ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ದೇವಾಲಯಕ್ಕೆ ನೀವೇ ಪೂಜಾರಿಗಳಾಗಿ: ಸಿದ್ದರಾಮಯ್ಯ

ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
Published 15 ಜನವರಿ 2024, 21:18 IST
Last Updated 15 ಜನವರಿ 2024, 21:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲ್ಲು ಒಡೆದು, ಗುಡಿ ಕಟ್ಟುವವರು ನೀವು, ವಿಗ್ರಹ ತರುವವರು ನೀವು, ಆದರೆ, ನಿಮಗೆ ಪೂಜೆಗೆ ಅವಕಾಶವಿಲ್ಲ. ಹಾಗಾಗಿ, ನೀವೇ ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೂದ್ರರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ, ನಾರಾಯಣಗುರುಗಳು ಅವುಗಳನ್ನು ತಿರಸ್ಕರಿಸಿ, ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅದೇ ಮಾರ್ಗವನ್ನು ನೀವೂ ಅನುಸರಿಸಬೇಕು’ ಎಂದು ತಿಳಿಸಿದರು.

‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ನಡೆಯುತ್ತಿದೆ. ಆದರೆ, ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಎಲ್ಲರೂ ಕಾಯಕ ಅಂದರೆ ಉತ್ಪಾದನೆ ಮಾಡಬೇಕು. ದಾಸೋಹ ಅಂದರೆ ಎಲ್ಲರಿಗೂ ವಿತರಿಸಬೇಕು ಎಂಬುದು ಶರಣರ ಆಶಯ. ನಮ್ಮ ಸರ್ಕಾರದ ಕಾರ್ಯಕ್ರಮಗಳು ಕೂಡ ಇದಕ್ಕೆ ಪೂರಕವಾಗಿವೆ’ ಎಂದು ಹೇಳಿದರು.

ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಒಪ್ಪಬಾರದು. ಅವಕಾಶ ಸಿಕ್ಕವರು ಮುಂದೆ ಬಂದರು. ಅವಕಾಶ ಇಲ್ಲದವರು ಹಿಂದುಳಿದರು. ಹಣೆಬರಹ ಎನ್ನುವುದು ಬೋಗಸ್. ಜಾತಿ-ಧರ್ಮದ ಆಧಾರದಲ್ಲಿ ಮನುಷ್ಯರನ್ನು ಮನುಷ್ಯರು ದ್ವೇಷಿಸುವುದು ಅಮಾನವೀಯವಾದುದು ಎಂದು ವಿಶ್ಲೇಷಿಸಿದರು.

ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂಬುದು ಸೇರಿದಂತೆ ಭೋವಿ ಸಮುದಾಯ ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ‘ತುಳಿತಕ್ಕೊಳದವರ ಪರ ಇರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಯಾರಾದರೂ ಬೈದು ಮಾತನಾಡಿದರೆ ಅಂಥವರ ವಿರುದ್ಧ ಎಸ್ಸಿ-ಎಸ್ಟಿ ಸಮುದಾಯ ಬೀದಿಗಿಳಿದು ಹೋರಾಟ ನಡೆಸಬೇಕು. ಈಗಾಗಲೇ ಏಕವಚನದಲ್ಲಿ ಮಾತನಾಡಿದ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದೇನೆ. ಮುಖ್ಯಮಂತ್ರಿಗೆ ನಾವೆಲ್ಲರೂ ಕಾವಲು ಆಗಬೇಕು’ ಎಂದು ಸಲಹೆ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕರಾದ ಎಂ.ಚಂದ್ರಪ್ಪ, ರಾಘವೇಂದ್ರ ಹಿಟ್ನಾಳ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಕಾಂತರಾಜ ವರದಿ ಸ್ವೀಕರಿಸಿ: ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ ಆಯೋಗದ ವರದಿಯನ್ನು ಸ್ವೀಕಾರ ಮಾಡಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಆಸರೆ ಆಗಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮನವಿ ಮಾಡಿದರು. ಬಸವತತ್ವದಡಿ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT