ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ಏರಿಕೆ: ರೈತರಲ್ಲಿ ಸಂತಸ

Last Updated 18 ಅಕ್ಟೋಬರ್ 2021, 3:49 IST
ಅಕ್ಷರ ಗಾತ್ರ

ಹೊಸದುರ್ಗ: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿರುವುದರಿಂದ ತಾಲ್ಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಾರುಕಟ್ಟೆಯಲ್ಲಿ 25 ಕೆ.ಜಿ ತೂಕದ ಬಾಕ್ಸ್‌ ಟೊಮೆಟೊ ಬೆಲೆ ₹ 1400ರವರೆಗೂ ಏರಿಕೆ ಆಗಿರುವುದರಿಂದ ರೈತರು ಟೊಮೆಟೊ ಪೋಷಣೆಗೆ ಮುಂದಾಗಿದ್ದಾರೆ.

2 ವರ್ಷಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೆಚ್ಚಾಗದಿದ್ದರಿಂದ ಈ ಬೆಳೆ ಬೆಳೆಯಲು ಖರ್ಚು ಮಾಡಿದ್ದ ಹಣವೂ ಬೆಳೆಗಾರರ ಕೈಸೇರುತ್ತಿರಲಿಲ್ಲ. ಇದರಿಂದ ಹಲವು ರೈತರು ಈ ಬೆಳೆ ಬೆಳೆಯುವ ಸಾಹಸಕ್ಕೆ ಹೋಗಿರಲಿಲ್ಲ. ಆದರೂ ಈ ಬಾರಿ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ನಿರಂತರವಾಗಿ ಟೊಮೆಟೊ ಬೆಳೆಯುತ್ತಲೇ ಬಂದಿ‌ದ್ದರು. ಪಾತಾಳಕ್ಕೆ ಕುಸಿದಿದ್ದ ಈ ಬೆಳೆಯ ದರ ಯಾವಾಗ ಏರಿಕೆ ಆಗುತ್ತದೆಯೋ ಎಂಬುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

15 ದಿನಗಳಿಂದ ಸುರಿದ ಭಾರಿ ಮಳೆಗೆ ಟೊಮೆಟೊ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಹಣ್ಣು ಕೊಳೆತುಹೋಗಿದ್ದು, ತೇವಾಂಶ ಹೆಚ್ಚಾಗಿರುವುದರಿಂದ ಬೆಳೆಯಲ್ಲಿ ಬರುತ್ತಿದ್ದ ಹೂವು ನಿಂತುಹೋಗಿದೆ. ಅತಿವೃಷ್ಟಿಯಿಂದ ಮಾರುಕಟ್ಟೆಗೆ ಬರುತ್ತಿದ್ದ ಟೊಮೆಟೊ ಹಣ್ಣಿನ ಅವಕ ಕುಸಿತವಾಗಿದೆ. ಇದರಿಂದ ನೆರೆಯ ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ 25 ಕೆ.ಜಿ ತೂಕದ ಟೊಮೆಟೊ ದರ ₹ 1100ದಿಂದ ₹ 1400ರವರೆಗೆ ಮಾರಾಟವಾಗಿದೆ. ಸ್ಥಳೀಯವಾಗಿ ಪ್ರತಿದಿನ ಬೆಳಿಗ್ಗೆ ಪಟ್ಟಣದಲ್ಲಿ ನಡೆಯುವ ತರಕಾರಿ ಮಾರುಕಟ್ಟೆಯಲ್ಲಿ 10 ಕೆ.ಜಿ ತೂಕದ ಟೊಮೆಟೊ ಕುಚ್ಚು ₹ 250 ರಿಂದ ₹ 300ಕ್ಕೆ ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಏರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧ ಸಿಂಪಡಣೆ, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಗಿಡದ ಬಳ್ಳಿ ಎತ್ತಿಕಟ್ಟುವಂತಹ ಬೆಳೆಯ ಉಪಚಾರದ ಕಾಯಕದಲ್ಲಿ ತೊಡಗಿದ್ದಾರೆ. ಉತ್ತಮ ಬೆಲೆ ಸಿಗುತ್ತಿರುವುದರಿಂದ ಕಾಯಿ ಸ್ವಲ್ಪ ಕೆಂಪಾಗುತ್ತಿದ್ದಂತೆ ಕೊಯ್ದು ಮಾರಾಟ ಮಾಡುತ್ತಿದ್ದಾರೆ. ‘ಈಗಿನಂತೆ ಬೆಲೆ ಸಿಕ್ಕರೆ 4 ತಿಂಗಳ ಬೆಳೆಯಾದ ಟೊಮೆಟೊದಲ್ಲಿ ಸಿಗುವಷ್ಟು ಆದಾಯ ಇನ್ಯಾವುದೇ ಬೆಳೆಯಲ್ಲಿ ಸಿಗುವುದಿಲ್ಲ’ ಎನ್ನುತ್ತಾರೆ ಬೆಳೆಗಾರ ಬೋಕಿಕೆರೆ ರಾಕೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT