ಭಾನುವಾರ, ಸೆಪ್ಟೆಂಬರ್ 20, 2020
21 °C
ತ್ಯಾಜ್ಯ ವಿಲೇವಾರಿ ಘಟಕ ಅಸಮರ್ಪಕ ನಿರ್ವಹಣೆ

ಕಸ ಬೇರ್ಪಡಿಸುವ ಯಂತ್ರ ಸ್ಥಗಿತ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ನಗರದ ಹೊರವಲಯದ ಹಂಪಯ್ಯನಮಾಳಿಗೆ ಸಮೀಪದ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸ ಬೇರ್ಪಡಿಸುವ ಯಂತ್ರ ಅಧಿಕಾರಿಗಳು ಬಂದಾಗಷ್ಟೇ ಕಾರ್ಯನಿರ್ವಹಿಸುತ್ತದೆ. ಉಳಿದಂತೆ ಎಲ್ಲ ದಿನವೂ ಇದು ಪಾಳುಬಿದ್ದ ಸ್ಥಿತಿಯಲ್ಲಿ ಇರುತ್ತದೆ.

ಕಸವನ್ನು ಸರಿಯಾಗಿ ಬೇರ್ಪಡಿಸದೇ ಇರುವುದರಿಂದ ತ್ಯಾಜ್ಯದ ರಾಶಿ ಬಿದ್ದಿದೆ. ಅಸಮರ್ಪಕ ಹಾಗೂ ಅವೈಜ್ಞಾನಿಕ ನಿರ್ವಹಣೆಯ ಫಲವಾಗಿ ದುರ್ವಾಸೆ ಹೆಚ್ಚಾಗಿದೆ. ನೊಣ ಹಾಗೂ ನಾಯಿ ಕಾಟದಿಂದ ಹಂಪಯ್ಯನಮಾಳಿಗೆ, ಗೊಲ್ಲರಹಟ್ಟಿ, ಮದಕರಿಪುರದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಚಳ್ಳಕೆರೆ ರಸ್ತೆಯ ಹಂಪಯ್ಯನಮಾಳಿಗೆ ಸಮೀಪ ಚಿತ್ರದುರ್ಗ ನಗರಸಭೆ 37 ಎಕರೆ ವಿಸ್ತೀರ್ಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದೆ. 8 ವರ್ಷಗಳ ಹಿಂದೆ ಆರಂಭವಾದ ಈ ಘಟಕದಲ್ಲಿ ಸಾವಿರಾರು ಟನ್‌ ಕಸದ ರಾಶಿ ಬಿದ್ದಿದೆ. ನಗರದ 35 ವಾರ್ಡ್‌ಗಳ ಕಸವನ್ನು ಇಲ್ಲಿ ವಿಲೇವಾರಿ ಮಾಡಲಾಗುತ್ತದೆ. 20ಕ್ಕೂ ಹೆಚ್ಚು ಟ್ರ್ಯಾಕ್ಟರ್‌, ಟಿಪ್ಪರ್‌ ಹಾಗೂ ಲಾರಿಗಳು ಪ್ರತಿದಿನ ಇಲ್ಲಿ ಕಸ ಸುರಿಯುತ್ತಿವೆ.

ಕಸದ ಸಮರ್ಪಕ ವಿಲೇವಾರಿಗೆ ನಾಲ್ಕು ವರ್ಷಗಳ ಹಿಂದೆ ಕಸ ಬೇರ್ಪಡಿಸುವ ಯಂತ್ರವನ್ನು ಅಳವಡಿಸಲಾಗಿದೆ. ಯಂತ್ರ ಅಳವಡಿಸಿದ ಮೂರು ವರ್ಷಗಳ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸುಸ್ಥಿತಿಯಲ್ಲಿರುವ ಈ ಯಂತ್ರ, ಪರಿಶೀಲನೆಗೆ ಬರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಎದುರು ಮಾತ್ರ ಕಾರ್ಯನಿರ್ವಹಿಸುತ್ತದೆ.

ನೊಣ, ನಾಯಿ ಕಾಟ:

ಕಸ ವಿಲೇವಾರಿ ಘಟಕದಿಂದ ಒಂದು ಕಿ.ಮೀ ಅಂತರದಲ್ಲಿ ಹಂಪಯ್ಯನಮಾಳಿಗೆ ಹಾಗೂ ಗೊಲ್ಲರಹಟ್ಟಿ ಗ್ರಾಮಗಳಿವೆ. ನೊಣಗಳ ಕಾಟ ವಿಪರೀತವಾಗಿದ್ದು, ರೋಗ ಹರಡುವ ಭೀತಿಯಲ್ಲಿ ಜನ ಬದುಕುತ್ತಿದ್ದಾರೆ. ಮನೆಗಳ ಅಡುಗೆ ಕೋಣೆ, ಗೋಡೆ ಸೇರಿ ಎಲ್ಲೆಡೆ ನೊಣಗಳೇ ಕಾಣುತ್ತವೆ.

ಕೋಳಿ, ಕುರಿ ಮಾಂಸದ ತ್ಯಾಜ್ಯದ ವಿಲೇವಾರಿಗೆ ವೈಜ್ಞಾನಿಕ ನಿಯಮ ಅನುಸರಿಸುವುದು ಕಡ್ಡಾಯ. ದುರ್ವಾಸನೆ ಹರಡದಂತೆ ಭೂಮಿಯನ್ನು ಅಗೆದು ತ್ಯಾಜ್ಯ ಸುರಿದು ಮಣ್ಣು ಮುಚ್ಚಬೇಕು. ಆದರೆ, ಇದಕ್ಕೆ ನಿಯಮ ಪಾಲನೆಯಾಗುತ್ತಿಲ್ಲ. ಕಸದೊಂದಿಗೆ ಮಾಂಸದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಮಾಂಸ ತಿನ್ನಲು ಬರುವ ನಾಯಿಗಳ ಸಂಖ್ಯೆಯೂ ಏರಿಕೆಯಾಗಿದೆ.

ನಾಯಿಗಳ ಉಪಟಳಕ್ಕೆ ರೈತರು ಬೇಸತ್ತಿದ್ದಾರೆ. ನೀರು ಅರಸಿ ಜಮೀನುಗಳಿಗೆ ಬರುವ ನಾಯಿಗಳು, ಒಂಟಿಯಾಗಿ ಕೆಲಸ ಮಾಡುವ ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಮೇಕೆ, ಕುರಿಗಳ ಮೇಲೆ ದಾಳಿ ನಡೆಸಿ ಸಾಯಿಸಿದ ನಿದರ್ಶನಗಳು ಸಾಕಷ್ಟಿವೆ.

ಆವರಿಸಿಕೊಳ್ಳುತ್ತಿದೆ ಹೊಗೆ:

ಘಟಕದಲ್ಲಿ ಸುರಿದ ಕಸಕ್ಕೆ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗೆ ಹೊತ್ತಿಕೊಳ್ಳುವ ಬೆಂಕಿ ಹಲವು ದಿನ ನಿರಂತರವಾಗಿ ಉರಿಯುತ್ತದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಹೊಗೆ ಆವರಿಸಿಕೊಳ್ಳುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

‘ಕಸಕ್ಕೆ ಬೆಂಕಿ ಹಾಕಿ ಸುಡುತ್ತೇವೆ ಎಂಬ ತಪ್ಪು ಗ್ರಹಿಕೆ ಗ್ರಾಮಸ್ಥರಲ್ಲಿದೆ. ಹೀಗೆ ಕಸವನ್ನು ಸುಡಲು ಅವಕಾಶವಿಲ್ಲ. ಉಷ್ಣಾಂಶ ಹೆಚ್ಚಾದಂತೆ ಪ್ಲಾಸ್ಟಿಕ್‌ ಕರಗಿ ಬೆಂಕಿಯಾಗಿ ಪರಿವರ್ತನೆ ಹೊಂದುತ್ತದೆ. ಇದನ್ನು ಆರಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ಲಾಸ್ಟಿಕ್‌ ಬೇರ್ಪಡಿಸದ ಹೊರತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ’ ಎಂಬುದು ನಗರಸಭೆ ಅಧಿಕಾರಿಗಳ ಉತ್ತರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.