಂಭವಾದಾಗಿನಿಂದ ಅಲ್ಲಲ್ಲಿ ಮಳೆ ಬರುತ್ತಿದೆ. ತಾಲ್ಲೂಕಿನಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದರೂ ಮಳೆ ಬರುತ್ತಿಲ್ಲ. ರಾತ್ರಿ ವೇಳೆ ಮಿಂಚು, ಗುಡುಗು ಕಾಣಸಿಕೊಂಡರೂ ವರುಣ ದೇವ ಧರೆಗಿಳಿಯುತ್ತಿಲ್ಲ. ರೈತರು ಮಳೆಗಾಗಿ ಮಳೆಮಲ್ಲಪ್ಪ, ದೇವರಿಗೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಆದರೂ ಮಳೆರಾಯ ಕೃಪೆ ತೋರುತ್ತಿಲ್ಲ. ಇಳೆ ಹಸಿಯಾಗುವಂತೆ ಒಂದೇ ಒಂದು ಬಾರಿ ಮಳೆ ಸುರಿದರೂ ಕೊಳವೆ ಬಾವಿಗಳಿಗೆ ಜೀವ ಬರಲಿದೆ ಎಂಬ ಆಶಾಭಾವವನ್ನು ರೈತರು ವ್ಯಕ್ತಪಡಿಸಿದ್ದಾರೆ.

ಈ ವರ್ಷ ಹಿಂದೆಂದೂ ಕಾಣದ ಬರಗಾಲ ಬಂದಿದೆ. ಅಡಿಕೆ ತೋಟ ಉಳಿಸಿಕೊಳ್ಳುವುದೇ ಸವಾಲಾಗಿದೆ.

–ತಿಮ್ಮೇಶ್ ಲೋಕದೊಳಲು ರೈತ

ಎಲ್ಲರೂ ಅಡಿಕೆ ಬೆಳೆದಿರುವುದರಿಂದ ಕೊಳವೆಬಾವಿಗಳಲ್ಲಿ ನೀರಿಲ್ಲದಂತೆ ಆಗಿದೆ. ಹೆಚ್ಚು ಬೆಲೆ ಇದೆ ಎಂದು ಎಲ್ಲರೂ ಅಡಿಕೆ ತೋಟ ಮಾಡುವುದು ಸೂಕ್ತವಲ್ಲ.

– ರಂಗಪ್ಪ ಮಲ್ಲಾಡಿಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT