ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ದುಬಾರಿಯಾದ ತರಕಾರಿ; ಗ್ರಾಹಕರಿಗೆ ಬರೆ: ₹100 ಗಡಿ ತಲುಪಿದ ಟೊಮೆಟೊ

ಬೀನ್ಸ್‌, ಗೆಡ್ಡೆಕೋಸು ಬೆಲೆ ಏರಿಕೆ
Published 18 ಜೂನ್ 2024, 16:00 IST
Last Updated 18 ಜೂನ್ 2024, 16:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ಥಳೀಯ ಮಾರುಕಟ್ಟೆಗಳಲ್ಲಿ ಟೊಮೆಟೊ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಹೊರೆ ಬಿದ್ದಿದೆ. ಬೀನ್ಸ್‌, ಗೆಡ್ಡೆಕೋಸು, ಹರಿಸಿಮೆಣಸಿನಕಾಯಿ ದರ ಏರಿಕೆಯಾಗಿದ್ದು ಸಾಮಾನ್ಯ ಜನರು ಆತಂಕಕ್ಕೀಡಾಗಿದ್ದಾರೆ.

ಮಾರ್ಚ್‌ ವೇಳೆ ಜಿಲ್ಲೆಯಲ್ಲಿ ತೀವ್ರ ಬಿಸಿಲಿದ್ದ ಕಾರಣ ತರಕಾರಿ ಕೃಷಿ ಸಮರ್ಪಕವಾಗಿ ನಡೆದಿಲ್ಲ. ಹಾಕಿದ್ದ ಸಸಿ ಕೂಡ ಬಿಸಿಲಿಗೆ ಸುಟ್ಟು ಹೋದ ಪರಿಣಾಮ ಒಟ್ಟಾರೆ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ಈ ಬಾರಿ ಎಲ್ಲೆಡೆ ಹೆಚ್ಚು ಬಿಸಿಲಿದ್ದ ಕಾರಣ ಜಿಲ್ಲೆ ಮಾತ್ರವಲ್ಲದೇ ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಉಂಟಾಗಿದೆ.

‘ಇಡೀ ಮಾರುಕಟ್ಟೆ ಹುಡುಕಿದರೂ ತಾಜಾ ಟೊಮೆಟೊ ಸಿಗುತ್ತಿಲ್ಲ. ಉತ್ತಮ ಗುಣಮಟ್ಟದ ಟೊಮೆಟೊ ಕೂಡ ಚೆನ್ನಾಗಿಲ್ಲ. 2–3 ದಿನಗಳ ಹಿಂದೆ ತಂದಿರುವ ಟೊಮೆಟೊ ಮಾರಾಟ ಮಾಡಲಾಗುತ್ತಿದೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.

ಬೀನ್ಸ್‌ ಬೆಲೆ ತೀವ್ರ ಏರಿಕೆಯಾಗಿದ್ದು ಕೆ.ಜಿ ₹ 200ಕ್ಕೆ ಮಾರಾಟವಾಗುತ್ತಿದೆ. ಗೆಡ್ಡೆಕೋಸು ಕೂಡ ದುಬಾರಿಯಾಗಿದ್ದು ₹ 120ಕ್ಕೆ ಕೆ.ಜಿ ಮಾರಾಟ ಮಾಡಲಾಗುತ್ತಿದೆ. ಬೀಟರೂಟ್‌ ₹ 60 ಇದ್ದರೆ ಕ್ಯಾರೆಟ್‌ ಬೆಲೆ ₹ 80 ಇದೆ.

ಕಳೆದ ವಾರ ₹ 50ಕ್ಕೆಲ್ಲಾ ಕೆ.ಜಿ ಮೂಲಂಗಿ ದೊರೆಯುತ್ತಿದ್ದು ಆದರೆ ಈ ವಾರ ಮೂಲಂಗಿ ₹ 80ಕ್ಕೆ ಮಾರಾಟವಾಗುತ್ತಿದೆ. ಹಾಗಲಕಾಯಿ, ಹೀರೆಕಾಯಿ ₹ 80, ಆಲೂಗಡ್ಡೆ ₹ 40, ಸೀಮೆ ಬದನೆಕಾಯಿ ₹ 100, ತೊಂಡೆಕಾಯಿ ₹ 120ರಂತೆ ಮಾರಾಟವಾಗುತ್ತಿವೆ. ನಾಟಿ ಬೆಳ್ಳುಳ್ಳಿ ಹಾಗೂ ಶುಂಠಿ ಬೆಲೆ ₹200 ಇದೆ. ₹ 20ಕ್ಕೆ 3 ನಿಂಬೆಹಣ್ಣು ದೊರೆಯುತ್ತಿವೆ.

ಸೊಪ್ಪುಗಳ ಬೆಲೆಯಲ್ಲಿ ನಿಯಂತ್ರಣ ಕಂಡುಬಂದಿದ್ದು ಒಂದು ಕಟ್ಟು ಕೊತ್ತಂಬರಿ ಸೊಪ್ಪು ₹15, ಕೀರೆ, ಕಿಲ್‌ ಕೀರೆ ₹10, ಸಬ್ಬಸಿಗೆ, ಮೆಂತ್ಯೆ, ಪಾಲಕ್‌ ಸೊಪ್ಪು ₹10ಕ್ಕೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ರಾಯಲ್‌ ಗಾಲ ಸೇಬು ₹300, ಆಸ್ಟ್ರೇಲಿಯಾ ಸೇಬು ₹280, ಕಿತ್ತಳೆ ₹150, ದಾಳಿಂಬೆ ₹220, ಪಚ್ಚಬಾಳೆ ₹40, ಏಲಕ್ಕಿಬಾಳೆ  ₹60ರಂತೆ ಕೆ.ಜಿ ಮಾರಾಟವಾಗುತ್ತಿವೆ.

ಸೇವಂತಿಗೆ ಹೂವು ದುಬಾರಿ; ಹೂವುಗಳಲ್ಲಿ ಸೇವಂತಿಗೆ ಹೂವು ದುಬಾರಿಯಾಗಿದ್ದು ಪ್ರತಿ ಮಾರು ₹120ಕ್ಕೆ ಮಾರಾಟವಾಗುತ್ತಿದೆ. ಬಿಳಿ, ಹಳದಿ ಸೇವಂತಿಗೆ ಹೂವಿಗೆ ಬೇಡಿಕೆ ಇದೆ. ಪ್ರತಿ ಕೆ.ಜಿ ಸೇವಂತಿಗೆ ಹೂವು ₹ 800ರವರೆಗೂ ಮಾರಾಟವಾಗಿದೆ.

ಮಾರು ಮಲ್ಲಿಗೆ ಹೂವು ₹50–60, ಕನಕಾಂಬರ ₹60, ಸುಗಂಧರಾಜ ₹50, ಕಾಕಡ ₹60, ಕೆ.ಜಿ ಚೆಂಡು ಹೂವು ₹110ರ ವರೆಗೂ ಮಾರಾಟವಾಗುತ್ತಿವೆ. ಕೆ.ಜಿ ಗುಲಾಬಿ ಹೂವು ₹ 1,000ದವರೆಗೂ ಮಾರಾಟವಾಗುತ್ತಿದೆ.

‘ಗುಲಾಬಿ ಹೂವನ್ನು ಬೆಂಗಳೂರು ಮಾರುಕಟ್ಟೆಯಿಂದ ತರಿಸುತ್ತೇವೆ. ಉಳಿದ ಹೂವು ಚಳ್ಳಕೆರೆ, ಹಿರಿಯೂರು ಭಾಗದಿಂದ ಬರುತ್ತದೆ’ ಎಂದು ಹೂವಿನ ವ್ಯಾಪಾರಿ ಮೊಹಮ್ಮದ್‌ ತೌಫಿಕ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT