ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿಹಟ್ಟಿ ಕರಿಯಮ್ಮ ದೇವಿಯ ರಥೋತ್ಸವ

Published 27 ಏಪ್ರಿಲ್ 2024, 15:44 IST
Last Updated 27 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಗೂಳಿಹಟ್ಟಿ ಗ್ರಾಮದ ಮೂಲ ದೇವತೆ ಕರಿಯಮ್ಮ ದೇವಿಯ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥವನ್ನು ವಿವಿಧ ಹೂ ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕಾರಗೊಳಿಸಲಾಗಿತ್ತು. ರಥದ ಸುತ್ತಲೂ ಬಾವುಟಗಳನ್ನು ಕಟ್ಟಿದ್ದು,  ಹೊಂಬಾಳೆ, ಬೃಹತ್ ಹಾರಗಳು ಪ್ರಮುಖ ಆಕರ್ಷಣೆಯಾಗಿದ್ದವು.

ರಥದ ಮೇಲೆ ತಾಯಿ ಕರಿಯಮ್ಮ ಮತ್ತು ಮುತ್ತಿನ ಮುಡಿಯಮ್ಮ ದೇವಿಯವರನ್ನು ಬಂಗಾರದ ಆಭರಣಗಳು ಮತ್ತು ಸುಗಂಧದ ಹೂಗಳಿಂದ ಅಲಂಕರಿಸಿ ಪ್ರತಿಷ್ಠಾಪಿಸಲಾಗಿತ್ತು. ವಿವಿಧ ಧಾರ್ಮಿಕ ವಾದ್ಯಗಳೊಂದಿಗೆ ಸೋಮನ (ಚೋಮ) ಕುಣಿತದ ಆಜ್ಞೆಯ ಮೇರೆಗೆ ರಥವನ್ನು ತೇರಿನ ಮನೆಯಿಂದ ದೊಡ್ಡಮ್ಮ ದೇವಿಯ ಸನ್ನಿಧಿವರೆಗೆ ಭಕ್ತರು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ರಥ ಎಳೆಯುವ ಸಮಯದಲ್ಲಿ ಬಾಳೆಹಣ್ಣು, ರಾಗಿ, ಜೋಳ, ದವಸ ಧಾನ್ಯಗಳು ಮಂಡಕ್ಕಿ, ಚಿಲ್ಲರೆ ನಾಣ್ಯಗಳನ್ನು ರಥಕ್ಕೆ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸಿದರು.

ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮದುವಣಿಗೆ ಶಾಸ್ತ್ರ, ಧ್ವಜಾರೋಹಣ, ಹೊಳೆಪೂಜೆ, ದೊಡ್ಡಭಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ, ಧೂಳೋತ್ಸವ, ಗಜೋತ್ಸವ, ಭಂಡಾರದ ತಟ್ಟೆ, ಎನ್.ಜಿ. ಹಳ್ಳಿಯ ಮುತ್ತಿನ ಮುಡಿಯಮ್ಮ ದೇವಿಯ ಆಗಮನ ಮತ್ತು ಕೂಡು ಭೇಟಿ ಉತ್ಸವಗಳು ನಡೆದಿವೆ.

ಹೂವಿನ ಉತ್ಸವ ಮತ್ತು ಬೆಲ್ಲದ ರಾಶಿ, ಅವಭೃತಸ್ನಾನ ಮತ್ತು ಮಹಾ ಮಂಗಳಾರತಿ, ಗಾವು ಮತ್ತು ಕಂಕಣ ವಿಸರ್ಜನೆ ಕಾರ್ಯಕ್ರಮಗಳು ನಡೆಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಕರಿಯಮ್ಮ ದೇವಿಯ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮದ ಭಕ್ತರು ಬೆಳಿಗ್ಗೆಯಿಂದಲೇ ಜಾತ್ರೆಗಾಗಿ ಬಂದಿದ್ದು, ಮುಂಜಾನೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT