ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಾಡಿಗೆ ಕಾರು ಮಾರುತ್ತಿದ್ದ ವಂಚಕ ಸೆರೆ

₹ 70 ಲಕ್ಷ ಮೌಲ್ಯದ 12 ಕಾರು ವಶ, ಲಾಕ್‌ಡೌನ್‌ ಬಳಿಕ ಸಂಕಷ್ಟಕ್ಕೆ ಸಿಲುಕಿದ ಟ್ಯಾಕ್ಸಿ ಉದ್ಯಮ
Last Updated 2 ನವೆಂಬರ್ 2020, 13:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್ ಬಳಿಕ ಟ್ಯಾಕ್ಸಿ ಉದ್ಯಮ ಸಂಕಷ್ಟಕ್ಕೆ ಸಿಲುಕಿ ಸಾಲದ ಕಂತು ಪಾವತಿಸಲು ಕಷ್ಟಪಡುತ್ತಿದ್ದ ಕಾರು ಮಾಲೀಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ವಂಚಕನೊಬ್ಬ, ಮಾಸಿಕ ಬಾಡಿಗೆ ನೀಡುವುದಾಗಿ ನಂಬಿಸಿ ವಾಹನ ಪಡೆದು ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಭರಮಸಾಗರ ಠಾಣೆಯ ಪೊಲೀಸರು ಭೇದಿಸಿದ್ದಾರೆ.

ಕಾರು ಮಾಲೀಕರಿಗೆ ವಂಚಿಸುತ್ತಿದ್ದ ಚಿತ್ರದುರ್ಗ ತಾಲ್ಲೂಕಿನ ಕವಾಡಿಗರಹಟ್ಟಿಯ ಮಧು ಅಲಿಯಾಸ್‌ ಮಧುಸೂದನ್‌ (30) ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ವಂಚಿಸಿದ್ದ ಸುಮಾರು ₹ 70 ಲಕ್ಷ ಮೌಲ್ಯದ 12 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಎರಡು ಇನ್ನೋವಾ ಹಾಗೂ ಹತ್ತು ಸಡೆನ್‌ ಕಾರುಗಳಿವೆ.

‘ಎಸ್ಸೆಸ್ಸೆಲ್ಸಿ ವರೆಗೆ ಶಿಕ್ಷಣ ಪಡೆದಿರುವ ಮಧು, ಚಿತ್ರದುರ್ಗದಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಕಾರು ಸಾಲ ಹೊರೆಯಾಗಿ ವಂಚನೆಗೆ ಕೈಹಾಕಿದ್ದ. ಫೆಬ್ರುವರಿಯಿಂದ ಸೆಪ್ಟೆಂಬರ್‌ವರೆಗೆ ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಹಲವರಿಗೆ ವಂಚಿಸಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಬಳಿಕ ಅಸಹಾಯಕರಾಗಿದ್ದ ಕಾರು ಮಾಲೀಕರ ಮನೆಗೆ ಆರೋಪಿ ಭೇಟಿ ನೀಡುತ್ತಿದ್ದ. ದೊಡ್ಡ ಕಂಪನಿಯೊಂದರಲ್ಲಿ ಸಂಪರ್ಕವಿದ್ದು, ಬಾಡಿಗೆಗೆ ಕಾರು ಕೇಳುತ್ತಿದ್ದಾರೆಂದು ನಂಬಿಸಿದ್ದ. ₹ 25ರಿಂದ 30 ಸಾವಿರದವರೆಗೆ ಮಾಸಿಕ ಬಾಡಿಗೆ ನಿಗದಿ ಮಾಡಿದ್ದ. ಹೊರ ರಾಜ್ಯಕ್ಕೆ ತೆರಳುವಾಗ ಕಾರಿನ ದಾಖಲೆಯ ಅಗತ್ಯವಿದೆಯಂದು ಹೇಳಿ ವಾಹನ ನೋಂದಣಿ ಪುಸ್ತಕ (ಆರ್‌ಸಿ) ಪಡೆಯುತ್ತಿದ್ದ. ಆರ್‌ಟಿಒ ಕಚೇರಿಯ ಫಾರ್ಂ ನಂಬರ್‌ 29 ಹಾಗೂ 30ಕ್ಕೆ ಮಾಲೀಕರ ಸಹಿ ಪಡೆಯುತ್ತಿದ್ದ’ ಎಂದು ವಿವರಿಸಿದರು.

‘ಆರಂಭದ ಎರಡು ತಿಂಗಳು ಮಾಲೀಕರಿಗೆ ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದ. ಮನೆಯಲ್ಲೇ ಕುಳಿತರೂ ಕಾರು ಬಾಡಿಗೆ ಸಿಗುತ್ತಿದೆ ಎಂಬ ನೆಮ್ಮದಿ ಮಾಲೀಕರಲ್ಲಿತ್ತು. ಈ ಕಾರನ್ನು ಆರೋಪಿ ಕಡಿಮೆ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ. ಚಿತ್ರದುರ್ಗದ ಮಾಲೀಕರ ಕಾರನ್ನು ದಾವಣಗೆರೆಯಲ್ಲಿ ಹಾಗೂ ದಾವಣಗೆರೆ ನೋಂದಣಿಯ ಕಾರನ್ನು ಚಿತ್ರದುರ್ಗದಲ್ಲಿ ಮಾರಾಟ ಮಾಡುತ್ತಿದ್ದ. ಮಾಸಿಕ ಬಾಡಿಗೆ ಪಾವತಿ ವಿಳಂಬವಾಗುತ್ತಿದ್ದಂತೆ ಕಾರು ಮಾಲೀಕರು ಆರೋಪಿಯನ್ನು ಪ್ರಶ್ನಿಸಲು ಆರಂಭಿಸಿದ್ದರು’ ಎಂದರು.

‘ದುಬಾರಿ ಬೆಲೆಯ ಕಾರನ್ನು ಸೆಕೆಂಡ್‌ಹ್ಯಾಂಡ್‌ ಮೌಲ್ಯಕ್ಕೆ ಮಾರಾಟ ಮಾಡುವಾಗ ತನ್ನದೇ ವಾಹನವೆಂದು ನಂಬಿಸುತ್ತಿದ್ದ. ಫಾರ್ಂ ನಂಬರ್‌ 29 ಹಾಗೂ 30ಗೆ ಮಾಲೀಕರು ಹಾಕಿರುವ ಸಹಿ ತೋರಿಸಿ ಕಾನೂನುಬದ್ಧವಾಗಿದೆ ಎಂದು ಮೋಸ ಮಾಡುತ್ತಿದ್ದ. ಇದನ್ನು ಸತ್ಯವೆಂದು ಭಾವಿಸಿದ ಖರೀದಿದಾರರು ಮುಂಗಡವಾಗಿ ಲಕ್ಷಗಟ್ಟಲೆ ಹಣ ನೀಡುತ್ತಿದ್ದರು. ವಾಹನ ಅಧಿಕೃತವಾಗಿ ವರ್ಗಾವಣೆಯಾದ ಬಳಿಕ ಬಾಕಿ ಹಣ ನೀಡುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದ. ಚನ್ನಗಿರಿ, ಹೊಳಲ್ಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಕಾರು ಮಾರಾಟ ಮಾಡಿ ಸುಮಾರು ₹ 12.2 ಲಕ್ಷ ಹಣ ಪಡೆದಿದ್ದ’ ಎಂದು ಹೇಳಿದರು.

‘ಕಾರು ಬಾಡಿಗೆಗೆ ನೀಡಿ ವಂಚನೆಗೆ ಒಳಗಾದ ದಾವಣಗೆರೆಯ ಬಸವರಾಜ ಎಂಬುವರು ಭರಮಸಾಗರ ಠಾಣೆಯಲ್ಲಿ ಅ.31ರಂದು ದೂರು ದಾಖಲಿಸಿದ್ದರು. ತನಿಖೆಯ ವೇಳೆ ಇನ್ನೂ ಹಲವರಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಟ್ಯಾಕ್ಸಿ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಕಾರು ಮಾಲೀಕರು ಸಾಲದ ಮಾಸಿಕ ಕಂತು ಪಾವತಿಸಲು ಕಷ್ಟಪಡುತ್ತಿದ್ದರು. ಮಧುಸೂದನ್ ಇಂತಹವರನ್ನು ಹುಡುಕಿ ವಂಚನೆ ಮಾಡಿದ್ದಾನೆ’ ಎಂದರು.

ಪ್ರಕರಣದ ತನಿಖೆ ನಡೆಸಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ಬಾಲಚಂದ್ರ ನಾಯಕ, ಎಸ್‌ಐ ಟಿ.ರಾಜು ಹಾಗೂ ಡಿಎಆರ್‌ ಡಿವೈಎಸ್‌ಪಿ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT