ಶುಕ್ರವಾರ, ಜೂನ್ 18, 2021
21 °C
ಹೊಳಲ್ಕೆರೆ ರೈತನಿಗೆ ತಟ್ಟಿದ ಕೇರಳ ಜಲಪ್ರಳಯದ ಬಿಸಿ

ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಳಲ್ಕೆರೆ: ತಾಲ್ಲೂಕಿನ ವಿಶ್ವನಾಥನಹಳ್ಳಿಯ ರೈತ ದೊಡ್ಡೊಟ್ಟೆಪ್ಪ ಕಲ್ಲಂಗಡಿ ಬೆಳೆದು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ 5 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿರುವ ಅವರು, ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಖರೀದಿಸಲು ಯಾರೂ ಬರದಿರುವುದರಿಂದ ಹಣ್ಣು ಹೊಲದಲ್ಲೇ ಕೊಳೆಯುತ್ತಿದೆ.

‘ಕಲ್ಲಂಗಡಿ ಬೆಳೆಯಲು ₹ 1.25 ಲಕ್ಷ ಖರ್ಚು ಮಾಡಿದ್ದೆ. ಪ್ರತಿ ಕೆ.ಜಿ ಗೆ ₹ 5,200 ರಂತೆ ಒಟ್ಟು ₹ 15,600 ಕೊಟ್ಟು ರಾಣೆಬೆನ್ನೂರಿನಿಂದ ‘ಅರ್ಕಮಣಿ’ ತಳಿಯ ಮೂರು ಕೆ.ಜಿ.ಕಲ್ಲಂಗಡಿ ಬೀಜ ತಂದು ಬಿತ್ತನೆ ಮಾಡಿದ್ದೆ. ಬೆಳೆ ಉತ್ತಮವಾಗಿ ಬಂದಿದ್ದರೂ ಖರೀದಿಸುವವರಿಲ್ಲದೆ ಹಣ್ಣು ಕೊಳೆಯುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

ಮಳೆಯ ಪ್ರಭಾವ:  ಸಾಮಾನ್ಯವಾಗಿ ಇಲ್ಲಿನ ಕಲ್ಲಂಗಡಿಯನ್ನು ಕೇರಳಕ್ಕೆ ಕಳಿಸಲಾಗುತ್ತದೆ. ಕೇರಳದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅಲ್ಲಿಗೆ ಹಣ್ಣು ಕಳಿಸುತ್ತಿಲ್ಲ. ಇದರಿಂದ ಹಣ್ಣು ಖರೀದಿಸಲು ಮಧ್ಯವರ್ತಿಗಳು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಇಲ್ಲಿನ ರೈತರು.

ಮಳೆಗಾಲದಲ್ಲೂ ಕಲ್ಲಂಗಡಿ ಪ್ರತಿ ಕೆ.ಜಿ.ಗೆ ₹ 10 ರವರೆಗೂ ಮಾರಾಟ ಆಗುತ್ತಿತ್ತು. ಖರೀದಿದಾರರು ಹೊಲಕ್ಕೇ ಬಂದು ಹಣ್ಣು ಖರೀದಿಸುತ್ತಿದ್ದರು. ಆದರೆ ಕೇರಳದಲ್ಲಿ ಹೆಚ್ಚು ಮಳೆ ಬಂದಿರುವುದರಿಂದ ಹಣ್ಣು ಖರೀದಿಗೆ ಯಾರೂ ಬರುತ್ತಿಲ್ಲ. 15 ದಿನಗಳ ಹಿಂದೆಯೇ ಹಣ್ಣು ಕಟಾವಿಗೆ ಬಂದಿತ್ತು. ಈಗ ಕೊಳೆಯುವ ಹಂತಕ್ಕೆ ಬಂದಿದೆ ಎಂದು ರೈತರು ಹೇಳುತ್ತಾರೆ.

‘ಈಗ ಮಳೆಗಾಲವಾಗಿದ್ದು, ಚಳಿ ಹೆಚ್ಚಿರುವುದರಿಂದ ನಮ್ಮ ಕಡೆಯ ಜನ ಕಲ್ಲಂಗಡಿ ತಿನ್ನುವುದಿಲ್ಲ. ಕಲ್ಲಂಗಡಿ ತೆಗೆದುಕೊಂಡು ಹೊಳಲ್ಕೆರೆ, ಹೊಸದುರ್ಗಕ್ಕೆ ಹೋದರೆ ವಾಹನದ ಬಾಡಿಗೆಯೂ ಬರುವುದಿಲ್ಲ. ಇದರಿಂದ ಹಣ್ಣನ್ನು ಕಟಾವು ಮಾಡದೆ ಬಳ್ಳಿಯಲ್ಲೇ ಬಿಟ್ಟಿದ್ದೇವೆ’ ಎಂದು ಕೆ.ಎನ್.ದೊಡ್ಡೊಟ್ಟೆಪ್ಪ ಹೇಳಿದರು.

ಉತ್ತಮ ಬೆಲೆ ಸಿಕ್ಕಿದ್ದರೆ ಕನಿಷ್ಠ ₹ 3 ಲಕ್ಷ ಹಣ ಸಿಗುತ್ತಿತ್ತು. ಖರ್ಚು ಕಳೆದು ಲಾಭವೂ ಸಿಗುತ್ತಿತ್ತು. ಆದರೆ ಈಗ ನಯಾಪೈಸೆ ಸಿಕ್ಕಿಲ್ಲ. ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು