ನೀರಿಗಾಗಿ ರೊಚ್ಚಿಗೆದ್ದ ಜಾನುಕೊಂಡ ಗ್ರಾಮಸ್ಥರು; ಪಿಡಿಒ ಕೂಡಿ ಹಾಕಿ ಪ್ರತಿಭಟನೆ

ಭಾನುವಾರ, ಏಪ್ರಿಲ್ 21, 2019
32 °C

ನೀರಿಗಾಗಿ ರೊಚ್ಚಿಗೆದ್ದ ಜಾನುಕೊಂಡ ಗ್ರಾಮಸ್ಥರು; ಪಿಡಿಒ ಕೂಡಿ ಹಾಕಿ ಪ್ರತಿಭಟನೆ

Published:
Updated:
Prajavani

ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಅನೇಕ ಗ್ರಾಮಸ್ಥರು ಈ ಹಿಂದೆ ಖಾಲಿ ಕೊಡ ಪ್ರದರ್ಶಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ, ಪಂಚಾಯಿತಿ ಮುಂಭಾಗ ಪ್ರತಿಭಟಿಸಿದ್ದರು. ಆದರೆ, ಬುಧವಾರ ಜಾನುಕೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ, ಪಿಡಿಒರನ್ನು ಕಚೇರಿಯೊಳಗೆ ಕೂಡಿ ಹಾಕಿ ಪ್ರತಿಭಟಿಸಿದರು.

ಬೆಳಿಗ್ಗೆಯೇ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮಸ್ಥರು ಜಮಾಯಿಸಿದರು. ನೀರಿನ ಸಮಸ್ಯೆ ತಲೆದೋರಿದ್ದು, ಪರಿಹರಿಸಿ ಎಂದು ಮನವಿ ಮಾಡಿದ್ದಾರೆ. ಇದಾದ ನಂತರ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ 3ಸಾವಿರ ಮಂದಿ ವಾಸಿಸುತ್ತಿದ್ದಾರೆ. ನಾಲ್ಕೈದು ತಿಂಗಳಿನಿಂದಲೂ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ನಿತ್ಯವೂ 2ರಿಂದ 3 ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದರು. ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿಸದ ಕಾರಣ 3 ದಿನದಿಂದಲೂ ಗ್ರಾಮಕ್ಕೆ ಟ್ಯಾಂಕರ್ ನೀರು ಸರಬರಾಜಾಗಿಲ್ಲ ಎಂದು ಅಳಲು ತೋಡಿಕೊಂಡರು. 

ಕಚೇರಿಯಲ್ಲಿದ್ದ ಸಿಬ್ಬಂದಿ ಎಷ್ಟೇ ಕೇಳಿಕೊಂಡರು ಬೀಗ ತೆಗೆಯದೇ ಪ್ರತಿಭಟಿಸಿರುವ ಗ್ರಾಮಸ್ಥರು ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ವಿಷಯ ತಿಳಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್, ಸ್ಥಳಕ್ಕೆ ಎಇಇ ಹಾಗೂ ಸಹಾಯಕ ಯೋಜನಾಧಿಕಾರಿಯನ್ನು ಕಳುಹಿಸಿದ್ದಾರೆ.

ಅಧಿಕಾರಿಗಳು ನೀರು ಸರಬರಾಜು ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದು ಕಚೇರಿಯ ಬೀಗ ತೆಗೆದಿದ್ದಾರೆ. ಒಂದು ವೇಳೆ ಗ್ರಾಮಕ್ಕೆ ನೀರಿನ ಟ್ಯಾಂಕರ್ ಬರದೇ ಇದ್ದಲ್ಲಿ ಲೋಕಸಭೆ ಚುನಾವಣಾ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜಪ್ಪ, ಮಾಜಿ ಸದಸ್ಯ ಎಚ್. ರಾಮಲಿಂಗಪ್ಪ, ಬಿ. ಹರೀಶ್, ಪಿ. ತಿಪ್ಪೇಸ್ವಾಮಿ ಸೇರಿ ಗ್ರಾಮದ ಮುಖಂಡರೂ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !