ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಅಘೋಷಿತ ಲಾಕ್‍ಡೌನ್‌: ಕಲ್ಲಂಗಡಿ ಬೆಳೆಗಾರ ಕಂಗಾಲು

4 ಎಕರೆ ಕೆಂಪುಮಣ್ಣಿನ ಪ್ರದೇಶಕ್ಕೆ 50 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆದ ಕಲ್ಲಂಗಡಿ ಬೆಳೆ
Last Updated 24 ಏಪ್ರಿಲ್ 2021, 3:57 IST
ಅಕ್ಷರ ಗಾತ್ರ

ಚಳ್ಳಕೆರೆ: ಕಲ್ಲಂಗಡಿ ಹಣ್ಣಿನ ಬೆಳೆಗೆ ಬೇಸಿಗೆಯಲ್ಲಿ ಭಾರಿ ಬೇಡಿಕೆ ಇರುವುದರಿಂದ ಉತ್ತಮ ಬೆಲೆ ದೊರಕುವ ನಿರೀಕ್ಷೆಯಲ್ಲಿದ್ದ ರೈತರೊಬ್ಬರು ಕೊರೊನಾ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ದಿಢೀರನೆ ‘ಅಘೋಷಿತ ಲಾಕ್‌ಡೌನ್‌’ ಜಾರಿಗೊಳಿಸಿರುವುದರಿಂದ ಕಂಗಾಲಾಗಿದ್ದಾರೆ.

ತಾಲ್ಲೂಕಿನ ಸೂರನಹಳ್ಳಿ ಗ್ರಾಮದ ರೈತ ನರಸಿಂಹಪ್ಪ, ಪಾರಂಪರಿಕ ಹಾಗೂ ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಮಲ್ಚಿಂಗ್ ಪೇಪರ್ ವಿಧಾನದ ಮೂಲಕ 4 ಎಕರೆ ಕೆಂಪುಮಣ್ಣಿನ ಪ್ರದೇಶಕ್ಕೆ 50 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಿ ಕಲ್ಲಂಗಡಿಯನ್ನು ಉತ್ತಮ ಇಳುವರಿಯಲ್ಲಿ ಬೆಳೆದಿದ್ದರು.

ಕಲ್ಲಂಗಡಿ ದುಂಡಾದ ಗಾತ್ರ ಹೊಂದಿದ್ದು, ಪ್ರತಿ ಹಣ್ಣು ಕನಿಷ್ಠ 3 ಕೆ.ಜಿ.ಯಿಂದ 12–13 ಕೆ.ಜಿ. ವರೆಗೂ ತೂಕ ಬಂದಿದೆ. ಬೆಳೆ ಚೆನ್ನಾಗಿ ಬಂದಿದ್ದರಿಂದ ತುಮಕೂರು ಮತ್ತು ಸ್ಥಳೀಯ ವ್ಯಾಪಾರಸ್ಥರು ಬೆಳೆಗಾರರ ಹೊಲಕ್ಕೆ ಹೋಗಿ ಕೆ.ಜಿ.ಗೆ ₹ 8ರಿಂದ ₹ 9ರಂತೆ ಎರಡು ಬಾರಿ ಹಣ್ಣನ್ನು ಖರೀದಿ ಮಾಡಿದ್ದರು. ಬೆಳೆಯಿಂದ ₹ 2 ಲಕ್ಷ ಆದಾಯ ಪಡೆದಿದ್ದರು. ಲಾಕ್‍ಡೌನ್ ಪರಿಣಾಮ ಖರೀದಿದಾರರು ಕರೆ ಸ್ವೀಕರಿಸುತ್ತಿಲ್ಲ.

‘ಕಟಾವಿಗೆ ಬಂದಿರುವ 30 ಟನ್ ಕಲ್ಲಂಗಡಿ ಹಣ್ಣು ಬಳ್ಳಿಯಲ್ಲೇ ಇದೆ. ಎರಡು ಟನ್ ಕಿತ್ತು ಹೊಲದಲ್ಲಿ ರಾಶಿ ಹಾಕಲಾಗಿದೆ. ಬೇಸಾಯ, ಗೊಬ್ಬರ, ಕೂಲಿ, ಡ್ರಿಪ್ ಹಾಗೂ ಮಲ್ಚಿಂಗ್ ಸೇರಿ ₹ 6 ಲಕ್ಷ ಬೆಳೆಗೆ ಖರ್ಚು ಮಾಡಿದ್ದೇನೆ. ಇದರಲ್ಲಿ ₹ 2 ಲಕ್ಷ ಮಾತ್ರವೇ ಬಂದಿದೆ. ಮುಂದಿನ ದಾರಿ ತೋಚದಾಗಿದೆ’ ಎಂದು ಬೆಳೆಗಾರ ನರಸಿಂಹಪ್ಪ ಅಳಲು ತೋಡಿಕೊಂಡರು.

‘ಲಾಕ್‍ಡೌನ್‍ನಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್‌ಅನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು’ ಎಂದು ರೈತ ಮುಖಂಡ ಬೇಡರೆಡ್ಡಿಹಳ್ಳಿ ವೀರಣ್ಣ ಒತ್ತಾಯಿಸಿದರು.

ಮಾರಾಟ ಮಾಡಲು ಮನವಿ: ‘ಹುಲಿಕುಂಟೆ, ರಾಮಜೋಗಿಹಳ್ಳಿ, ಬುಕ್ಕಂಬೂದಿ, ಪುರ್ಲೆಹಳ್ಳಿ, ಸಾಣಿಕೆರೆ, ಜಾಜೂರು, ತಳಕು ಮುಂತಾದ ಗ್ರಾಮದಲ್ಲಿ ಕಲ್ಲಂಗಡಿ 160 ಹಾಗೂ ಕರಬೂಜ 80 ಹೆಕ್ಟೇರ್ ಸೇರಿ ತಾಲ್ಲೂಕಿನಲ್ಲಿ ಒಟ್ಟು 240 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣುಗಳನ್ನು ಉತ್ತಮವಾಗಿ ಬೆಳೆಯಲಾಗಿದೆ. ಈಗ ಕೊರೊನಾ ಎರಡನೇ ಅಲೆ ವ್ಯಾಪಿಸಿದೆ. ಲಾಕ್‍ಡೌನ್ ಮಾದರಿಯ ನಿರ್ಬಂಧ 3-4 ತಿಂಗಳು ಮುಂದುವರಿಯುವ ಸಾಧ್ಯತೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರೆ ತೊಂದರೆಯಾಗುತ್ತದೆ. ಹಾಗಾಗಿ ಫಲಕ್ಕೆ ಬಂದ ಬೆಳೆಯನ್ನು ಕೂಡಲೇ ಕಟಾವ್ ಮಾಡಿ ಸ್ಥಳೀಯವಾಗಿ ಮಾರಾಟ ಮಾಡಬೇಕು’ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT