ಬುಧವಾರ, ಮೇ 18, 2022
23 °C
4 ಕೇಂದ್ರಗಳಲ್ಲಿ ರಾಗಿ ಖರೀದಿಗೆ ನೋಂದಣಿ – ಟೋಕನ್‌ ನೀಡಿದ ಸಿಬ್ಬಂದಿ

ಬಗೆಹರಿಯದ ಸರ್ವರ್‌ ಸಮಸ್ಯೆ: ರಾಗಿ ಖರೀದಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ/ ಹೊಸದುರ್ಗ: ಬೆಂಬಲ ಬೆಲೆ ಯೋಜನೆಯಡಿ ಮೂರನೇ ಸುತ್ತಿನಲ್ಲಿ ಹೆಚ್ಚುವರಿ ರಾಗಿ ಖರೀದಿಗೆ ನೋಂದಣಿಗೆ ತಾಂತ್ರಿಕ ಸಮಸ್ಯೆ ಶನಿವಾರವೂ ಮುಂದುವರಿಯಿತು. ಆ ಕಾರಣಕ್ಕೆ ಖರೀದಿ ಕೇಂದ್ರಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ರೈತರು ಅಗತ್ಯ ದಾಖಲೆಗಳೊಂದಿಗೆ ಚಿತ್ರದುರ್ಗ, ಹೊಸದುರ್ಗ, ಚಿಕ್ಕಜಾಜೂರು ಹಾಗು ಶ್ರೀರಾಂಪುರದ ರಾಗಿ ಖರೀದಿ ಕೇಂದ್ರಗಳತ್ತ ಮುಂಜಾನೆ ಯಿಂದಲೇ ಜಮಾಯಿಸಿದರು. ಬೆಳಿಗ್ಗೆ 8ರ ಸುಮಾರಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ ಸರ್ವರ್‌ನಲ್ಲಿನ ತಾಂತ್ರಿಕ ಸಮಸ್ಯೆ ಪುನಃ ಕಂಡು ಬಂದಿದ್ದರಿಂದ ರೈತರಿಗೆ ಸಮಸ್ಯೆ ಆಗದಿರಲೆಂದು ಇಲಾಖೆಯಿಂದ ಕಳುಹಿಸಿರುವ ಪುಸ್ತಕದಲ್ಲಿ ಕೇಂದ್ರದ ಸಿಬ್ಬಂದಿ ಹೆಸರು ನೋಂದಣಿ ಮಾಡಿಕೊಂಡರು. ಈ ವೇಳೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಬಹುತೇಕ ರೈತರು ಕಚೇರಿಗೆ ಕರೆ ಮಾಡಿ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಇಬ್ಬರು ರೈತರು ಮಾತ್ರ ದಾಖಲೆ ನೀಡಿ ಪುಸ್ತಕದಲ್ಲಿ ನೋಂದಣಿ ಮಾಡಿಸಿದರು.

‘ಮೂರನೇ ಸುತ್ತಿನಲ್ಲಿ ರಾಜ್ಯಕ್ಕೆ 2 ಲಕ್ಷ ಕ್ವಿಂಟಲ್‌ ಖರೀದಿ ನಿಗದಿಗೊಳಿಸಲಾಗಿದೆ. ಶುಕ್ರವಾರದಿಂದ ತಾಂತ್ರಿಕ ಸಮಸ್ಯೆ ಎನ್ನುತ್ತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ
ನಡೆದರೆ ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿದೆ. ಶೀಘ್ರ ಸಮಸ್ಯೆ ಬಗೆಹರಿಸಬೇಕು’ ಎಂದು ರಾಗಿ ಬೆಳೆಗಾರರು ಆಗ್ರಹಿಸಿದರು.

‘ಹೊಸದುರ್ಗದ ರಾಗಿ ಖರೀದಿ ಕೇಂದ್ರದಲ್ಲಿ ಸಹ ಸರ್ವರ್ ತೊಂದರೆಯಿಂದ ರೈತರಿಗೆ ಟೋಕನ್ ನೀಡಿ ಕಳುಹಿಸಲಾಯಿತು. ಶುಕ್ರವಾರ ಏಕಕಾಲಕ್ಕೆ ಬಂದಿದ್ದ 500-600 ರೈತರು ದುಪ್ಪಟ್ಟು ಸಂಖ್ಯೆಯಲ್ಲಿ ಶನಿವಾರ ಬೆಳಿಗ್ಗೆ ಕೇಂದ್ರದ ಮುಂದೆ ನೋಂದಣಿಗೆ ಜಮಾಯಿಸಿದರು. ಅಗತ್ಯ ದಾಖಲೆ ಪಡೆದು ಬೆಳಿಗ್ಗೆ 11 ಗಂಟೆಯಿಂದ ರೈತರಿಗೆ ಟೋಕನ್‌ ನೀಡಿ ಕಳುಹಿಸಲಾಯಿತು. ಟೋಕನ್ ನಂಬರ್‌ಗೆ ಅನುಗುಣವಾಗಿ ಸೋಮವಾರ ನೋಂದಣಿ ಮಾಡಿಕೊಳ್ಳ ಲಾಗುವುದು’ ಎಂದು ಕೇಂದ್ರದ ಸಿಬ್ಬಂದಿ ತಿಳಿಸಿದರು.

‘ಶನಿವಾರ ಸಂಜೆ 6ರ ವೇಳೆಗೆ ಹೊಸದುರ್ಗ 700, ಶ್ರೀರಾಂಪುರ 900 ರೈತರ ನೋಂದಣಿಯಾಗಿದೆ. ಚಿಕ್ಕಜಾಜೂರಿನ ನೋಂದಣಿ
ಅಧಿಕಾರಿ ಸಂಪರ್ಕಕ್ಕೆ ಸಿಗದ ಕಾರಣ ನೋಂದಣಿ ಸಂಖ್ಯೆ ಲಭ್ಯವಾಗುತ್ತಿಲ್ಲ’ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.