ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿದೇವತೆಗಳ ನಾಡಲ್ಲಿ ವರಮಹಾಲಕ್ಷ್ಮಿ ಸಂಭ್ರಮ

ನವದುರ್ಗೆಯರು ಸೇರಿ ವಿವಿಧ ದೇಗುಲ, ಮನೆಗಳಲ್ಲಿ ವಿಶೇಷ ಪೂಜೆ
Last Updated 9 ಆಗಸ್ಟ್ 2019, 12:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಕ್ತಿದೇವತೆಗಳ ನಾಡಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ವಿವಿಧ ದೇಗುಲಗಳೂ ಸೇರಿ ಮನೆಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ವರಮಹಾಲಕ್ಷ್ಮಿ ದೇವಿಯನ್ನು ಅನೇಕ ಮನೆಯ ಪೂಜಾ ಗೃಹದಲ್ಲಿ ಪ್ರತಿಷ್ಠಾಪಿಸಿದ್ದರೆ, ಮತ್ತೆ ಕೆಲವರು ಹೊರಭಾಗದಲ್ಲಿ ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿದ್ದರು. ವಿವಿಧ ರೀತಿಯಲ್ಲಿ ವೈವಿಧ್ಯಮಯವಾಗಿ ಅಲಂಕರಿಸಿದ ನಂತರ ಪೂಜೆ ನೆರವೇರಿಸಲಾಯಿತು. ಹಬ್ಬದ ಅಂಗವಾಗಿ ಮಡಿಯಿಂದ ತಯಾರಿಸಿದ ವಿವಿಧ ಭಕ್ಷ್ಯಗಳ ನೈವೇದ್ಯ ಕೂಡ ಅರ್ಪಿಸಲಾಯಿತು.

ಬರಗೇರಮ್ಮಗೆ ವಿಶೇಷಾಲಂಕಾರ: ಇಲ್ಲಿನ ನವದುರ್ಗೆಯರ ದೇಗುಲಗಳಲ್ಲಿ ಪ್ರತಿ ಶುಕ್ರವಾರವೂ ವಿಶೇಷ ಅಲಂಕಾರದೊಂದಿಗೆ ಭಕ್ತರನ್ನು ಸೆಳೆಯುತ್ತಿರುವ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇಗುಲದಲ್ಲಿ ದೇವಿಗೆ ಹಬ್ಬದ ಅಂಗವಾಗಿ ವರಮಹಾಲಕ್ಷ್ಮಿ ರೂಪದಲ್ಲೇ ಅಲಂಕರಿಸಲಾಗಿತ್ತು. ವಿಶೇಷ ಪೂಜೆಗಳೂ ನೆರವೇರಿದವು.

ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಬರಗೇರಮ್ಮ ದೇವಿಯ ಕೆಳಭಾಗದಲ್ಲಿದ್ದ ಕಳಶಗಳನ್ನು ಬೆಳ್ಳಿ, ಬಂಗಾರ ವರ್ಣದ ಮುತ್ತುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಹಿಂಭಾಗದಲ್ಲಿ ₹ 2 ಸಾವಿರ, ₹ 500, ₹ 200 ಮುಖಬೆಲೆಯ ನೋಟುಗಳಿಂದ ಕಣ್ಮನ ಸೆಳೆಯುವಂತೆ ಸಿಂಗರಿಸಲಾಗಿತ್ತು. ವೈಭವೋಪೇತವಾಗಿ ಅಲಂಕರಿಸಿದ್ದ ದೇವತೆಯನ್ನು ನೋಡಲು ಸಾವಿರಾರು ಭಕ್ತರು ದೇಗುಲಕ್ಕೆ ಬಂದರು. ಇದೇ ವೇಳೆ ಪ್ರಸಾದ ವಿತರಿಸಲಾಯಿತು.

ಕಣಿವೆಮಾರಮ್ಮ ದೇಗುಲದಲ್ಲೂ ಪೂಜೆ: ನಗರದ ಕಣಿವೆಮಾರಮ್ಮ ದೇಗುಲದಲ್ಲೂ ಹಬ್ಬದ ಅಂಗವಾಗಿ ದೇವಿಗೆ ವಿವಿಧ ಬಗೆಯ ಪುಷ್ಪಗಳಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ಮೂರ್ತಿ ರೂಪದಲ್ಲಿ ಅಲಂಕರಿಸಲಾಗಿತ್ತು.

ಕೆಳಗೋಟೆಯ ಮುನ್ಸಿಪಲ್ ಕಾಲೊನಿಯ ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ರಾಜಬೀದಿ ದೊಡ್ಡಪೇಟೆಯಲ್ಲಿ ಇರುವ ಉಚ್ಚಂಗಿಯಲ್ಲಮ್ಮ ದೇವತೆ ದೇಗುಲದಲ್ಲೂ ಕೂಡ ಹಬ್ಬದ ಅಂಗವಾಗಿ ದೇವತಾ ಮೂರ್ತಿಯನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ತಿಪ್ಪಿನಘಟ್ಟಮ್ಮ, ಬನ್ನಿ ಮಹಾಕಾಳಿ, ಕುಕ್ಕವಾಡೇಶ್ವರಿ, ಗೌರಸಮುದ್ರ ಮಾರಮ್ಮ, ಚೌಡೇಶ್ವರಿ ಸೇರಿ ಎಲ್ಲ ಪ್ರಮುಖ ದೇಗುಲಗಳಲ್ಲಿ ಪುಷ್ಪಾಲಂಕಾರ, ಮಹಾಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.

‘ನೆರೆ-ಹೊರೆಯ ಮುತ್ತೈದೆಯರನ್ನು ಹಬ್ಬಕ್ಕೆ ಕರೆದು ಅರಿಶಿಣ-ಕುಂಕುಮ, ಎಲೆ, ಅಡಿಕೆ, ಹಣ್ಣುಗಳೊಂದಿಗೆ ಉಡಿ ತುಂಬುವುದು ಹಿಂದೂ ಸಂಸ್ಕೃತಿ, ಸಂಪ್ರದಾಯದಲ್ಲಿ ನಡೆದು ಬಂದ ವಾಡಿಕೆಯಾಗಿದೆ. ಅದರಂತೆ ಹಬ್ಬವನ್ನು ಆಚರಿಸಲಾಯಿತು’ ಎನ್ನುತ್ತಾರೆ ಗೃಹಿಣಿ ಸುನಂದಾ.

‘ಲಕ್ಷ್ಮಿ ಕೇವಲ ಸಂಪತ್ತಿನ ಅಧಿದೇವತೆ ಅಷ್ಟೇ ಅಲ್ಲ. ಸಂತಾನ, ಸೌಭಾಗ್ಯ, ಆರೋಗ್ಯ ಸೇರಿ ಇಷ್ಟಾರ್ಥ ಈಡೇರಿಕೆಯ ಜತೆಗೆ ಮನೆಯ ಸಕಲರನ್ನು ರಕ್ಷಿಸಲಿ ಎಂಬ ಸದುದ್ದೇಶವೂ ಹಬ್ಬದ ಆಚರಣೆಯ ವಿಶೇಷ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT