ಶುಕ್ರವಾರ, ಮೇ 7, 2021
24 °C

ವಿ.ವಿ. ಸಾಗರ ನೀರು ಹಂಚಿಕೆ ಜಟಾಪಟಿ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಭದ್ರಾ ನದಿಯ ನೀರು ವಿ.ವಿ. ಸಾಗರ ಜಲಾಶಯದ ಒಡಲು ತುಂಬುವ ಹೊತ್ತಿಗೆ ಜಿಲ್ಲೆಯಲ್ಲಿ ಹೊಸದೊಂದು ವಿವಾದ ಭುಗಿಲೆದ್ದಿದೆ. ಬೇಸಿಗೆ ಕಾಲಿಡುತ್ತಿದ್ದಂತೆ ನೀರು ಹಂಚಿಕೆ ವಿಚಾರ ರಾಜಕೀಯ ಸ್ವರೂಪ ಪಡೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಒಗ್ಗಟ್ಟು ತೋರಿದವರೇ ವಿರುದ್ಧ ನೆಲೆಯಲ್ಲಿ ನಿಂತಿದ್ದು, ಪರಸ್ಪರ ವೈರಿಗಳಂತೆ ವರ್ತಿಸುತ್ತಿದ್ದಾರೆ.

ಹಿರಿಯೂರು ತಾಲ್ಲೂಕಿನ ವಿ.ವಿ. ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವ ವಿಚಾರದಲ್ಲಿ ಮತ್ತೆ ಪರ–ವಿರೋಧ ಚರ್ಚೆಗಳು ಆರಂಭವಾಗಿವೆ. ಚಳ್ಳಕೆರೆ ತಾಲ್ಲೂಕು ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನದಿ ಪಾತ್ರದ ಜನರ ಬಾಯಾರಿಕೆ ನೀಗಿಸಲು ನೀರು ಹರಿಸುವಂತೆ ವಿಶ್ವೇಶ್ವರಯ್ಯ ಜಲನಿಗಮ ಒಪ್ಪಿಗೆ ನೀಡಿದೆ. ಇದಕ್ಕೆ ಹಿರಿಯೂರು ತಾಲ್ಲೂಕಿನ ವಿ.ವಿ. ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏ.14ರಿಂದ ನದಿಗೆ ನೀರು ಹರಿಸಲಾಗುತ್ತಿದೆ.

ಆಸರೆಯಾದ ಜಲಾಶಯ: ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಸಮೀಪದ ವಿ.ವಿ.ಸಾಗರ ಜಲಾಶಯವನ್ನು ವೇದಾವತಿ ನದಿಗೆ ನಿರ್ಮಿಸಲಾಗಿದೆ. ಇದು ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಭರ್ತಿಯಾಗಿದ್ದೇ ಅಪರೂಪ.

ಭದ್ರಾ ಮೇಲ್ದಂಡೆ ಯೋಜನೆಗೆ ಜಿಲ್ಲೆಯಲ್ಲಿ ಹೋರಾಟ ಆರಂಭವಾದ ಸಂದರ್ಭದಲ್ಲಿ ವಿ.ವಿ. ಸಾಗರಕ್ಕೆ ಭದ್ರಾ ಜಲಾಶಯದ ನೀರು ಹರಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಯಿತು. ಭದ್ರಾ ನೀರು ವಿ.ವಿ. ಸಾಗರ ಸೇರಿದರೆ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ರೈತರದ್ದು.

ಜಿಲ್ಲೆಯ ಅಂತರ್ಜಲ ಮಟ್ಟವೂ ಏರಿಕೆ ಆಗುತ್ತದೆ ಎಂಬ ಆಶಾಭಾವನೆಯೂ ಇದರ ಹಿಂದೆ ಇತ್ತು. ಯೋಜನೆಯನ್ನು ಸರ್ಕಾರ ಘೋಷಣೆ ಮಾಡಿದಾಗ ಜಿಲ್ಲೆಯ ಜನರು ಸಂಭ್ರಮಿಸಿದ್ದರು. ವೇದಾವತಿ ನದಿಯಲ್ಲಿ ನೀರು ಹರಿಯುವ ಆಸೆ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಜನರಲ್ಲಿ ಮೊಳಕೆಯೊಡೆದಿತ್ತು.

ನದಿ ನೀರು ಮರುಹಂಚಿಕೆ: ಯೋಜನೆಯ ಆರಂಭದಲ್ಲಿ ವಿ.ವಿ. ಸಾಗರ ಜಲಾಶಯಕ್ಕೆ ಪ್ರತಿ ವರ್ಷ ಐದು ಟಿಎಂಸಿ ಅಡಿ ನೀರು ಮೀಸಲಿಡಲು ತೀರ್ಮಾನಿಸಲಾಗಿತ್ತು. 2015ರಲ್ಲಿ ಬದಲಾದ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ನೀರು ಮರುಹಂಚಿಕೆ ಮಾಡಲಾಯಿತು. ಪ್ರತಿ ವರ್ಷ ಎರಡು ಟಿಎಂಸಿ ಅಡಿ ನೀರನ್ನು ವಿ.ವಿ. ಸಾಗರ ಜಲಾಶಯಕ್ಕೆ ಹರಿಸುವಂತೆ ನೀತಿ ರೂಪಿಸಲಾಯಿತು. ಚಳ್ಳಕೆರೆ ತಾಲ್ಲೂಕಿನ ನದಿ ಪಾತ್ರದ ಜನರಿಗೆ 0.25 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಯಿತು.

30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಎರಡು ಟಿಎಂಸಿ ಅಡಿ ನೀರು ಯಾವುದಕ್ಕೂ ಸಾಕಾಗದು ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಆಕ್ಷೇಪ. ಎಷ್ಟೇ ಕೋರಿಕೆ ಸಲ್ಲಿಸಿದರೂ ಜಲಾಶಯಕ್ಕೆ ಹರಿಸುವ ನೀರಿನ ಪ್ರಮಾಣವನ್ನು ಹೆಚ್ಚಿಸಲು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಎತ್ತಿನಹೊಳೆ ಯೋಜನೆಯ ನೀರು ಬರುವ ಭರವಸೆಯೂ ಸಿಕ್ಕಿಲ್ಲ.

ಮುಗಿಯದ ಕಾಮಗಾರಿ: ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಂಡು 13 ವರ್ಷಗಳೇ ಕಳೆದಿವೆ. ಆದರೆ, ಇನ್ನೂ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ತುಮಕೂರು ಶಾಖಾ ಕಾಲುವೆಯ ಮೂಲಕ ವಿ.ವಿ.ಸಾಗರ ಜಲಾಶಯಕ್ಕೆ ನೀರು ಹರಿಸಲು ಯೋಜನೆ ರೂಪಿಸಲಾಗಿದ್ದರೂ ಕಾಲುವೆ ನಿರ್ಮಾಣ ತೀರಾ ನಿಧಾನಗತಿಯಲ್ಲಿ ನಡೆಯುತ್ತಿದೆ. ಯೋಜನೆ ಅಪೂರ್ಣವಾಗಿದ್ದರೂ ಜಲಾಶಯಕ್ಕೆ ಮಾತ್ರ ಭದ್ರಾ ನೀರು ಸೇರುತ್ತಿದೆ.

ಭದ್ರಾ ಜಲಾಶಯದಿಂದ ಅಜ್ಜಂಪುರದವರೆಗಿನ ಸುಮಾರು 40 ಕಿ.ಮೀ. ಉದ್ದದ ನಾಲೆ ನಿರ್ಮಾಣ ಪೂರ್ಣಗೊಂಡಿದೆ. ಅಲ್ಲಿಂದ ಹೊಸದುರ್ಗ ಮಾರ್ಗವಾಗಿ ಬರುವ ನಾಲೆಯ ನಿರ್ಮಾಣ ಪ್ರಗತಿಯಲ್ಲಿದೆ. ನಾಲೆ ನಿರ್ಮಿಸಿ ವಿ.ವಿ. ಸಾಗರಕ್ಕೆ ನೀರು ತರುವುದು ಸುಲಭ ಸಾಧ್ಯವಿಲ್ಲ ಎಂಬುದನ್ನು ಅರಿತ ಸರ್ಕಾರ, ಪರ್ಯಾಯ ಮಾರ್ಗ ಕಂಡುಕೊಂಡಿದೆ. ವೇದಾವತಿ ನದಿಯ ಮೂಲಕ 2019ರಲ್ಲಿ ಮೊದಲ ಬಾರಿಗೆ ಜಲಾಶಯಕ್ಕೆ ನೀರು ಹರಿಸಿತು. 2020ರಲ್ಲಿಯೂ ನಿಗದಿಯಂತೆ ಭದ್ರಾ ನೀರು ಹರಿದುಬಂದಿದೆ.

ನೀರಲ್ಲಿ ಪಾಲು ಕೊಡಲಾಗದು

ಸುವರ್ಣಾ ಬಸವರಾಜ್‌

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಿ.ವಿ.ಸಾಗರ ಜಲಾಶಯಕ್ಕೆ ಸಿಕ್ಕಿರುವುದು ಎರಡು ಟಿಎಂಸಿ ಅಡಿ ನೀರು ಮಾತ್ರ. ಇದರಲ್ಲೇ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೆ ಪಾಲು ಕೊಡಲಾಗದು ಎನ್ನುತ್ತಾರೆ ಹಿರಿಯೂರು ರೈತರು.

30 ಟಿಎಂಸಿ ಅಡಿ ಸಾಮರ್ಥ್ಯದ ವಾಣಿವಿಲಾಸ ಜಲಾಶಯ 112 ವರ್ಷಗಳಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿದೆ. ಜಲಾಶಯದ ಒಳಹರಿವಿನಲ್ಲಿ ಕೊರತೆ ಉಂಟಾಗಿರುವುದಕ್ಕೆ ಇದೇ ಸಾಕ್ಷಿ. ಭದ್ರಾ ಮೇಲ್ದಂಡೆ ಯೋಜನೆಯ ನೀರು ಜಲಾಶಯಕ್ಕೆ ಆಸರೆಯಾಗಿದೆ. ಇದರಲ್ಲಿ ಉಳಿದ ತಾಲ್ಲೂಕಿಗೆ ಒದಗಿಸಿದರೆ ಕೃಷಿಗೆ ತೊಂದರೆ ಉಂಟಾಗುತ್ತದೆ ಎಂಬುದು ಹಿರಿಯೂರು ರೈತ ನಾಯಕರ ವಾದ.

ಜಲಾಶಯದಲ್ಲಿ ಕುಡಿಯುವ ನೀರಿಗೆ ಅರ್ಧ ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ವೇದಾವತಿ ನದಿಗೆ 0.25 ಟಿಎಂಸಿ ಅಡಿ ನೀರು ಹರಿಸಿದರೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ಒಂದು ಹನಿಯೂ ಸಿಗದು ಎಂಬುದು ರೈತರ ಆತಂಕ. ಸದ್ಯ ಎರಡು ನಾಲೆಗೆ ನಿತ್ಯ 618 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

‘ನೀರಾವರಿ ಉದ್ದೇಶಕ್ಕಾಗಿ ಜಲಾಶಯ ನಿರ್ಮಿಸಲಾಗಿದೆ ಎಂಬುದನ್ನು ಎಚ್.ಡಿ.ರೈಸ್ ಬರೆದಿರುವ ಮಾರಿಕಣಿವೆ ಪ್ರಾಜೆಕ್ಟ್ ಪುಸ್ತಕದಲ್ಲಿ ಉಲ್ಲೇಖವಿದೆ. ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಿಗೆ ನೀರು ಮೀಸಲಿಡಲು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಕನಿಷ್ಠ ಹತ್ತು ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಲಭ್ಯವಾದರೆ ಮಾತ್ರ ಎಲ್ಲರಿಗೂ ನೀರು ಸಿಗಲು ಸಾಧ್ಯ. ಇದಕ್ಕೆ ಹೋರಾಟ ರೂಪಿಸಬೇಕಿದ್ದು, ಎಲ್ಲರೂ ಕೈಜೋಡಿಸಬೇಕು’ ಎಂಬುದು ರೈತರ ಕೋರಿಕೆ.

ವಿ.ವಿ. ಸಾಗರದ ನೀರಲ್ಲಿ ಹಕ್ಕಿದೆ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಹರಿಸಲು ಅವಕಾಶವಿದೆ. ವಿ.ವಿ. ಸಾಗರಕ್ಕೆ ಭದ್ರಾ ಮೇಲ್ದಂಡೆ ನೀರು ಹರಿಸಲು ಶ್ರಮಿಸಿದ ಜಿಲ್ಲೆಯ ಜನರಿಗೆ ಜಲಾಶಯದ ಮೇಲೆ ಹಕ್ಕಿದೆ ಎಂಬ ವಾದವೂ ಇದೆ.

ವಿ.ವಿ. ಸಾಗರದ ನೀರನ್ನು ಹಿರಿಯೂರಿನ ಶಿಡ್ಲಯ್ಯನಕೋಟೆ ಬಳಿ ಸಂಗ್ರಹಿಸಿ ನಾರಾಯಣಪುರ ಎಡ ಮತ್ತು ಬಲ ಪೂರಕ ನಾಲೆಯ ಮೂಲಕ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ, ಟಿ.ಎನ್.ಕೋಟೆ ಹಾಗೂ ಮೀರಾಸಾಬಿಹಳ್ಳಿಯ ರಾಣಿಕೆರೆಗೆ ಹರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ ಇದಕ್ಕೆ ಸಾಕ್ಷಿಯಾಗಿದೆ.

ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸಿದ ಪರಿಣಾಮ ನೀರಿಗಾಗಿ ಹೋರಾಟ ಆರಂಭವಾಗಿದ್ದು ಇತಿಹಾಸ. ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ವಿ.ವಿ. ಸಾಗರಕ್ಕೆ ಹರಿಸಬೇಕು ಎಂದು ಮೊದಲು ಧ್ವನಿ ಎತ್ತಿದ್ದು ಚಳ್ಳಕೆರೆಯ ಜನರು. ಹೀಗಾಗಿ, ಜಲಾಶಯದಿಂದ ನೀರು ಕೇಳಲು ಯಾವ ಹಿಂಜರಿಕೆಯೂ ಇಲ್ಲ ಎನ್ನುತ್ತಾರೆ ರೈತರು.

ಮಳೆಗಾಲ ಹೊರತುಪಡಿಸಿ ಇನ್ನುಳಿದ ಎಲ್ಲ ದಿನ ಆಂಧ್ರಪ್ರದೇಶದ ಗಡಿ ಹಾಗೂ ವೇದಾವತಿ ನದಿ ತೀರದ 50ಕ್ಕೂ ಹೆಚ್ಚು ಗ್ರಾಮಗಳು ವಿ.ವಿ. ಸಾಗರದ ನೀರನ್ನೇ ಆಶ್ರಯಿಸಿವೆ. ನದಿ ತೀರದ ಜನರು ಹಾಗೂ ಜಾನುವಾರು ಬೇರೆಡೆಗೆ ಗುಳೆ ಹೋಗುವುದನ್ನು ತಪ್ಪಿಸಲು ನೀರು ಹರಿಸಬೇಕಿದೆ ಎಂಬ ವಾದ ಮುಂದಿಡುತ್ತಾರೆ.

ಹೊಸದುರ್ಗ ಬೇಡಿಕೆ ಮುನ್ನೆಲೆಗೆ

ವಿ.ವಿ. ಸಾಗರ ಜಲಾಶಯವನ್ನು ಹಿರಿಯೂರು ತಾಲ್ಲೂಕಿನಲ್ಲಿ ನಿರ್ಮಿಸಿದರೂ ಹೊಸದುರ್ಗ ತಾಲ್ಲೂಕಿನಲ್ಲಿ ಹಿನ್ನೀರು ಚಾಚಿಕೊಂಡಿದೆ. ಆದರೆ, ಹೊಸದುರ್ಗ ತಾಲ್ಲೂಕಿಗೆ ಜಲಾಶಯ ಉಪಯೋಗವಾಗಿದ್ದು ವಿರಳ.

ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೆ ನದಿ ಮೂಲಕ ನೀರು ಹರಿಸುವ ಚರ್ಚೆ ಆರಂಭವಾದ ಬಳಿಕ ತಮಗೂ ನೀರು ಕೊಡಿ ಎಂದು ಹೊಸದುರ್ಗ ತಾಲ್ಲೂಕಿನ ರೈತರು ಧ್ವನಿ ಎತ್ತಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್‌ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಚಳ್ಳಕೆರೆಗಷ್ಟೇ ನೀರು ಹಂಚಿಕೆ

ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಂಚಿಕೆಯನ್ನು ಮರುನಿಗದಿ ಮಾಡುವಾಗ ಚಳ್ಳಕೆರೆ ತಾಲ್ಲೂಕಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹರ್ಷಗೊಂಡ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ವೇದಾವತಿ ನದಿಯ ಹಲವೆಡೆ ಚೆಕ್‌ಡ್ಯಾಂ ನಿರ್ಮಿಸಿದ್ದಾರೆ. ನದಿಗೆ ನೀರು ಹರಿಸಿದರಷ್ಟೇ ಇವು ಭರ್ತಿಯಾಗುತ್ತವೆ.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಅಧಿಕೃತವಾಗಿ ನೀರು ಹಂಚಿಕೆಯಾಗಿಲ್ಲ. ಕುಡಿಯುವ ನೀರಿಗೆ ತೊಂದರೆ ಇರುವ ಕಾರಣಕ್ಕೆ ನದಿಗೆ ನೀರು ಹರಿಸಿದರೆ ಅನುಕೂಲ ಎಂಬ ಬೇಡಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಂಡಿಸಿದ್ದರು. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೂ 0.25 ಟಿಎಂಸಿ ಅಡಿ ನೀರು 2020ರಲ್ಲಿ ಹರಿದಿತ್ತು.

ಹಿರಿಯೂರು ತಾಲ್ಲೂಕಿನ 200ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾಗೂ ನೂರಕ್ಕೂ ಅಧಿಕ ಕೆರೆಗಳಿಗೆ ಮೊದಲು ವಿ.ವಿ.ಸಾಗರದ ನೀರು ಕೊಡಬೇಕು. ಎರಡು ಟಿಎಂಸಿ ಅಡಿ ನೀರಿನಲ್ಲಿ ಎಲ್ಲ ತಾಲ್ಲೂಕಿಗೆ ನೀರು ಹರಿಸಲು ಸಾಧ್ಯವಿಲ್ಲ.

–ಕಸವನಹಳ್ಳಿ ರಮೇಶ್, ರೈತ ಹೋರಾಟಗಾರ, ಹಿರಿಯೂರು

ನದಿಗೆ ನೀರು ಹರಿಸಿದರೆ ಚಳ್ಳಕೆರೆಗೆ ಮಾತ್ರವಲ್ಲ ಹಿರಿಯೂರು ತಾಲ್ಲೂಕಿಗೂ ಅನುಕೂಲವಾಗುತ್ತದೆ. 55 ಕಿ.ಮೀ ವ್ಯಾಪ್ತಿಯ ಹಲವು ಬ್ಯಾರೇಜ್‌ ತುಂಬಿಕೊಳ್ಳುತ್ತವೆ. ಚಳ್ಳಕೆರೆಗೆ ನಿಗದಿ ಆಗಿರುವ 0.25 ಟಿಎಂಸಿ ಅಡಿ ನೀರು ಪಡೆಯುತ್ತೇವೆ.

–ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು