ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಂಪುರ: ಸ್ಥಳಾಂತರಕ್ಕೆ ಕಾದಿರುವ ಸಂತೆ

ಕೋವಿಡ್‌ ನಂತರ ಆರಂಭವಾಗಿ 3 ವಾರ ಕಳೆದರೂ ಕಳೆಗಟ್ಟದ ವಾರದ ಸಂತೆ
Last Updated 15 ಏಪ್ರಿಲ್ 2022, 2:48 IST
ಅಕ್ಷರ ಗಾತ್ರ

ಶ್ರೀರಾಂಪುರ: ಇಲ್ಲಿಯ ಗೂಳಿಹಳ್ಳಿ ರಸ್ತೆಯ ಸಂತೆ ಮೈದಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರ ನಡುವೆ ಕೋವಿಡ್‍ ಕಾರಣದಿಂದ ಸ್ಥಗಿತಗೊಂಡಿದ್ದ ವಾರದ ಸಂತೆ ಆರಂಭವಾಗಿ ಮೂರು ವಾರಗಳಾದರೂ ಇನ್ನೂ ಕಳೆಗಟ್ಟಿಲ್ಲ.

ಇಲ್ಲಿ ಪ್ರತಿ ಬುಧವಾರ ನಡೆಯುತ್ತಿದ್ದ ವಾರದ ಸಂತೆ ಕೋವಿಡ್‍ ಕಾರಣದಿಂದ ಲಾಕ್‍ಡೌನ್ ಸಮಯದಲ್ಲಿ ಸ್ಥಗಿತಗೊಂಡಿತ್ತು. ಮೂರು ವಾರಗಳ ಹಿಂದೆಯೇ ಸಂತೆ ನಡೆಸಲು ಅನುಮತಿ ನೀಡಿದ್ದರೂ ಪ್ರತಿ ಬುಧವಾರ ನಡೆಯುವ ಸಂತೆಗೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುಗಾದಿ ಹಬ್ಬದ ಸಂತೆಯೂ ಅಷ್ಟು ಬಿರುಸಾಗಿ ನಡೆಯಲಿಲ್ಲ.

ಲಾಕ್‍ಡೌನ್ ಸಮಯದಲ್ಲಿ ತರಕಾರಿ ಹಾಗೂ ಇತರ ವ್ಯಾಪಾರಿಗಳು ಹಳ್ಳಿಗಳಿಗೆ ತೆರಳಿ ಮನೆ ಮನೆಗೆ ಸರಕುಗಳನ್ನು ತಲುಪಿಸುತ್ತಿದ್ದರು. ಈಗಲೂ ಇದೇ ಸ್ಥಿತಿ ಮುಂದುವರಿದು ಮನೆಬಾಗಿಲಲ್ಲೇ ತರಕಾರಿ ಸೇರಿದಂತೆ ಇತರ ವಸ್ತುಗಳು ಸಿಗುತ್ತಿರುವುದರಿಂದ ಸಂತೆಗೆ ಜನರು ಬರುತ್ತಿಲ್ಲ.

‘ಶ್ರೀರಾಂಪುರ ಸುತ್ತಮುತ್ತ ಇರುವ ಕೆಲವು ಇಟ್ಟಿಗೆ ಘಟಕಗಳಲ್ಲಿ ಒಡಿಶಾದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತಿ ಬುಧವಾರ ರಜಾ ದಿನವಾಗಿದ್ದು, ಆ ಕೂಲಿ ಕಾರ್ಮಿಕರಿಂದ ಒಂದಿಷ್ಟು ವ್ಯಾಪಾರ ವಾರದ ಸಂತೆ ನಡೆಯುತ್ತದೆ. ಉಳಿದಂತೆ ಸಂತೆ ನೀರಸವಾಗಿದೆ. ಹಳ್ಳಿಗಳಲ್ಲಿ ವಾರದ ಸಂತೆ ಆರಂಭವಾಗಿರುವ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣವಾಗಿರ
ಬಹುದು. ವಾರದ ಸಂತೆ ಚೇತರಿಕೆ ಕಾಣಲು ಇನ್ನೂ 2-3 ತಿಂಗಳುಗಳಾದರೂ ಬೇಕು’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶ್ರೀನಿವಾಸಮೂರ್ತಿ.

ಸಂತೆ ಮೈದಾನದಲ್ಲಿ ಬಿಸಿಲು ಕಾಲದಲ್ಲಿ ದೂಳು ಹಾಗೂ ಮಳೆಗಾಲದಲ್ಲಿ ಕೆಸರಿನಲ್ಲೇ ವ್ಯಾಪಾರಿಗಳು ತಾಡಪಾಲುಗಳನ್ನು ಹಾಕಿ ಕುಳಿತು ವ್ಯಾಪಾರ ಮಾಡುವಂತಾಗಿದೆ. ಈಚೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಹಳ್ಳಿ ಸಂತೆ ಯೋಜನೆಯ ಅಡಿ ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಈಗಿರುವ ಸಂತೆಯನ್ನು ಆದಷ್ಟು ಬೇಗನೆ ನೂತನವಾಗಿ ನಿರ್ಮಿಸಿರುವ ಹಳ್ಳಿ ಸಂತೆ ಕಟ್ಟಡಕ್ಕೆ ಸ್ಥಳಾಂತರಿಸಿ, ಸಿ.ಸಿ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

*
ಸುತ್ತಮುತ್ತಲ ಹಳ್ಳಿಗಳಲ್ಲಿ ಬುಧವಾರದ ಸಂತೆ ಮತ್ತೆ ಆರಂಭವಾಗಿರುವ ಬಗ್ಗೆ ಇನ್ನೂ ಸರಿಯಾಗಿ ತಿಳಿದಂತಿಲ್ಲ. ವಾರದ ಸಂತೆ ಚೇತರಿಕೆ ಕಾಣಲು ಇನ್ನೂ ತಿಂಗಳುಗಳಾದರೂ ಬೇಕು.
-ಶ್ರೀನಿವಾಸ್ ಮೂರ್ತಿ, ತರಕಾರಿ ವ್ಯಾಪಾರಿ

*
ಸದ್ಯ ಇರುವ ಸಂತೆ ಮೈದಾನದಲ್ಲಿ ಶೌಚಾಲಯ ಇಲ್ಲ. ದೂಳು ಮತ್ತು ಕೆಸರಿನಲ್ಲಿ ಕುಳಿತು ವ್ಯಾಪಾರ ಮಾಡುವಂತಾಗಿದೆ. ಹಳ್ಳಿ ಸಂತೆ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಅನುಕೂಲವಾಗಲಿದೆ.
–ಗೌರಮ್ಮ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT