ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಧರ್ಮ ಮಹಾ ಸಾಗರ ಇದ್ದಂತೆ: ವಚನಾನಂದ ಶ್ರೀ

ಮಲ್ಲಿಕಾರ್ಜು ಶ್ರೀಗಳ ಸ್ಮರಣೋತ್ಸವ, ಚಿನ್ಮೂಲಾದ್ರಿ ಚಿತ್ಕಳೆ ಸಂಪುಟ ಬಿಡುಗಡೆ
Published : 8 ಆಗಸ್ಟ್ 2024, 16:01 IST
Last Updated : 8 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ಹೊಳಲ್ಕೆರೆ: ಹಿಂದೂ ಧರ್ಮ ಮಹಾಸಾಗರವಿದ್ದಂತೆ ಎಂದು ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಒಂಟಿ ಕಂಬದ ಮಠದಲ್ಲಿ ಗುರುವಾರ ನಡೆದ ಮಲ್ಲಿಕಾರ್ಜುನ ಸ್ವಾಮೀಜಿ ಅವರ 30ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಧರ್ಮದ ಬಗ್ಗೆ ಜ್ಞಾನವಿಲ್ಲದವರು ಆ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ದೇಶದಲ್ಲಿನ ಬೌದ್ಧರು, ಜೈನರು, ಲಿಂಗಾಯತರು, ವೀರಶೈವರು ಎಲ್ಲರೂ ಹಿಂದೂಗಳೇ. ವೈದಿಕರು, ಅವೈದಿಕರು ಎಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ವೀರಶೈವ ಹಾಗೂ ಲಿಂಗಾಯತ ತತ್ವ ಬೇರೆಯಾಗಿದ್ದರೂ ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು ಎಂದು ಅವರು ಸಲಹೆ ನೀಡಿದರು.

‘ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಮುರುಘಾ ಮಠದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಸ್ವಾಮೀಜಿ ಕೊಡುಗೆ ಅಪಾರ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿದರು. ಅವರದು ಅಂತರ್ಮುಖಿ ಸಾಧನೆ. ಎಲ್ಲರಿಗೆ ನಿರಂತರವಾಗಿ ಸ್ಫೂರ್ತಿ ತುಂಬುತ್ತಿದ್ದರು’ ಎಂದು ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಸ್ಮರಿಸಿದರು.

‘ಮಲ್ಲಿಕಾರ್ಜುನ ಸ್ವಾಮೀಜಿ ಆಧುನಿಕ ಅಲ್ಲಮಪ್ರಭು ಇದ್ದಂತೆ. ಅವರು ಜ್ಞಾನಿಗಳು. ಸಮದರ್ಶಿತ್ವ ಉಳ್ಳವರು. ಸರ್ವ ಸಮಾಜಗಳ ಶ್ರೇಯಸ್ಸು ಬಯಸುವ ಶುದ್ಧ ಮನಸ್ಸಿನವರು. ಅವರು ಸಮಾಜಕ್ಕೆ ಬೆಳಕಿನ ರೀತಿ ಇದ್ದರು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಸ್ವಾಮೀಜಿ ಕುರಿತ ‘ಚಿನ್ಮೂಲಾದ್ರಿ ಚಿತ್ಕಳೆ’ ಸ್ಮರಣೋತ್ಸವ ಸಂಪುಟ ಬಿಡುಗಡೆ ಮಾಡಲಾಯಿತು. ಸಮುದಾಯ ಭವನದ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಬೆಂಗಳೂರು ಲಕ್ಷ್ಮಿ ಮುದ್ರಣಾಲಯದ ಅಶೋಕ್‌ ಕುಮಾರ್ ಅವರು ಶ್ರೀಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು.

ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘ ರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ, ಮೋಕ್ಷಪತಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಸವ ಜಯಚಂದ್ರ ಸ್ವಾಮೀಜಿ, ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ, ಬಸವ ಶಾಂತಲಿಂಗ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕೆ.ಎಲ್.ರಾಜಶೇಖರ್, ಎ.ವಿ.ಉಮಾಪತಿ, ಪಿ.ರಮೇಶ್, ಎಚ್.ಆನಂದಪ್ಪ, ಡಿ.ಎಸ್.ಸುರೇಶ್‌ಬಾಬು, ಪುರಸಭೆ ಸದಸ್ಯರು ಇದ್ದರು.

ಗಾನಯೋಗಿ ಪಂಚಾಕ್ಷರಿ ಬಳಗದವರು ವಚನ ಗೀತೆ ಹಾಡಿದರು. ಜಮುರಾ ಕಲಾವಿದರು ವಚನಗಳನ್ನು ಹಾಡಿದರು. ಬಸವಪ್ರಭು ಸ್ವಾಮೀಜಿ ಸ್ವಾಗತಿಸಿದರು. ಪಿ.ಎಚ್. ಮುರುಗೇಶ್ ನಿರೂಪಿಸಿದರು.

ಹಲವು ಮಠಾಧೀಶರು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಹಲವು ಮಠಾಧೀಶರು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಮಲ್ಲಿಕಾರ್ಜುನ ಶ್ರೀಗಳಲ್ಲಿ ದಾರ್ಶನಿಕತೆ ಇತ್ತು. ಅವರು ದೊಡ್ಡ ಪಂಡಿತರು. ಅವರಿಗೆ ಬಡವರ ಬಗ್ಗೆ ಕಾಳಜಿ ಇತ್ತು. ಅವರಿಗೆ ಬಸವತತ್ವದ ಮೇಲೆ ಅತೀವ ನಿಷ್ಠೆ ಇತ್ತು.
-ಗುರು ಮಹಾಂತ ಸ್ವಾಮೀಜಿ ಇಳಕಲ್
ಮಲ್ಲಿಕಾರ್ಜುನ ಶ್ರೀಗಳ ಬದುಕು ಮತ್ತು ಸಾಧನೆ ಅಪೂರ್ವವಾದುದು. ಶ್ರೀಗಳ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುವುದು.
-ಶಿವಯೋಗಿ ಸಿ. ಕಳಸದ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ
ಶ್ರೀಗಳು ಶಿಕ್ಷಣ ಪ್ರೇಮಿಗಳು. ಅವರು ಪೀಠ ಅಲಂಕರಿಸಿದಾಗ ಮಠದ ಪರಿಸ್ಥಿತಿ ಕಷ್ಟದಲ್ಲಿತ್ತು. ಮಠದ ಆರ್ಥಿಕ ಸ್ಥಿತಿಯನ್ನು ಬಹುವಾಗಿ ಸುಧಾರಿಸಿದರು. ಅವರ ಮಾತುಗಳು ಜ್ಯೋತಿರ್ಲಿಂಗ
. ಹೆಬ್ಬಾಳು ರುದ್ರೇಶ್ವರ ಸ್ವಾಮೀಜಿ
ಚಿನ್ಮೂಲಾದ್ರಿ ಚಿತ್ಕಳೆ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿ ಬೃಹತ್ ಕೃತಿ ಹೊರತಂದಿದ್ದೇನೆ. ಇದು ಮೊದಲ ಸಂಪುಟ. ಎರಡನೇ ಸಂಪುಟವನ್ನು ಹೊರತರುವ ಯೋಜನೆ ಇದೆ.
ಪ್ರೊ.ಲಕ್ಷ್ಮಣ ತೆಲಗಾವಿ ಇತಿಹಾಸ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT